ನಾನ್‌ವೆಜ್‌ ತಿನ್ನೋದನ್ನೇ ಬಿಟ್ಟಿದ್ದೇನೆ: ಎಚ್‌ಡಿಕೆ

By Web DeskFirst Published Jul 23, 2019, 9:01 AM IST
Highlights

ನಾನು ನಾನ್ ವೆಜ್ ಆಹಾರವನ್ನೇ ತ್ಯಜಿಸಿದ್ದೇನೆ. ನನ್ನ ಹೃದಯದ ಶಸ್ತ್ರಚಿಕಿತ್ಸೆ ಬಳಿ ಮಾಂಸಾಹಾರ ಬಿಟ್ಟಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿ ನಾಯಕ ಸಿ ಟಿ ರವಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು [ಜು.23] :  ‘ಖರ್ಜೂರ ತಿಂದಿದ್ದಕ್ಕೆ ಬಿರಿಯಾನಿ ಕಥೆ ಕಟ್ಟಲಾಗಿದೆ. ಎರಡನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆಯಾದ ಬಳಿಕ ನಾನ್‌ವೆಜ್‌ (ಮಾಂಸಾಹಾರ) ತಿನ್ನುವುದನ್ನೇ ಬಿಟ್ಟಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ವಿಶ್ವಾಸಮತ ಯಾಚನೆ ನಿರ್ಣಯದ ಮೇಲಿನ ಚರ್ಚೆ ವೇಳೆ ಮೇಲೆ ಕಾನೂನು ಸಚಿವ ಕೃಷ್ಣ ಬೈರೇಗೌಡ ಅವರು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷ ಬಿಜೆಪಿ ನಡೆಸುತ್ತಿರುವ ತಂತ್ರಗಾರಿಕೆಗಳನ್ನು ಬಿಚ್ಚಿಡುತ್ತಿದ್ದ ವೇಳೆ ಮಧ್ಯಪ್ರವೇಶ ಮಾಡಿದ ಶಾಸಕ ಸಿ.ಟಿ.ರವಿ, ಬಿರಿಯಾನಿ ತಿಂದವರ ಕಥೆ ಹೇಳಿ ಎಂದು ಒತ್ತಾಯಿಸಿದರು.

ಈ ವೇಳೆ ಸ್ಪಷ್ಟನೆ ನೀಡಲು ಮುಂದಾದ ಮುಖ್ಯಮಂತ್ರಿ ಕುಮಾರಸ್ವಾಮಿ, ನಾನು ಖರ್ಜೂರ ತಿಂದಿದ್ದಕ್ಕೆ ಬಿರಿಯಾನಿ ಕಥೆ ಕಟ್ಟಲಾಗಿದೆ. ಖರ್ಜೂರ ಬಾಯಿಗೆ ಇಟ್ಟುಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಬಿರಿಯಾನಿ ತಿಂದಿರುವುದಾಗಿ ಹಬ್ಬಿಸಲಾಗಿದೆ ಎಂದು ಹೇಳಿದರು.

ನನಗೆ ಎರಡನೇ ಬಾರಿ ಹೃದಯ ಶಸ್ತ್ರಚಿಕಿತ್ಸೆ ಆದ ನಂತರ ನಾನ್‌ವೆಜ್‌ ತಿನ್ನುವುದನ್ನು ಬಿಟ್ಟುಬಿಟ್ಟಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದಾಗ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಆಶ್ಚರ್ಯ ವ್ಯಕ್ತಪಡಿಸಿ, ಕೇಳೋಕೆ ಸಾಧ್ಯವಾಗುತ್ತಿಲ್ಲ ಎಂದು ಕಾಲೆಳೆದರು.

ಐಎಂಎ ಸಂಸ್ಥೆಯ ವ್ಯಕ್ತಿಯ ಪರಿಚಯ ನನಗೆ ಇಲ್ಲ. ಹೊಸದಾಗಿ ಮುಖ್ಯಮಂತ್ರಿಯಾದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ರಂಜಾನ್‌ ಹಬ್ಬದ ಪ್ರಯುಕ್ತ ಇಫ್ತಾರ್‌ ಕೂಟಕ್ಕಾಗಿ ನನ್ನನ್ನು ಆಹ್ವಾನಿಸಲು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಶಾಸಕರು (ರೋಷನ್‌ ಬೇಗ್‌) ಐಎಂಎ ಸಂಸ್ಥೆಯ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದರು. ಬಲವಂತವಾಗಿ ನನ್ನನ್ನು ಐಎಂಎ ವ್ಯಕ್ತಿಯ ಕಚೇರಿಗೆ ಕರೆದುಕೊಂಡು ಹೋದರು ಎಂದು ತಿಳಿಸಿದರು.

ಕಚೇರಿಗೆ ಹೋಗಿದ್ದ ವೇಳೆ ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭಾವಚಿತ್ರವನ್ನು ಸಹ ಕಂಡಿದ್ದೇನೆ. ವಂಚನೆ ಮಾಡಿರುವ ಕಂಪನಿಗೆ 250 ಕೋಟಿ ರು. ಆದಾಯ ತೆರಿಗೆ ಪಾವತಿ ಮಾಡಿರುವುದಕ್ಕೆ ಪ್ರಶಸ್ತಿ ನೀಡಲಾಗಿದೆ. ಐಎಂಎ ಸಂಸ್ಥೆ ನಮ್ಮ ಅವಧಿಯಲ್ಲಿ ಪ್ರಾರಂಭವಾಗಿಲ್ಲ. 10-12 ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ. ನನಗೂ, ಆ ವ್ಯಕ್ತಿಗೂ ಪರಿಚಯ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಐಎಂಎ ಪ್ರಕರಣದ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಕ್ತ ತನಿಖೆಗೆ ನಿರ್ದೇಶನ ನೀಡಲಾಗಿದೆ. ಬಡವರ ದುಡ್ಡು ತಿನ್ನುವವರಿಗೆ ಮೈತ್ರಿ ಸರ್ಕಾರ ರಕ್ಷಣೆ ಕೊಡುವುದಿಲ್ಲ. ಆರೋಪಿಯನ್ನು ಎಸ್‌ಐಟಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿದೆ. ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

click me!