
ನವದೆಹಲಿ(ಅ. 14): ಪಾಕಿಸ್ತಾನದ 'ದ ಡಾನ್'(The Dawn) ದಿನಪತ್ರಿಕೆ ಈಗ ದೊಡ್ಡ ಸುದ್ದಿಯಲ್ಲಿದೆ. ಪಾಕಿಸ್ತಾನದ ಸೇನೆ ಮತ್ತು ಸರಕಾರದ ಮಧ್ಯೆ ಬಿರುಕು ಇದೆ ಎಂದು ಪತ್ರಿಕೆಯ ಅಂಕಣಕಾರ ಸಿರಿಲ್ ಅಲ್ಮೇಡಾ ಅವರು ಸಾಕ್ಷಿ ಸಮೇತ ವರದಿ ಪ್ರಕಟಿಸಿದ್ದು ಪಾಕಿಸ್ತಾನಕ್ಕೆ ಇರಿಸುಮುರುಸು ಉಂಟು ಮಾಡಿದೆ. ಗೋವಾ ಮೂಲದವರೆನ್ನಲಾದ ಸಿರಿಲ್ ಅಲ್ಮೇಡಾ ಅವರನ್ನು ಪಾಕಿಸ್ತಾನದಲ್ಲಿ ದಿಗ್ಬಂಧನದಲ್ಲಿಡಲಾಗಿದೆ. ಈ ವೇಳೆ ಡಾನ್ ದಿನಪತ್ರಿಕೆಯ ಮೂಲ ಹುಡುಕಿಕೊಂಡು ಹೋದಾಗ ಅದಕ್ಕೆ ಭಾರತ ಮತ್ತು ಕೇರಳದ ಕನೆಕ್ಷನ್ ಇರುವುದು ತಿಳಿದುಬಂದಿದೆ. ಡಾನ್ ಪತ್ರಿಕೆಯ ಮೊದಲ ಸಂಪಾದಕರು ಪೋಥಾನ್ ಜೋಸೆಫ್. 1941ರಲ್ಲಿ ದಿಲ್ಲಿಯ ದರ್ಯಾಗಂಜ್'ನಲ್ಲಿ ಮೊಹಮ್ಮದ್ ಅಲಿ ಜಿನ್ನಾ ಅವರು ತಮ್ಮ "ಮುಸ್ಲಿಂ ಲೀಗ್" ಪಕ್ಷಕ್ಕಾಗಿ "ದಿ ಡಾನ್" ಎಂಬ ವಾರಪತ್ರಿಕೆಯನ್ನು ಆರಂಭಿಸಿದರು. ಒಂದು ವರ್ಷದ ಬಳಿಕ ಅದನ್ನು ದಿನಪತ್ರಿಕೆಯನ್ನಾಗಿಸಿದರು. ಅಲ್ಲಿಯವರೆಗೆ ಜಿನ್ನಾ ಅವರೇ ಆ ವಾರಪತ್ರಿಕೆಯ ಸಂಪಾದಕರಾಗಿದ್ದರು. ದಿನಪತ್ರಿಕೆಯಾದ ಬಳಿಕ ಅದರ ಮೊದಲ ಸಂಪಾದಕರನ್ನಾಗಿ ಆರಿಸಿದ್ದು ಕೇರಳದ ಪೋಥಾನ್ ಜೋಸೆಫ್ ಅವರನ್ನೇ. ಕೇರಳದ ಚೆಂಗನ್ನೂರಿನಲ್ಲಿ ಜನಿಸಿದ್ದ ಜೋಸೆಫ್ ಮದ್ರಾಸ್ ಮತ್ತು ಬಾಂಬೆ ಪ್ರಾಂತ್ಯಗಳಲ್ಲಿ ಉನ್ನತ ಶಿಕ್ಷಣ ಪಡೆದರು. ಪತ್ರಿಕೋದ್ಯಮಕ್ಕೆ ಕಾಲಿಟ್ಟ ಜೋಸೆಫ್ ಬಾಂಬೆ ಕ್ರೋನಿಕಲ್, ಹಿಂದೂಸ್ತಾನ್ ಟೈಮ್ಸ್, ಹೈದರಾಬಾದ್ ಬುಲೆಟಿನ್ ಮೊದಲಾದ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅಪಾರ ಅನುಭವಿಯಾಗಿದ್ದರು. 1945ರವರೆಗೂ ಜೋಸೆಫ್ ಅವರು "ದಿ ಡಾನ್" ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದರು. ಆದರೆ, ಜಿನ್ನಾ ಅವರು ಭಾರತದ ವಿಭಜನೆಗೆ ಗಂಭೀರ ಪ್ರಯತ್ನ ನಡೆಸುತ್ತಿದ್ದರಿಂದ ತಮ್ಮ ಪತ್ರಿಕೆಗೆ ಬೇರೊಬ್ಬ ಸಂಪಾದಕರನ್ನು ಕೂರಿಸಿದರು. ಪಾಕಿಸ್ತಾನದ ರಚನೆಯಾದಾಗ "ದಿ ಡಾನ್" ಪತ್ರಿಕೆಯು ದಿಲ್ಲಿಯಿಂದ ಕರಾಚಿಗೆ ವರ್ಗವಾಯಿತು.
ಇತ್ತ, ಆ ಪತ್ರಿಕೆಯ ಮೊದಲ ಸಂಪಾದಕ ಪೋಥಾನ್ ಜೋಸೆಫ್ ಅವರು ಭಾರತದಲ್ಲಿ ಪತ್ರಿಕೋದ್ಯಮದಲ್ಲಿ ಮುಂದುವರಿದರು. ಇಂಡಿಯನ್ ಎಕ್ಸ್'ಪ್ರೆಸ್ ಮೊದಲಾದ ಪತ್ರಿಕೆಗಳನ್ನು ಅವರು ಪೋಷಿಸಿ ಬೆಳೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.