
ನವದೆಹಲಿ (ಮೇ. 09): ಸ್ಪಷ್ಟ ಗುರಿಯೊಂದು ಇದ್ದು, ಅದಕ್ಕೆ ಅಗತ್ಯದ ಪೂರ್ವ ಸಿದ್ಧತೆ ಮಾಡಿಕೊಂಡರೆ, ಆ ಗುರಿ ಮುಟ್ಟುವುದು ಕಷ್ಟದ ವಿಚಾರವೇನಲ್ಲ. ಇದಕ್ಕೆ ನಿದರ್ಶನವೆಂಬಂತಿರುವ ಘಟನೆಯೊಂದು ಕೇರಳದ ಎರ್ನಾಕುಲಂ ರೈಲ್ವೆ ನಿಲ್ದಾಣದಲ್ಲಿ ಘಟಿಸಿದೆ. ಹೌದು, ರೈಲ್ವೆ ನಿಲ್ದಾಣದ ಕೂಲಿ ಕೆಲಸ ಮಾಡುವ ಶ್ರೀಕಾಂತ್ ಎಂಬ ವ್ಯಕ್ತಿಯು ರೈಲ್ವೆ ನಿಲ್ದಾಣದ ವೈಫೈ ಸಹಕಾರದಿಂದಲೇ ಇಂದು ಕೇರಳ ನಾಗರಿಕ ಸೇವಾ ಆಯೋಗದ ಪರೀಕ್ಷೆಯನ್ನು ಪಾಸು ಮಾಡಿದ್ದಾರೆ.
ಇಲ್ಲಿನ ಎರ್ನಾಕುಲಂ ರೈಲ್ವೆ ನಿಲ್ದಾಣ (ಜಂಕ್ಷನ್)ದಲ್ಲಿ ಕಳೆದ ಐದು ವರ್ಷಗಳಿಂದ ದಿನಗೂಲಿ ಮಾಡುವುದರಿಂದಲೇ ಜೀವನ ಕಂಡುಕೊಂಡಿದ್ದ ಶ್ರೀನಾಥ್ ಅವರಿಗೆ ನಾಗರಿಕ ಸೇವಾ ಪರೀಕ್ಷೆ ಪಾಸು ಮಾಡಬೇಕು ಎಂಬ ಆಕಾಂಕ್ಷೆಯಿತ್ತು. ಆದಾಗ್ಯೂ, ಇದಕ್ಕೆ ಕುಟುಂಬದ ಬಡತನ ಅಡ್ಡಿಯಾಗಿತ್ತು. ಆದರೆ, 2016 ರಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರ ಎಲ್ಲ ದೇಶದ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆಯನ್ನು ಆರಂಭಿಸಿತ್ತು. ಇದರ ಲಾಭ ಪಡೆದ ಶ್ರೀಕಾಂತ್ ಅವರು ತಮ್ಮ ಮೂರನೇ ಯತ್ನದಲ್ಲೇ ರಾಜ್ಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಸಾವಿರಾರು ಮಂದಿಗೆ ಪ್ರೇರಣೆಯಾಗಿದ್ದಾರೆ.
ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಶ್ರೀಕಾಂತ್, ‘ಮೂರು ಬಾರಿ ಪರೀಕ್ಷೆ ಎದುರಿಸಿದ್ದೇನೆ. ಆದರೆ, ಇದೇ ಮೊದಲ ಬಾರಿಗೆ ರೈಲ್ವೆ ನಿಲ್ದಾಣದ ವೈಫೈ ಸದುಪಯೋಗ ಪಡೆದುಕೊಂಡು ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ. ರೈಲ್ವೆ ಪ್ರಯಾಣಿಕರ ಸಾಮಾನುಗಳನ್ನು ತೆಗೆದುಕೊಂಡು ಹೋಗಬೇಕಾದರೆ, ಕಿವಿಯಲ್ಲಿ ಇಯರ್‌ಫೋನ್ ಮೂಲಕ ಸ್ಟಡಿ ಮೆಟೀರಿಯಲ್‌ಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಅಲ್ಲದೆ, ಪ್ರಶ್ನಾವಳಿಗಳನ್ನು ಬಿಡಿಸುವ ಯತ್ನ ಮಾಡುತ್ತಿದ್ದೆ. ಕೆಲಸವೆಲ್ಲವೂ ಮುಗಿದ ಬಳಿಕ ರಾತ್ರಿ ಹೊತ್ತಿನಲ್ಲಿ ಮಲಗುವ ಮುನ್ನ ಎಲ್ಲವನ್ನೂ ಪುನಾರವರ್ತನೆ ಮಾಡಿಕೊಳ್ಳುತ್ತಿದ್ದೆ,’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.