
ಬೆಂಗಳೂರು (ಮಾ. 23): ಮೂರು ವರ್ಷದ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ತಾಯಿ ಗೌರಮ್ಮ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ ಈ ಬಾರಿ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದು, ಗೌರಮ್ಮಗೆ ಕೋಲಾರ ಕ್ಷೇತ್ರದಿಂದ ಹಾಗೂ ಇತರ 42 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಅಭ್ಯರ್ಥಿಗಳಿಗೆ ಟಿಕೆಟ್ ಪ್ರಕಟಿಸಿದೆ.
ತಾವು ಕೋಲಾರ ಕ್ಷೇತ್ರದಿಂದ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಖುದ್ದು ಗೌರಮ್ಮ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ಶಿವರಾಮಯ್ಯ ಅವರ ಜತೆಗೂಡಿ ಮಾತನಾಡಿದ ಗೌರಮ್ಮ, ಕಳೆದ ಎರಡು ತಿಂಗಳಿಂದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವುದನ್ನು ಘೋಷಣೆ ಮಾಡಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕ್ಷೇತ್ರದಲ್ಲಿ ನನ್ನ ಮಗ ಮಾಡಿರುವ ಜನಪರ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ ಎಂದರು.
ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದ ನನ್ನ ಮಗನನ್ನು ವರ್ಗಾವಣೆ ಮಾಡುವ ಮೂಲಕ ಕೊಲೆ ಮಾಡಲಾಗಿದೆ. ಅವರ ಸಾವಿಗೆ ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ. ಆ ಪಕ್ಷವನ್ನು ಸೋಲಿಸಲು ರಾಜ್ಯದೆಲ್ಲೆಡೆ ಪ್ರಾಮಾಣಿಕ ಪಕ್ಷಗಳಿಗೆ ಬೆಂಬಲ ನೀಡುತ್ತೇನೆ ಎಂದೂ ಅವರು ಹೇಳಿದರು.
ಶಿವರಾಮಯ್ಯ ಮಾತನಾಡಿ, ಇನ್ನುಳಿದಂತೆ ಮುಳಬಾಗಿಲಿನಿಂದ ಮುರಳಿ ಅಥವಾ ಮಲ್ಲಿಕಾರ್ಜುನ ಕಿಣಿಗೇರಿ, ಶ್ರೀನಿವಾಸಪುರದಿಂದ ಹರಿಕುಮಾರ್, ಕೆಜಿಎಫ್‌ನಿಂದ ವೆಂಕಟರಮಣಪ್ಪ, ಬಸವನಗುಡಿಯಿಂದ ಎಚ್.ಎಂ.ರಾಮು, ದೊಡ್ಡಬಳ್ಳಾಪುರದಿಂದ ತಿರುಮಲೇಗೌಡ, ಮಂಡ್ಯದಿಂದ ಶಿವರಾಮಯ್ಯ, ಬ್ಯಾಟರಾಯನಪುರದಿಂದ ಸಾಯಿ ಸತೀಶ್, ತುರುವೇಕೆರೆಯಿಂದ ಎ.ಎಸ್.ಕೆಂಪೇಗೌಡ, ವರುಣಾದಿಂದ ಸಿ.ರವಿಕುಮಾರ್ ಸ್ಪರ್ಧಿಸಲಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.