ಡಿಕೆಶಿ ಕೋರ್ಟ್ ಮೊರೆ: ಬಿಜೆಪಿ ಶಾಸಕನಿಗೆ ಸಂಕಷ್ಟ..!

By Web DeskFirst Published Aug 4, 2019, 3:15 PM IST
Highlights

ಐಟಿ, ಇಡಿ ಪ್ರಕರಣಗಳಿಂದ ಮುಕ್ತಿಗೊಳಿಸಲು ಡಿ.ಕೆ.ಶಿವಕುಮಾರ್ ಅವರು ಸಹಾಯ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರದ ಸಚಿವರುಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕಗೆ ಸಂಕಷ್ಟ ಎದುರಾಗಿದೆ.

ಬೆಂಗಳೂರು, [ಆ.04]: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್​ ಅವರು 204 ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಬಸನಗೌಡ ಪಾಟೀಲ್​ ಯತ್ನಾಳ್​ ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿರುವ ಡಿ.ಕೆ.ಶಿವಕುಮಾರ್​, ಕನಕಪುರದ ಸೀನಿಯರ್​ ಸಿವಿಲ್​ ಜಡ್ಜ್​ ಹಾಗೂ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ. 

'ಡಿಕೆಶಿ ರಾಜಕೀಯ ಅವಸಾನ ಸನ್ನಿಹಿತ'

ಅರ್ಜಿ ವಿಚಾರಣೆ ಅಂಗೀಕಾರ ಮಾಡಿರುವ ನ್ಯಾಯಾಧೀಶರು, ಬಸನಗೌಡರಿಗೆ ಸಮನ್ಸ್​ ಜಾರಿ ಮಾಡಿದ್ದು ಸೆಪ್ಟೆಂಬರ್​ 18ಕ್ಕೆ ವಿಚಾರಣೆ ನಿಗದಿಮಾಡಲಾಗಿದೆ.

ಬಸನಗೌಡ ಪಾಟೀಲ್​ ಯತ್ನಾಳ್ ಅವರು ಜೂ.23ರಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಡಿ.ಕೆ.ಶಿವಕುಮಾರ್​ ಅವರು ತಮ್ಮ ವಿರುದ್ಧ ದಾಖಲಾಗಿರುವ ಐಟಿ, ಇಡಿ ಪ್ರಕರಣಗಳಿಂದ ಮುಕ್ತಿಗೊಳಿಸಲು ಸಹಾಯ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರದ ಸಚಿವರುಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. 

ನನ್ನ ವಿರುದ್ಧದ ಪ್ರಕರಣಗಳನ್ನು ಮುಕ್ತಾಯ ಮಾಡಿದರೆ ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ನಾನು ವಿರೋಧ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಯತ್ನಾಳ್​ ಹೇಳಿಕೆ ನೀಡಿದ್ದರು.

ಯತ್ನಾಳ್​ ಅವರ ಈ ಹೇಳಿಕೆ ಎಲೆಕ್ಟ್ರಾನಿಕ್​ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಹೇಳಿಕೆಯಿಂದ ನನ್ನ ಪ್ರಾಮಾಣಿಕತೆ, ನೈತಿಕತೆ, ಪ್ರತಿಷ್ಠೆ ಹಾಗೂ ವರ್ಚಸ್ಸಿಗೆ ಧಕ್ಕೆಯಾಗಿದೆ. ಅವರ ಆರೋಪ ಆಧಾರ ರಹಿತ, ದುರುದ್ದೇಶಪೂರ್ವಕ, ಬೇಜವಾಬ್ದಾರಿಯಿಂದ ಕೂಡಿದ್ದು ಮಾನಹಾನಿಯಾಗಿದೆ ಎಂದು ಶಿವಕುಮಾರ್​ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

click me!