ಅ.10ಕ್ಕೆ ವೀರಶೈವ-ಲಿಂಗಾಯತ ಸಭೆ: ಧರ್ಮ ಸಂಘರ್ಷಕ್ಕೆ ಅಂದು ತಾರ್ಕಿಕ ಅಂತ್ಯ?

By Suvarna Web DeskFirst Published Oct 5, 2017, 3:45 PM IST
Highlights

ಧರ್ಮ ಸಂಘರ್ಷಕ್ಕೆ ಅಂದು ತಾರ್ಕಿಕ ಅಂತ್ಯ? | ಇಲ್ಲವಾದರೆ ಧರ್ಮ ಸಮರ ತೀವ್ರ | ನಿನ್ನೆಯ ಸಭೆಯಲ್ಲಿ ಶಾಮನೂರು-ಎಂ.ಬಿ.ಪಾಟೀಲ್ ಬಣಗಳ ನಡುವೆ ವಾಗ್ವಾದ

ಬೆಂಗಳೂರು: ವೀರಶೈವ ಮತ್ತು ಲಿಂಗಾಯತ ಸ್ವತಂತ್ರ ಧರ್ಮ ರಚನೆ ಸಂಬಂಧ ಉಂಟಾಗಿರುವ ಭಿನ್ನಾಭಿಪ್ರಾಯ ತಾರ್ಕಿಕ ಅಂತ್ಯ ಕಾಣುವ ಕಾಲ ಸಮೀಪಿಸಿದ್ದು, ಅ.10ರಂದು ಉಭಯ ಬಣಗಳ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಒಮ್ಮತ ಮೂಡಿದರೆ ಉಭಯ ಬಣಗಳು ಜತೆಗಿರಲಿವೆ. ಇಲ್ಲ ದಿದ್ದರೆ, ಪ್ರತ್ಯೇಕವಾಗಿ ತಮ್ಮ ಹಕ್ಕು ಮಂಡನೆಗೆ ಮುಂದಾಗುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ ಅ.10 ಸಭೆಯಲ್ಲಿ ಒಮ್ಮತ ಮೂಡದಿದ್ದರೆ ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆ ಕೋರಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಈಗಾಗಲೇ ವೀರಶೈವ ಮಹಾಸಭಾವು ವೀರಶೈವ ಧರ್ಮ ಸ್ಥಾಪನೆಗೆ ಅರ್ಜಿ ಸಲ್ಲಿಸಿದೆ. ಬುಧವಾರ ಸಂಜೆ ಎರಡು ಗಂಟೆಗಳ ಕಾಲ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಭಯ ಬಣಗಳ ಮುಖಂಡರ ನಡುವೆ ಭಾರಿ ವಾಗ್ವಾದ ನಡೆಯಿತು.

Latest Videos

ಶಾಮನೂರು ಬಣ ವೀರಶೈವ ಧರ್ಮ ಅಥವಾ ವೀರಶೈವ ಲಿಂಗಾಯತ ಧರ್ಮದ ಮಾನ್ಯತೆಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕೆಂಬ ತನ್ನ ಅಭಿಪ್ರಾಯ ಮುಂದಿಟ್ಟಿತು. ಆದರೆ, ಸಚಿವ ಎಂ.ಬಿ.ಪಾಟೀಲ್ ಬಣ ಇದನ್ನು ಬಲವಾಗಿ ವಿರೋಧಿಸಿ, ಈಗಾಗಲೇ ಸುಪ್ರಿಂಕೋರ್ಟ್ ಮತ್ತು ಕೇಂದ್ರ ಸರ್ಕಾರ ವೀರಶೈವ ಎಂಬ ಪದವನ್ನು ತಿರಸ್ಕರಿಸಿದ್ದು, ಮತ್ತೊಮ್ಮೆ ಧರ್ಮ ರಚನೆ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ.

ಹೀಗಾಗಿ ಲಿಂಗಾಯತ ಧರ್ಮ ರಚನೆಗೆ ಒಮ್ಮತದ ತೀರ್ಮಾನವನ್ನು ಮಹಾಸಭಾ ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿತು. ಈ ಹಿಂದಿನ ನಿರ್ಣಯಗಳಿಗೆ ಉಭಯ ಬಣಗಳು ಅಂಟಿಕೊಂಡ ಪರಿಣಾಮ ಸಂಜೆ 5.30ಕ್ಕೆ ಆರಂಭಗೊಂಡ ಸಭೆ ರಾತ್ರಿ 7.45ರವರೆಗೂ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ. ಈ ಮಧ್ಯೆ ಉಭಯ ಬಣಗಳ ನಡುವೆ ಕಾವೇರಿದ ಚರ್ಚೆ ನಡೆಯಿತು.

