ಕಾಂಗ್ರೆಸ್ ಮುಖಂಡಗೆ ಎದುರಾಗಿದೆ ಬಂಧನ ಭೀತಿ

First Published Jun 6, 2018, 12:11 PM IST
Highlights

ಸುನಂದಾ ಪುಷ್ಕರ್‌ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತಿ ಹಾಗೂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರಿಗೆ ದಿಲ್ಲಿಯ ಹೆಚ್ಚುವರಿ ಮುಖ್ಯ ಸತ್ರ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಅವರಿಗೆ ಬಂಧನ ಭೀತಿ ಎದುರಾಗಿದೆ.

ನವದೆಹಲಿ :  ಸುನಂದಾ ಪುಷ್ಕರ್‌ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತಿ ಹಾಗೂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರಿಗೆ ದಿಲ್ಲಿಯ ಹೆಚ್ಚುವರಿ ಮುಖ್ಯ ಸತ್ರ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿದೆ. ತರೂರ್‌ ಅವರನ್ನು ಆರೋಪಿ ಎಂದು ಹೆಸರಿಸಿ ಸಮನ್ಸ್‌ ಜಾರಿ ಮಾಡಲಾಗಿದ್ದು, ಜುಲೈ 7ರಂದು ಹಾಜರಾಗುವಂತೆ ಸೂಚಿಸಿದೆ.

‘ಶಶಿ ತರೂರ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟುಪುರಾವೆಗಳು ಇವೆ’ ಎಂಬ ಮಹತ್ವದ ಅಭಿಪ್ರಾಯವನ್ನೂ ಹೆಚ್ಚುವರಿ ಮುಖ್ಯ ಸತ್ರ ನ್ಯಾಯಾಧೀಶ ಸಮರ್‌ ವಿಶಾಲ್‌ ವ್ಯಕ್ತಪಡಿಸಿದರು.ಇದರಿಂದಾಗಿ ಶಶಿ ತರೂರ್‌ ಅವರಿಗೆ ಪ್ರಕರಣದಲ್ಲಿ ಬಂಧನದ ಭೀತಿ ಆರಂಭವಾಗಿದೆ. ಅವರು ಬಂಧನದಿಂದ ಪಾರಾಗಲು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ನಿರೀಕ್ಷಣಾ ಜಾಮೀನು ಸಿಗದೇ ಹೋದರೆ ಹಾಗೂ ವಿಚಾರಣೆ ವೇಳೆ ನ್ಯಾಯಾಧೀಶರಿಗೆ ತರೂರ್‌ ಮೇಲೆ ಅನುಮಾನ ಬಂದರೆ ಅವರು ಬಂಧಿತರಾಗುವ ಸಾಧ್ಯತೆ ಇದೆ.

‘ಪ್ರಾಸಿಕ್ಯೂಶನ್‌ ಹೇಳಿದ್ದನ್ನು ನಾನು ಆಲಿಸಿದ್ದೇನೆ. ಅಲ್ಲದೆ, ಪೊಲೀಸರ ಚಾಜ್‌ರ್‍ಶೀಟನ್ನು ಕೂಡ ಅವಲೋಕಿಸಿದ್ದೇನೆ. ಸುನಂದಾ ಆತ್ಮಹತ್ಯೆಗೆ ತರೂರ್‌ ಪ್ರಚೋದನೆ ನೀಡಿದರು ಹಾಗೂ ಅವರ ಮೇಲೆ ತರೂರ್‌ ಕ್ರೌರ್ಯ ಎಸಗಿದ್ದರು ಎಂದು ಚಾಜ್‌ರ್‍ಶೀಟ್‌ ಹೇಳುತ್ತದೆ. ಇದನ್ನು ನಾನು ಪರಿಗಣನೆಗೆ ತೆಗೆದುಕೊಂಡಿದ್ದೇನೆ. ಅಲ್ಲದೆ, ಐಪಿಸಿ ಸೆಕ್ಷನ್‌ 306 (ಆತ್ಮಹತ್ಯೆಗೆ ಪ್ರಚೋದನೆ) ಹಾಗೂ 498 ಎ (ಪತಿಯಿಂದ ದೌರ್ಜನ್ಯ) ಅನ್ವಯ ತರೂರ್‌ ವಿರುದ್ಧದ ಆರೋಪಗಳಲ್ಲಿ ಹುರುಳಿರುವುದು ಕಂಡುಬರುತ್ತದೆ’ ಎಮದು ನ್ಯಾಯಾಧೀಶರು ಹೇಳಿದರು.

ನನ್ನ ಮೇಲಿನ ಆರೋಪಗಳು ನಿರಾಧಾರ. ನಾನು ಯಾವಾಗಲೂ ಕಾನೂನಿನ ಪರರಿಪಾಲಕನಾಗಿದ್ದು, ತನಿಖೆಗೆ ಸಹಕಾರ ನೀಡುತ್ತ ಬಂದಿದ್ದೇನೆ.

- ಶಶಿ ತರೂರ್‌, ಕಾಂಗ್ರೆಸ್‌ ಸಂಸದ

click me!