
ಬೆಂಗಳೂರು: ಓಖಿ ಚಂಡಮಾರುತ ಪ್ರಭಾವ ರಾಜ್ಯದ ಕರಾವಳಿ ಭಾಗದಲ್ಲೂ ಬೀರತೊಡಗಿದೆ. ಕೇರಳದ ಕಾಸರಗೋಡು, ದಕ್ಷಿಣ ಕನ್ನಡದಲ್ಲಿ ಕಡಲಿನ ಅಬ್ಬರ ತೀವ್ರಗೊಂಡಿದ್ದು ತೀರ ಪ್ರದೇಶದ ಮನೆಗಳು ನೀರುಪಾಲಾಗುತ್ತಿವೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕಡಪ್ಪರ, ಉಪ್ಪಳ ಬಳಿಯ ಕೊಯಿಪಾಡಿ ಎಂಬಲ್ಲಿ ಆರು ಮನೆಗಳು ಸಮುದ್ರ ಪಾಲಾಗಿವೆ.
ಅಲ್ಲಿದ್ದ ನಿವಾಸಿಗಳನ್ನು ಮೊದಲೇ ಸ್ಥಳಾಂತರ ಮಾಡಿದ್ದರಿಂದ ಜೀವ ಹಾನಿ ತಪ್ಪಿದೆ. ಮಂಜೇಶ್ವರದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಆಗುತ್ತಿದ್ದು ಬ್ರೇಕ್ ವಾಟರ್ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಕೆಲವು ಪ್ರದೇಶಗಳಲ್ಲಿ ಸಮುದ್ರದ ತೀವ್ರತೆ ಹೆಚ್ಚಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಮಂಜೇಶ್ವರದ ಕಡಪ್ಪರದಲ್ಲಿ ಮನೆಯೊಂದು ನೋಡ ನೋಡುತ್ತಲೇ ಸಮುದ್ರಕ್ಕೆ ಬಿದ್ದು ನೀರುಪಾಲಾಗುತ್ತಿರುವ ದೃಶ್ಯ ಮನ ಕಲಕುವಂತಿದೆ.
ಓಖಿ ಚಂಡಮಾರುತದ ಅಬ್ಬರಕ್ಕೆ ದೇಶದ ಕರಾವಳಿ ತೀರ ಅಕ್ಷರಶಃ ನಲುಗಿ ಹೋಗಿದೆ. ಅದರಲ್ಲೂ ಮೀನುಗಾರಿಕೆಗೆ ಆಳಸಮುದ್ರಕ್ಕೆ ತೆರಳಿದ್ದವರ ಪಾಡು ಹೇಳತೀರದಂತಾಗಿದೆ. ರಕ್ಷಣಾ ಪಡೆಗಳು ಹಗಲು ರಾತ್ರಿ ಎನ್ನದೇ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯದಲ್ಲಿ ನಿರತರಾಗಿವೆ.
ಓಖಿ ಚಂಡಮಾರುತಕ್ಕೆ ತಮಿಳುನಾಡು, ಕೇರಳ ರಾಜ್ಯ ತತ್ತರಿಸಿದೆ. ಇನ್ನೂ ನೂರಾರು ಮೀನುಗಾರರು ನಾಪತ್ತೆಯಾಗಿದ್ದಾರೆ. ಇನ್ನು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಸುಮಾರು 250 ಕ್ಕೂ ಹೆಚ್ಚು ಮೀನುಗಾರರ ಬೋಟ್’ಗಳು ಮಹಾರಾಷ್ಟ್ರದ ಸಿಂಧದುರಗೆ ಜಿಲ್ಲೆಯ ದೇವಘಡ ಫೋರ್ಟ್ ದಲ್ಲಿ ಪತ್ತೆಯಾಗಿವೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.
ಕರುನಾಡಿನ ಕರಾವಳಿ ತೀರಗಳಲ್ಲೂ ‘ಓಖಿ’ ಆತಂಕ:
ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕಡಲಿನ ಅಬ್ಬರ ಜೋರಾಗಿದೆ. ಹೀಗಾಗೇ ಮಂಗಳೂರಿನಿಂದ ಕಾರವಾರವರೆಗಿನ 320 ಕಿಮೀ ಉದ್ದದ ಕರಾವಳಿಯಲ್ಲಿ ಮೀನುಗಾರರು ಹಾಗೂ ಪ್ರವಾಸಿಗರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಇನ್ನೂ ಉಡುಪಿಯ ಮಲ್ಪೆ ಬೀಚ್ನಲ್ಲೂ ಕಡಲಿನ ಆರ್ಭಟ ಜೋರಾಗಿದೆ. ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರವಾಸಿಗರ ಭೇಟಿಗೆ ಕಳೆದ 24 ಗಂಟೆಗಳಿಂದ ನಿರ್ಬಂಧ ವಿಧಿಸಲಾಗಿದೆ.
ಕಾರವಾರದ ಅರಬ್ಬಿ ಸಮುದ್ರದಲ್ಲೂ ಭಾರೀ ಗಾಳಿ ಬೀಸುತ್ತಿದ್ದು, ಅಲೆಗಳು ಆಳೆತ್ತರಕ್ಕೆ ನೆಗೆಯುತ್ತಿವೆ. ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಪಕ್ಕದ ಗೋವಾ ಹಾಗೂ ಮುಂಬೈಯಿಂದ ಮೀನುಗಾರಿಕೆಗೆ ಬಂದಿದ್ದ ಬೋಟ್ಗಳು ಕಾರವಾರ ದಡದಲ್ಲಿ ಲಂಗರು ಹಾಕಿವೆ.
ಇದುವರೆಗೂ ಕೇರಳ ಹಾಗೂ ತಮಿಳುನಾಡು ಸೇರಿ 26 ಮಂದಿ ಓಖಿ ಚಂಡಾಮಾರುತಕ್ಕೆ ಮೃಪಟ್ಟಿದ್ದು, ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ. ಇನ್ನೂ 24 ಗಂಟೆಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದ್ದು.. ಕರಾವಳಿ ತೀರದ ಜನ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.