ಸ್ಮಾರ್ಟ್ ಸಿಟಿಯ 15 ಕೋಟಿ ಹಣ ಕಸಾಯಿಖಾನೆಗೆ ಕೊಟ್ಟ ಸಚಿವ ಹೇಳುವುದೇನು?

By Web DeskFirst Published Oct 8, 2018, 5:37 PM IST
Highlights

ಸ್ಮಾರ್ಟ್ ಸಿಟಿಯ 15 ಕೋಟಿ ಅನುದಾನವನ್ನು ಮಂಗಳೂರಿನ ಕುದ್ರೋಳಿ ಕಸಾಯಿಖಾನೆಗೆ ನೀಡಿರುವ ಸಚಿವ ಯುಟಿ ಖಾದರ್ ವಿವಾಕ್ಕೀಡಾಗಿದ್ದಾರೆ. ಆದ್ರೆ ಈ ಬಗ್ಗೆ ಖಾದರ್ ಅವರು ಸಮಜಾಯಿಸಿ ನೀಡಿದ್ದು, ಏನು ಹೇಳಿದ್ದಾರೆ ನೋಡಿ.

ಮಂಗಳೂರು (ಅ.08): ಸ್ಮಾರ್ಟ್ ಸಿಟಿಯ 15 ಕೋಟಿ ಅನುದಾನವನ್ನು ಮಂಗಳೂರಿನ ಕುದ್ರೋಳಿ ಕಸಾಯಿಖಾನೆಗೆ ನೀಡಿ ವಿವಾದಕ್ಕೀಡಾಗಿರುವ ಸಚಿವ ಯುಟಿ ಖಾದರ್ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಯು‌.ಟಿ.ಖಾದರ್, ಸ್ವಚ್ಛ ಭಾರತ ಸಾಕಾರವಾಗಬೇಕಾದ್ರೆ ಕೆಲವೊಂದು ಕೆಲಸ ಆಗಬೇಕು. ಹೀಗಾಗಿ ಕಸಾಯಿಖಾನೆ ಸ್ವಚ್ಛತೆ ಬಗ್ಗೆಯೂ ಗಮನ ಹರಿಸಲಾಗಿದೆ.

ಮಂಗಳೂರಿನ ಹೊಟೇಲ್, ಮನೆಗಳಿಗೆ ಕುರಿ, ಆಡು ಮತ್ತು ಇತರೆ ಮಾಂಸಗಳು ಇಲ್ಲಿಂದಲೇ ಹೋಗುತ್ತೆ. ಹೀಗಾಗಿ ಶುಚಿಯಾದ ಆಹಾರ ನೀಡುವ ಉದ್ದೇಶದಿಂದ ಈ ಸ್ಮಾರ್ಟ್ ಸಿಟಿ ಯೋಜನೆಯನ್ನು ಹಾಕಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸ್ಮಾರ್ಟ್ ಸಿಟಿ ಮಾಡಿ ಅಂತ 15 ಕೋಟಿ ಕೊಟ್ರೆ ಕಸಾಯಿಖಾನೆಗೆ ಕೊಟ್ಟ ಸಚಿವ

ಸ್ಮಾರ್ಟ್ ಸಿಟಿಯಲ್ಲಿ ನಗರದ ಸ್ವಚ್ಛತೆ ಗಮನದಲ್ಲಿಟ್ಟುಕೊಂಡು ಬೋರ್ಡ್ ಗೆ ಸಲಹೆ ಸೂಚನೆ ಕೊಟ್ಟಿದ್ದೆ. ವೆನ್ ಲಾಕ್ ಆಸ್ಪತ್ರೆ, ರಸ್ತೆ, ಮೀನುಗಾರಿಕೆ ಮತ್ತು ಕಸಾಯಿಖಾನೆ ಸ್ವಚ್ಚತೆ ಬಗ್ಗೆ ಸಲಹೆ ಕೊಟ್ಟಿದ್ದೆ. ಬಿಜೆಪಿ ಅಂಗ ಸಂಸ್ಥೆಯೇ ಕಸಾಯಿಖಾನೆಯನ್ನ ಹರಾಜಿನಲ್ಲಿ ಪಡೆದುಕೊಂಡು ಒಂದು ವರ್ಷ ನಡೆಸಿದ್ದರು. ಅಗ ಅವರು ಕೂಡ ಇಲ್ಲಿನ ಸ್ವಚ್ಚತೆ ಸರಿಯಿಲ್ಲ ಎಂದಿದ್ದರು.

ಕೊಳಕು ಆಹಾರ ಪೂರೈಸುವ ಬದಲು ಸ್ವಚ್ಛತೆ ಸಿಗಲಿ ಎಂಬ ಉದ್ದೇಶ ನನ್ನದು. ಆದ್ರೆ ಈ ವಿಚಾರ ನಮ್ಮ ಸಂಸದರು, ಶಾಸಕರಿಗೆ ಯಾಕೆ ಅರ್ಥವಾಗಿಲ್ಲ. ನನ್ನ ಸಲಹೆ ನೋಡಿಕೊಂಡು ಸ್ಮಾರ್ಟ್ ಸಿಟಿ ಸಮಿತಿಯಲ್ಲಿ ಚರ್ಚೆಯಾಗಿದ್ದು, ಸಭೆಯಲ್ಲಿ ಬಿಜೆಪಿ ಸದಸ್ಯರು ಈ ವಿಚಾರದ ಬಗ್ಗೆ ಯಾರೂ ಆಕ್ಷೇಪ ಮಾಡಿಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಈಗ ಈ ಪ್ರಸ್ತಾವನೆ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದ ಬಳಿ ಇದೆ. ಬೇಡ ಅಂದ್ರೆ ನಮ್ಮ ಸಂಸದರು ಅದನ್ನು ಕೇಂದ್ರದಲ್ಲಿ ನಿಲ್ಲಿಸಲಿ. ನಮ್ಮ ಶಾಸಕರು, ಸಂಸದರು ಈವರೆಗೆ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದರು.

ಸಾಧ್ಯವಾದ್ರೆ ಇದನ್ನ ನಿಲ್ಲಿಸಿ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆಯಿರಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಗೆ ಸವಾಲು ಹಾಕಿದರು.

click me!