ಆಮ್ಲಜನಕ ಹೊರಬಿಡುವ ಏಕೈಕ ಪ್ರಾಣಿ ಗೋವು

By Web DeskFirst Published Jul 27, 2019, 8:02 AM IST
Highlights

ಆಮ್ಲಜನಕ ಹೊರಬಿಡುವ ಏಕೈಕ ಪ್ರಾಣಿ ಗೋವು| ಉತ್ತರಾಖಂಡ ಸಿಎಂ ಪ್ರತಿಪಾದನೆ, ಸುಳ್ಳೆಂದ ತಜ್ಞರು

ಡೆಹ್ರಾಡೂನ್‌[ಜು.27]: ಉಸಿರಾಟದ ವೇಳೆ ಆಮ್ಲಜನಕವನ್ನು ಹೀರಿಕೊಂಡು ಮತ್ತು ಆಮ್ಲಜನಕವನ್ನೇ ಹೊರಬಿಡುವ ಏಕೈಕ ಪ್ರಾಣಿ ಗೋವು ಎಂದು ಉತ್ತರಾಖಂಡ್‌ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರು ಪ್ರತಿಪಾದಿಸಿದ್ದಾರೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗಿದ್ದಾರೆ. ಮುಖ್ಯಮಂತ್ರಿ ರಾವತ್‌ ಅವರ ಈ ಹೇಳಿಕೆಯನ್ನು ಪಶುಸಂಗೋಪನಾ ತಜ್ಞರು ಅಲ್ಲಗಳೆದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಗೋವಿನ ಹಾಲು ಮತ್ತು ಅದರ ಗಂಜಲದ ವೈದ್ಯಕೀಯ ಗುಣಗಳ ಬಗ್ಗೆ ರಾವತ್‌ ಅವರು ಕೊಂಡಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ. ಅದರಲ್ಲಿ ಗೋವುಗಳು ಉಸಿರಾಟದ ವೇಳೆ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರ ಬಿಡುತ್ತವೆ. ಗೋವಿನ ಜೊತೆಯೇ ಇರುವುದರಿಂದ ಕ್ಷಯ ರೋಗದಿಂದಲೂ ಮುಕ್ತಿ ಹೊಂದಬಹುದು. ಗೋವುಗಳ ಮೈ ಉಜ್ಜಿದರೆ ಉಸಿರಾಟ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ ಎಂದೆಲ್ಲಾ ರಾವತ್‌ ಹೇಳಿದ್ದಾರೆ.

ಉತ್ತರಾಖಂಡದ ಪರ್ವತ ಪ್ರದೇಶಗಳಲ್ಲಿ ಈ ರೀತಿಯ ನಂಬಿಕೆ ಇದ್ದು, ಅದನ್ನೇ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಅವರ ಕಚೇರಿ ಸ್ಪಷ್ಟನೆ ನೀಡಿದೆ. ಆದರೆ ಪಶುಸಂಗೋಪನೆ ತಜ್ಞರು ರಾವತ್‌ ವಾದವನ್ನು ತಳ್ಳಿ ಹಾಕಿದ್ದಾರೆ. ಪ್ರತಿಯೊಂದು ಜೀವಿಯಂತೆಯೇ ಆಮ್ಲಜನಕವನ್ನು ಸೇವಿಸಿ, ಇಂಗಾಲದ ಡೈ ಆಕ್ಸೈಡ್‌ ಅನ್ನು ಗೋವು ಹೊರಬಿಡುತ್ತದೆ ಎಂದು ತಿಳಿಸಿದ್ದಾರೆ.

click me!