
ಬೆಂಗಳೂರು : ಸತತವಾಗಿ ರಾಜ್ಯ ಪ್ರವಾಸ ಕೈಕೊಳ್ಳುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ವಿರುದ್ಧ ವಿಪರೀತ ಸುಳ್ಳು ಆರೋಪ ಮಾಡುತ್ತಿದ್ದಾರೆ. ಜತೆಗೆ, ಐಟಿ, ಇಡಿಯಂತಹ ಕೇಂದ್ರೀಯ ಸಂಸ್ಥೆಗಳನ್ನು ಬಳಸಿ ಕೊಂಡು ಕಾಂಗ್ರೆಸ್ ನಾಯಕರನ್ನು ಹಣಿಯಲಾಗುತ್ತಿದೆ.
ಇದೆಲ್ಲದರ ಪರಿಣಾಮವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸಂಕಷ್ಟದಲ್ಲಿದೆ. ಹೀಗಾಗಿ ಅತಿಯಾದ ಆತ್ಮವಿಶ್ವಾಸ, ವೈಯಕ್ತಿಕ ಭಿನ್ನಾಭಿಪ್ರಾಯ ಹಾಗೂ ಬೇಸರಗಳನ್ನು ಬಿಟ್ಟು ಮತ್ತೆ ಪಕ್ಷ ವನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಿನಿಂದ ಕೆಲಸ ಮಾಡಿ. ಅತಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಶುಕ್ರವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ರಾಜಕಾರಣದ ಹಾಲಿ ಸ್ಥಿತಿಯನ್ನು ಪರಿಚಯ ಮಾಡಿಕೊಟ್ಟು ನೀಡಿದ ಎಚ್ಚರಿಕೆಯಿದು.
ಬಿಜೆಪಿ ನಡೆಸುತ್ತಿರುವ ತಂತ್ರಗಳಿಗೆ ಪ್ರತಿ ತಂತ್ರ ಹಣೆದು, ಆ ಪಕ್ಷ ಹಾಗೂ ನಾಯಕರ ನಿಜ ಸ್ವರೂಪವನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು. ಆದರೆ, ಕಾಂಗ್ರೆಸ್ ಪದಾಧಿಕಾರಿಗಳು ಅತಿಯಾದ ಆತ್ಮವಿಶ್ವಾಸದಲ್ಲಿದ್ದಂತೆ ಕಾಣುತ್ತಿದೆ. ಇಂತಹ ಅತಿ ಆತ್ಮವಿಶ್ವಾಸ ಬೇಡ.
ವಾಸ್ತವವಾಗಿ ನಾವು ಈಗ ಅಕ್ಷರಶಃ ಯುದ್ಧ ಭೂಮಿಯಲ್ಲಿದ್ದೇವೆ. ನಡೆಯುತ್ತಿರುವುದು ಪಕ್ಕಾ ಯುದ್ಧ. ಬಿಜೆಪಿ ತನ್ನೆಲ್ಲ ಸಾಮರ್ಥ್ಯವನ್ನು ಪ್ರಯೋಗಿಸಿ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಇಂತಹ ಸಂದರ್ಭದಲ್ಲೂ ಕಾಂಗ್ರೆಸ್ ಪದಾಧಿ ಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಂಡಾಗಲೂ ಕೆಲ ಪದಾಧಿಕಾರಿ ಗಳು ಈ ಪ್ರವಾಸಕ್ಕೆ ಗೈರು ಹಾಜರಾಗಿದ್ದರು. ಅಂಥವರು ಪಕ್ಷಕ್ಕೆ ಬೇಕಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.