
ಬೆಂಗಳೂರು (ಫೆ.11): ಕುವೆಂಪು ವಿಶ್ವವಿದ್ಯಾಲಯದಲ್ಲಿ 4 ಕೋಟಿ ರೂಪಾಯಿ ಮೊತ್ತದ ಯೋಜನೆಗೆ 11 ಕೋಟಿ ರೂಪಾಯಿ ಪಾವತಿ ಮಾಡಿರೋದನ್ನ ಸಚಿವ ರಾಯರೆಡ್ಡಿ ಸದನದಲ್ಲಿ ಒಂದು ದಿನದ ಹಿಂದೆಯ್ಟೇ ಹೇಳಿಕೆ ನೀಡಿದ್ದರು. ಈಗ ಅದನ್ನೂ ಮೀರಿಸೋ ರೀತಿಯಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಇದು ಬೆಳಕಿಗೆ ಬಂದಿರೋದು ಹಗರಣಗಳ ಸ್ವರ್ಗಸೀಮೆ ಆಗಿರೋ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ. ಇಪ್ಪತ್ತೆರಡು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಕಾಲೇಜು ನಿರ್ಮಾಣ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ಕಂಪನಿಗೆ ವಿಟಿಯು ಪಾವತಿಸಿರೋದು ಎಷ್ಟು ಗೊತ್ತೇ...? ಬರೋಬ್ಬರಿ ಸಾವಿರ ಕೋಟಿ ರೂಪಾಯಿ!
ಪ್ರಾದೇಶಿಕ ಅಸಮಾನತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೆಲ ಹಿಂದುಳಿದ ತಾಲೂಕುಗಳಲ್ಲಿ ಇಂಜಿನಿಯರಿಂಗ್ ಕಾಲೇಜುಗಳನ್ನು ನಿರ್ಮಿಸೋ ಹೊಣೆಗಾರಿಕೆಯನ್ನು ವಹಿಸಿಕೊಂಡಿರೋ ಬೆಳಗಾವಿಯಲ್ಲಿರುವ ವಿ.ಟಿ.ಯು ಕೊರಳಿಗ್ಹೀಗ ಹಗರಣದ ಕುಣಿಕೆ ಬಿದ್ದಿದೆ.
ಗಂಗಾವತಿ ತಾಲೂಕಿನ ವಿರೂಪಪುರ ಗ್ರಾಮದ ಸರ್ವೇ ನಂಬರ್ 53 ರಲ್ಲಿನ 12 ಎಕರೆ ಜಾಗದಲ್ಲಿ ಇಂಜನಿಯರಿಂಗ್ ಕಾಲೇಜು ನಿರ್ಮಾಣ ಯೋಜನೆಯನ್ನು ವಿ.ಟಿ.ಯು. ವಹಿಸಿಕೊಂಡಿದೆ. ಇದರ ಅಂದಾಜು ಮೊತ್ತ 22 ಕೋಟಿ 47 ಲಕ್ಷ ರೂಪಾಯಿ. ಈ ಕಾಮಗಾರಿಯನ್ನು ಬೆಂಗಳೂರು ಮೂಲದ ರೈಟ್ಸ್ ಹೆಸರಿನ ಕಾಂಟ್ರಾಕ್ಟರ್ಗೆ ವಹಿಸಿದೆ. ಆದರೆ, ವಿ.ಟಿ.ಯು. ಈ ಕಂಟ್ರಾಕ್ಟರ್ ಗೆ ಪಾವತಿ ಮಾಡಿರೋ ಮೊತ್ತವನ್ನು ಕೇಳಿದ್ರೆ ನೀವೇ ಶಾಕ್ ಆಗ್ತೀರಿ..
ಗುತ್ತಿಗೆದಾರ ಕಂಪನಿಗೆ ವಿ.ಟಿ.ಯು.ಕೊಟ್ಟಿದ್ದೆಷ್ಟು?
ಇಂಜಿನಿಯರಿಂಗ್ ಕಾಲೇಜು ಕಟ್ಟಡ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗೆ ಅಂದಾಜಿಸಿದ್ದು ಕೇವಲ 22 ಕೋಟಿ 47 ಲಕ್ಷ ರೂಪಾಯಿ. ಆದರೆ ವಿ.ಟಿ.ಯು. ಗುತ್ತಿಗೆದಾರ ಕಂಪನಿಗೆ ಪಾವತಿ ಮಾಡಿರೋದು ಭರ್ಜರಿ ಸಾವಿರ ಕೋಟಿ ರೂಪಾಯಿ. 2015ರ ಜುಲೈ 27ರಂದು ಹೊರಡಿಸಿರುವ ಸರ್ಕಾರಿ ಆದೇಶದ ಪ್ರಕಾರ ಸಾವಿರ ಕೋಟಿ ರೂಪಾಯಿನಲ್ಲಿ ರೈಟ್ಸ್ ಕಂಪನಿಗೆ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಲೆಕ್ಕದಲ್ಲಿ ಒಂದಕ್ಕೊಂದು ತಾಳ ಮೇಳ ಇಲ್ಲ
ವಿ.ಟಿ.ಯು. ಹೇಳ್ತಿರೋದಿಕ್ಕೂ ಮತ್ತು ಸರ್ಕಾರಿ ಆದೇಶದಲ್ಲಿ ಹೇಳಿರೋ ಲೆಕ್ಕದಲ್ಲಿ ಒಂದಕ್ಕೊಂದು ತಾಳ ಮೇಳವೇ ಇಲ್ಲ. 22 ಕೋಟಿ ರೂಪಾಯಿ ಅಂದಾಜು ವೆಚ್ಚದ ಕಟ್ಟಡ ಕಾಮಗಾರಿಗೆ ಸಾವಿರ ಕೋಟಿ ರೂಪಾಯಿಯನ್ನು ಹೇಗೆ ಪಾವತಿ ಮಾಡಲಾಗಿದೆ? ಎಂಬ ಪ್ರಶ್ನೆಗೆ ವಿ.ಟಿ.ಯು. ಸರಿಯಾದ ಉತ್ತರವನ್ನು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಕೊಡ್ಬೇಕು ಎಂದು ಆಂತರಿಕ ಆರ್ಥಿಕ ಸಲಹೆಗಾರರು ಪತ್ರ ಬರೆದಿದ್ದಾರೆ.
ವಿ.ಟಿ.ಯು.ನಲ್ಲಿ ನಡೆದಿರೋ ಹತ್ತಾರು ಅಕ್ರಮಗಳ ಕುರಿತು ಈಗಾಗ್ಲೇ ಜಸ್ಟೀಸ್ ಕೇಶವನಾರಾಯಣ ಅವರು ರಿಪೋರ್ಟ್ ಕೊಟ್ಟಿದ್ದಾರೆ. ಈ ರಿಪೋರ್ಟ್ ಆಧರಿಸಿ ಇದುವರೆಗೂ ಕಠಿಣ ಕ್ರಮ ಕೈಗೊಂಡಿಲ್ಲ. ಇದರ ಮಧ್ಯೆಯೇ ಬೆಳಕಿಗೆ ಬಂದಿರುವ ಸಾವಿರ ಕೋಟಿ ರೂಪಾಯಿ ಹಗರಣ ಕುರಿತು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ಏನ್ ಕ್ರಮ ತಗೋತಾರೆ ಅನ್ನೋದನ್ನು ಕಾದು ನೋಡ್ಬೇಕು.
ಜಿ.ಮಹಾಂತೇಶ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.