ರಾಜೀನಾಮೆಗೆ ಮುಂದಾದ ಇಬ್ಬರು ಕಾಂಗ್ರೆಸ್ ಮುಖಂಡರು?

By Web DeskFirst Published Sep 26, 2018, 8:24 AM IST
Highlights

ಕಾಂಗ್ರೆಸ್ ನಲ್ಲಿ ಇದೀಗ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ವಿರುದ್ಧವೇ ಅಸಮಾಧಾನ ಭುಗಿಲೆದ್ದಿದೆ. ಅವರು  ತಮ್ಮಹಿತ ಕಾಯುವಲ್ಲಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ತಿರುಗಿ ಬಿದ್ದಿದ್ದಾರೆ. 

ಬೆಂಗಳೂರು :  ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಹಿತ ಕಾಯುವ ಹೊಣೆ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವಿರುದ್ಧ ಕಾಂಗ್ರೆಸ್ ಶಾಸಕರು ತಿರುಗಿಬಿದ್ದಿದ್ದಾರೆ. ಅನುದಾನ, ವರ್ಗಾವಣೆ ವಿಚಾರ ಮಾತ್ರವಲ್ಲ ಕ್ಷೇತ್ರದ ಸಣ್ಣ ಪುಟ್ಟ ವಿಚಾರಗಳಲ್ಲೂ ಕಾಂಗ್ರೆಸ್ ಶಾಸಕರ ಬೇಡಿಕೆ ಈಡೇರಿಸದ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಶಾಸಕರ ಹಿತ ಕಾಯುವ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಪರ ಮೇಶ್ವರ್ ಬಗ್ಗೆ ತೀವ್ರ ಆಕ್ರೋಶ ಸ್ಫೋಟಗೊಂಡಿದೆ.

ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ನೇರವಾಗಿಯೇ ಪರಮೇಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಇದ ರಿಂದ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣ ವಾಯಿತು. ಇದೇ ವೇಳೆ ಬಳ್ಳಾರಿ ವಿಚಾರವಾಗಿ ಶಾಸಕರಾದ ಆನಂದಸಿಂಗ್ ಹಾಗೂ ಭೀಮಾ ನಾಯ್ಕ್ ನಡುವೆ ಜಟಾಪಟಿ ನಡೆದು ಪರಿಸ್ಥಿತಿ ಕೈ ಮೀರುವ ಹಂತವನ್ನು ತಲುಪಿತ್ತು ಎನ್ನಲಾಗಿದೆ.

ಜೆಡಿಎಸ್ ತನ್ನ ‘ಫಾರ್ಮುಲಾ 70’ (70 ಸ್ಥಾನ ಗೆಲ್ಲುವ ಸ್ಕೀಮ್) ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಪರಾಜಿತ ಅಭ್ಯರ್ಥಿಗಳ ಮಾತಿಗೆ ಹೆಚ್ಚು ಮಣೆ ಹಾಕಲಾಗುತ್ತಿದೆ. ಕಾಂಗ್ರೆಸ್ ಶಾಸಕರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಲಾಗುತ್ತಿಲ್ಲ. ಕ್ಷೇತ್ರದಲ್ಲಿ ಗಣೇಶ ಹಬ್ಬದಂತಹ ವಿಚಾರದಲ್ಲೂ ಎಚ್.ಡಿ. ಕುಮಾರ ಸ್ವಾಮಿ ತಲೆ ಹಾಕುತ್ತಾರೆ. ಲೋಕಸಭಾ ಚುನಾವಣೆ ಯಲ್ಲಿ ಪಕ್ಷದ ಹಿತ ಕಾಯಬೇಕು ಎಂದು ಎಲ್ಲವನ್ನುಸಹಿಸಿಕೊಂಡು ಬಂದಿದ್ದೇವೆ. 

ಈಗ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾ? ರಾಜೀನಾಮೆಯೇ ಕೊಟ್ಟು ಬಿಡೋಣವೇ ಎಂದು ಶಾಸಕರಾದ ಎಸ್.ಟಿ. ಸೋಮಶೇಖರ್, ನಾರಾಯಣಸ್ವಾಮಿ ಸಭೆಯಲ್ಲಿ ಪ್ರಶ್ನಿಸಿದ್ದು, ಇದಕ್ಕೆ ಎಲ್ಲಾ ಶಾಸಕರು ಒಕ್ಕೊರಲಿನಿಂದ ಬೆಂಬಲ ನೀಡಿದರು ಎನ್ನಲಾಗಿದೆ. 

ಸಿಎಂ ಕಾಯಿಸ್ತಾರೆ: ವರ್ಗಾವಣೆ ವಿಚಾರ ಮಾತ್ರವಲ್ಲ ಸಣ್ಣ ಪುಟ್ಟ ವಿಚಾರಗಳಲ್ಲೂ ಕಾಂಗ್ರೆಸ್ ಶಾಸಕರ ಮಾತು ನಡೆಯುತ್ತಿಲ್ಲ. ಅನುದಾನ ಸೇರಿದಂತೆ ಯಾವುದೇ ವಿಚಾರಕ್ಕೂ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಮುಂದಾದರೆ, ಗಂಟೆ ಗಟ್ಟಲೇ ಕಾಯಿಸುತ್ತಾರೆ. ಕಷ್ಟ ಪಟ್ಟು ಭೇಟಿ ಮಾಡಿ ಅಹವಾಲು ಸಲ್ಲಿಸಿದರೆ ಕಾನೂನು ರೀತಿ ಪರಿಶೀಲಿಸಿ ಎಂದು ಬರೆಯುತ್ತಾರೆ. 