ಒಂದು ಹಂತದಲ್ಲಿ ಸಚಿವ ಎಂ.ಬಿ.ಪಾಟೀಲ್ ಮತ್ತು ಶಾಸಕ ಬಸವರಾಜ ಹೊರಟ್ಟಿ ಅವರು ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಮತ್ತು ಉಪಾಧ್ಯಕ್ಷ ಎನ್.ತಿಪ್ಪಣ್ಣ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಶಾಮನೂರು ಶಿವಶಂಕರಪ್ಪನವರ ಕರೆಗೆ ಓಗೊಟ್ಟು ಸಭೆಗೆ ಬಂದಿದ್ದು, ಮಾತುಕತೆ ನಡೆಸುವುದು ತಮಗೆ ಅನಿವಾರ್ಯವಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಎಷ್ಟೇ ಅಸಮಾಧಾನ ವ್ಯಕ್ತವಾದರೂ ಮಹಾಸಭಾ ಅಧ್ಯಕ್ಷ ಶಾಮನೂರು ಯಾವುದೇ ಬಣದ ಪರ ಅಭಿಪ್ರಾಯ ವ್ಯಕ್ತಪಡಿಸದೇ ‘‘ಧರ್ಮ ಏನಾದರೂ ಆಗಲಿ, ಸಮಾಜ ಒಡೆಯಬಾರದು. ಧರ್ಮದ ಕಾರಣಕ್ಕೆ ವೀರಶೈವ ಮತ್ತು ಲಿಂಗಾಯತರು ಬೇರೆ ಬೇರೆಯಾದರೆ ನಾಳೆ ಸಮಾಜ ಅಧೋಗತಿಗೆ ಹೋಗುತ್ತದೆ. ಯಾವ ಪಕ್ಷದವರೂ ನಮ್ಮನ್ನು ಮಾತನಾಡಿಸುವುದಿಲ್ಲ. ಈ ಸೂಕ್ಷ್ಮತೆಯನ್ನು ಎಲ್ಲರೂ ತಿಳಿದುಕೊಳ್ಳಿ’ ಎಂಬ ಬುದ್ಧಿವಾದ ಹೇಳುವ ಪ್ರಯತ್ನ ಮಾಡಿದರು.

ಆಗ ಶಾಸಕ ಹೊರಟ್ಟಿ, ನಮಗೂ ಸಮಾಜ ಒಡೆಯುವ ಮನಸಿಲ್ಲ. ಸಮಾಜದಿಂದ ಲಾಭ ಪಡೆದುಕೊಂಡವರೇ ಸಮಾಜ ಒಡೆಯುತ್ತಿದ್ದಾರೆ. ಆದರೆ ವೀರಶೈವ ಶಬ್ದ ಮುಂದಿಟ್ಟುಕೊಂಡು ಹೋದರೆ ಮತ್ತೆ ನಮಗೆ ಸೋಲಾಗುತ್ತದೆ. ಆಗ ಮತ್ತೇ 10 ವರ್ಷ ಈ ಬೇಡಿಕೆ ಈಡೇರುವುದಿಲ್ಲ. ಸಮಾಜದ ಹಿತದೃಷ್ಟಿಯಿಂದ ಲಿಂಗಾಯತ ಶಬ್ದ ಒಪ್ಪಿಕೊಳ್ಳಿ. ಅ.10ರಂದು ಮತ್ತೊಂದು ಸಭೆ ಕರೆದು ನಿರ್ಧಾರ ತಿಳಿಸಿ’ ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ.

ಈ ವೇಳೆ ಸಚಿವ ಖಂಡ್ರೆ ಅವರು ವೀರಶೈವ ಎಂಬ ಪದ ಬಿಡುವುದು ಸಾಧ್ಯವಿಲ್ಲ ಎಂದಾಗ, ಸಚಿವ ಎಂ.ಬಿ. ಪಾಟೀಲ್ ಅವರು ತಾವು ಯಾರ ವೈಯಕ್ತಿಕ ಅಭಿಪ್ರಾಯವನ್ನೂ ವಿರೋಧಿಸುವುದಿಲ್ಲ. ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಲಿಂಗಾಯತ ಧರ್ಮ ಸ್ಥಾಪನೆ ನಿರ್ಧಾರ ಅಚಲ ಎಂದು ಹೇಳಿದರು. ಆಗ ಮತ್ತೆ ವಾಗ್ವಾದ ಉಂಟಾದ್ದರಿಂದ ಅ.10ರಂದು ಮತ್ತೆ ಸಭೆ ಸೇರೋಣ ಎಂದು ಶಾಮನೂರು ಸಭೆ ಅಂತ್ಯಗೊಳಿಸಿದರು.

ಸಭೆಯಲ್ಲಿ ಮಹಾಸಭಾದ ಪರವಾಗಿ ಶಾಮನೂರು ಶಿವಶಂಕರಪ್ಪ, ಎನ್.ತಿಪ್ಪಣ್ಣ, ಸಚಿವ ಈಶ್ವರ್ ಖಂಡ್ರೆ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಿತಿ ಪರವಾಗಿ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ ಹೊರಟ್ಟಿ, ಎ.ಬಿ.ಪಾಟೀಲ್, ಡಾ.ಜಯಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕಾರಿ ಮಂಡಳಿ ಸಭೆ: ಇದಕ್ಕೂ ಮೊದಲು ಬೆಳಗ್ಗೆ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ವೀರಶೈವ ಮಹಾಸಭಾದ ಕಾರ್ಯಕಾರಿ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ವೀರಶೈವ ಮಹಾಸಭಾ ಹಿಂದೆ ನಿರ್ಣಯ ತೆಗೆದು ಕೊಂಡಂತೆ ವೀರಶೈವ ಧರ್ಮ ಸ್ಥಾಪನೆಗೆ ಹೋರಾಟ ನಡೆಸಲು ಎಲ್ಲ ಸದಸ್ಯರು ಅನುಮತಿ ಕೊಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಸದಸ್ಯರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಮಾಧ್ಯಮದವರನ್ನು ಸಭೆಯಿಂದ ಹೊರ ಕಳಿಸಲಾಯಿತು.

ಸ್ವತಂತ್ರ ಧರ್ಮಕ್ಕೆ ಅ.16ರಂದು ಶಿಫಾರಸು?: ವೀರಶೈವ ಮತ್ತು ಲಿಂಗಾಯತ ಧರ್ಮ ರಚನೆ ಸಂಬಂಧ ವಿವಾದ ತಾರಕಕ್ಕೇರಿಸುವ ಬೆನ್ನಲ್ಲೇ ಅ.16ರಂದು ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಆಯೋಗಕ್ಕೆ ಶಿಫಾರಸು ಕಳಿಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

click me!