ನಾಳೆಯಿಂದ ವಿಶ್ವ ವಿಖ್ಯಾತ ದಸರಾ ಹಬ್ಬದ ಕಲರವ ಶುರು

By Web DeskFirst Published Oct 9, 2018, 10:39 PM IST
Highlights

ದೇವಿಯ ಅಗ್ರಪೂಜೆಯೊಂದಿಗೆ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಹಾಗೂ ಖ್ಯಾತ ಬರಹಗಾರ್ತಿ ಸುಧಾ ನಾರಾಯಣ ಮೂರ್ತಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಡ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಮೈಸೂರು[ಅ.09]: ನಾಡಿನ ಹೆಮ್ಮೆ, ವಿಶ್ವ ವಿಖ್ಯಾತ ದಸರಾ ಹಬ್ಬ ನಾಳೆ ಅ.10 ರಂದು ಬುಧವಾರ ಮೈಸೂರಿನ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಬೆಳಗ್ಗೆ 7.05ರಿಂದ 7.35ರವರೆಗೆ ಸಲ್ಲುವ ತುಲಾ ಲಗ್ನದಲ್ಲಿ ಉದ್ಘಾಟನೆಗೊಳ್ಳಲಿದೆ. ದೇವಿಯ ಅಗ್ರಪೂಜೆಯೊಂದಿಗೆ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಹಾಗೂ ಖ್ಯಾತ ಬರಹಗಾರ್ತಿ ಸುಧಾ ನಾರಾಯಣ ಮೂರ್ತಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಡ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಮುಖ್ಯ ಉಪಸ್ಥಿತಿ ವಹಿಸಿಕೊಳ್ಳಲಿದ್ದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ ಅವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ಸಚಿವ ಸಂಪುಟದ ಹಲವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ವಿದ್ವಾನ್ ಪ್ರಶಸ್ತಿ ಪ್ರದಾನ
ಅ. 10 ರಂದು ಅರಮನೆ ಆವರಣದಲ್ಲಿ ಸಂಜೆ 6 ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದು ಡಿಸಿಎಂ ಡಾ. ಜಿ. ಪರಮೇಶ್ವರ್ ಸೇರಿದಂತೆ  ಹಲವು ಸಚಿವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 

ನಂದಿಧ್ವಜ ಪೂಜೆ, ವಿಜಯದಶಮಿ ಮೆರವಣಿಗೆ
ಅ. 19ರಂದು 2.30ರಿಂದ 3.16 ರೊಳಗಿನ ಶುಭ ಕುಂಭ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿನ ನಂದಿಧ್ವಜಕ್ಕೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪೂಜೆ ಸಲ್ಲಿಸಲಿದ್ದಾರೆ. ಮೈಸೂರಿನ ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

3.40 ರಿಂದ 4.10 ರೊಳಗಿನ ಶುಭ ಕುಂಭ ಲಗ್ನದಲ್ಲಿ ಅರಮನೆಯ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆ ಆರಂಭವಾಗಲಿದ್ದು, ಅರ್ಜುನ ಆನೆಯ ಮೇಲೆ 750 ಕೆಜಿ ತೂಕದ  ಚಿನ್ನದ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ಸಿಗಲಿದೆ. ಅರ್ಜುನನೊಂದಿಗೆ ಅಭಿಮನ್ಯು, ಬಲರಾಮ, ವಿಕ್ರಮ, ವಿಜಯ, ಕಾವೇರಿ, ಗಜೇಂದ್ರ, ಗೋಪಾಲಕೃಷ್ಣ, ದುರ್ಗಾಪರಮೇಶ್ವರಿ, ಗೋಪಿ, ಪ್ರಕಾಶ್ ಕೂಡ ಹೆಜ್ಜೆ ಹಾಕಲಿದ್ದಾರೆ.


 
ದಸರಾ ಕ್ರೀಡೆಗಳು ಹಾಗೂ ಪಂಜಿನ ಕವಾಯತು 
ಅ.10 ರಿಂದ ಅ.17ರ ವರೆಗೂ ಮೈಸೂರು ನಗರದ ವಿವಿಧ ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ರೀಡೆಗಳು ಜರುಗಲಿದ್ದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರು, ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.   ಅ.19ರ ಶುಕ್ರವಾರ ದಂದು ಬನ್ನಿ ಮಂಟಪ ಮೈದಾನದಲ್ಲಿ ಸಂಜೆ 7 ಗಂಟೆಗೆ ರಾಜ್ಯಪಾಲರಾದ ವಿ.ಆರ್.ವಾಲಾ ಅವರು ಪಂಜಿನ ಕವಾಯತಿಗೆ ಗೌರವ ವಂದನೆ ಸ್ವೀಕರಿಸುವುದರೊಂದಿಗೆ ಪೆರೇಡ್'ಗೆ ಚಾಲನೆ ನೀಡಲಿದ್ದಾರೆ.  


 

click me!