ಆದರೆ, ಜೆಡಿಎಸ್‌ನ ಶಾಸಕರು ಸಲ್ಲಿಸುವ ಅಹವಾಲುಗಳಿಗೆ ಕೂಡಲೇ ಕಡತ ಮಂಡಿಸಿ ಎಂದು ಬರೆಯುತ್ತಾರೆ. ಪ್ರಶ್ನಿಸಿದರೆ, ತಮ್ಮ ಕಚೇರಿಯ ಸಿಬ್ಬಂದಿ ಪ್ರಭು ಅವರನ್ನು ಸಂಪರ್ಕಿಸಿ ಎಂದು ಹೇಳುತ್ತಾರೆ. ಪರಾಜಿತರಿಗೆ ಮಣೆ, ಪರಂ ಮೌನ: ಇದಿಷ್ಟೇ ಅಲ್ಲ, ಕ್ಷೇತ್ರದಲ್ಲಿ ಪರಾಜಿತ ಜೆಡಿಎಸ್ ಅಭ್ಯರ್ಥಿಯ ಮಾತಿಗೆ ನಮಗಿಂತ ಹೆಚ್ಚಿನ ಮೌಲ್ಯ ದೊರೆಯುತ್ತಿದೆ. ವರ್ಗಾವಣೆ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಪರಾಜಿತ ಜೆಡಿಎಸ್ ಅಭ್ಯರ್ಥಿಯ ಮಾತೇ ನಡೆಯುತ್ತಿದೆ. ಕ್ಷೇತ್ರದ ಮೇಲೆ ನಮಗೆ ಹಿಡಿತವೇ ತಪ್ಪಿಹೋಗುವಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಬಗ್ಗೆ ನಾವು ಯಾರ ಬಳಿ ಅಹವಾಲು ಒಯ್ಯಬೇಕು. ಪರಮೇಶ್ವರ್ ಅವರ ಬಳಿ ದೂರು ಒಯ್ದರೆ ಪ್ರಯೋಜನವೇ ಇಲ್ಲ. ಅವರಂತೂ ಕಾಂಗ್ರೆಸ್ ಶಾಸಕರ ಮಾತುಗಳನ್ನು ಕೇಳುತ್ತಲೇ ಇಲ್ಲ ಎಂದು ಪರಮೇಶ್ವರ್ ಸಮ್ಮುಖವೇ ನೇರವಾಗಿ ಆರೋಪಿಸಿದರು ಎಂದು ಮೂಲಗಳು ತಿಳಿಸಿವೆ. 

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಂತೂ ಕಾಂಗ್ರೆಸ್ ಶಾಸಕರಿಗೆ ಯಾವುದೇ ಬೆಲೆ ನೀಡುತ್ತಿಲ್ಲ. ಅವರಿಗಾಗಿ ಗಂಟೆ ಗಟ್ಟಲೇ ಕಾದು ಕಾದು ಸಾಕಾಗಿದೆ. ಕಾಂಗ್ರೆಸ್ ಬೆಂಬಲವಿಲ್ಲದೆ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾರೆಯೇ? ನಮ್ಮ ಬೆಂಬಲದಿಂದ ಸರ್ಕಾರ ರಚಿಸಿದ ಮೇಲೆ ನಮ್ಮನ್ನು ಈ ಪ್ರಮಾಣದಲ್ಲಿ ನಿರ್ಲಕ್ಷಿಸು ತ್ತಿದ್ದರೂ ನಾವು ಸಹಿಸಿಕೊಳ್ಳಬೇಕೇ? ಕ್ಷೇತ್ರದ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಶಾಸಕರಾಗಿದ್ದು ಏನು ಪ್ರಯೋಜನ? ನಮ್ಮ ಕ್ಷೇತ್ರಗಳಲ್ಲಿ ಜೆಡಿಎಸ್ ಅನ್ನು ಬೆಳೆಸಲು ಮ್ಮಿಶ್ರ ಸರ್ಕಾರಕ್ಕೆ ನಾವು ಬೆಂಬಲ ನೀಡಿದ್ದೇವೆಯೇ? ಈ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಯಾರಾದರೂ ವಹಿಸಿಕೊಳ್ಳಲೇಬೇಕು.

ನಮಗಂತೂ  ಕುಮಾರಸ್ವಾಮಿ ಮುಂದೆ ನಿಂತು ಸಾಕಾಗಿ ಹೋಗಿದೆ. ಇನ್ನು ನಾವು ಕುಮಾರಸ್ವಾಮಿ ಮುಂದೆ ನಿಲ್ಲಲು ತಯಾರಿಲ್ಲ. ಪರಮೇಶ್ವರ್ ಅವರು ಕೂಡ ನಮ್ಮ ಅಹವಾಲು ಕೇಳುತ್ತಿಲ್ಲ. ಹೀಗಾಗಿ ನಮ್ಮ ಹಿತ ಯಾರು ಕಾಪಾಡುತ್ತಿರಾ ಈ ಹೊಣೆಯನ್ನು ಯಾರು ವಹಿಸಿಕೊಳ್ಳುವಿರಿ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸಭೆಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು ಎಂದು ಮೂಲಗಳು ಹೇಳಿವೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರೂ ಶಾಸಕರು ತೃಪ್ತರಾಗಲಿಲ್ಲ ಎನ್ನಲಾಗಿದೆ. ರಾಮಲಿಂಗಾರೆಡ್ಡಿ ಸೇರಿದಂತೆ ಕೆಲ ಶಾಸಕರು ಸಭೆಯಿಂದ ಹೊರ ನಡೆದರು ಎಂದು ಮೂಲಗಳು ತಿಳಿಸಿವೆ.

click me!