ಮೋದಿ ಜನರ ಪ್ರಧಾನಿ: ಬದಲಾಗ್ತಿದೆ ಕೈ ನಾಯಕರ ಧ್ವನಿ!

By Web DeskFirst Published Aug 23, 2019, 3:59 PM IST
Highlights

ಮೋದಿ ಅವರನ್ನು ತೆಗಳಿದರೆ ಏನೂ ಪ್ರಯೋಜನವಿಲ್ಲ ಎಂದ ಕೈ ನಾಯಕ| ಇದು ಮೋದಿ ಅವರ ಕೆಲಸ ಗುರುತಿಸುವ ಸಮಯ ಎಂದ ಜೈರಾಮ್ ರಮೇಶ್| ನರೇಂದ್ರ ಮೋದಿ ಜನರಿಗೆ ಹತ್ತಿರವಾಗಿರುವ ಪ್ರಧಾನಿ ಎಂದ ಜೈರಾಮ್ ರಮೇಶ್| ಮೋದಿ ಅವರ ಯೋಜನೆ ಹೊಗಳುವುದು ತಪ್ಪಲ್ಲ ಎಂದ ಅಭಿಷೇಕ್ ಮನು ಸಿಂಘ್ವಿ|

ನವದೆಹಲಿ(ಆ.23): ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಹೊಗಳುವ ಜಗತ್ತು ಒಂದೆಡೆಯಾದರೆ, ಅದನ್ನು ತೆಗಳುವ ಮೂಲಕವೇ ರಾಜಕೀಯ ಅಸ್ತಿತ್ವ ಹುಡುಕುತ್ತಿರುವ ಕಾಂಗ್ರೆಸ್ ಇನ್ನೊಂದೆಡೆ.

ಆದರೆ ಇದೀಗ ಕೈ ನಾಯಕರ ವರಸೆಯೂ ಬದಲಾಗುತ್ತಿದೆ. ಕೇವಲ ಪ್ರಧಾನಿ ಮೋದಿ ಅವರನ್ನು ಟೀಕಿಸುವುದರಿಂದ ರಾಜಕೀಯ ಲಾಭ ಸಾಧ್ಯವಿಲ್ಲ ಎಂದು ಕೈ ನಾಯಕರು ಅರಿತಂತಿದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರನ್ನು ಹೊಗಳುವ ಮೂಲಕ ಕೆಲವು ಕಾಂಗ್ರಸ್ ನಾಯಕರು ಅಚ್ಚರಿ ಮೂಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ಆಡಳಿತ ವಿಧಾನ ಯಾವಾಗಲೂ ಕೆಟ್ಟದು ಎಂದು ಪ್ರತಿ ಬಾರಿಯೂ ಅವರನ್ನು ದೂಷಿಸುವುದು ಸರಿಯಲ್ಲ, ಇದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಮೋದಿಯವರ ಕೆಲಸವನ್ನು ಗುರುತಿಸುವ ಸಮಯ ಇದಾಗಿದ್ದು, ದೇಶದ ಜನ ಅವರ ಆಡಳಿತ ವೈಖರಿಯನ್ನು ಮೆಚ್ಚಿದ್ದರಿಂದಲೇ ಅವರು ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ ಎಂದು ಜೈರಾಮ್ ರಮೇಶ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಭಾರತೀಯ ಜನತಾ ಪಾರ್ಟಿ ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 37.4ರಷ್ಟು ಮತಗಳನ್ನು ಪಡೆದಿದೆ. ಅದರಂತೆ ಎನ್‌ಡಿಎ ಮೈತ್ರಿಕೂಟ ಒಟ್ಟಾರೆ ಶೇಕಡಾ 45ರಷ್ಟು ಮತಗಳನ್ನು ಪಡೆದಿದೆ. ಇದು ಮೋದಿ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದು ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಪ್ರತಿ ಬಾರಿಯೂ ಮೋದಿಯವರನ್ನು ತೆಗಳುತ್ತಾ, ಟೀಕಿಸುತ್ತಾ ಹೋದರೆ ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಮಾಜಿ ಕೇಂದ್ರ ಸಚಿವ, ಬದಲಾದ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಪ್ರತಿಪಕ್ಷಗಳು ತಮ್ಮ ನೀತಿ ನಿರೂಪಣೆ ನಿರ್ಧರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಕಾಂಗ್ರೆಸ್ ಮತ್ತೋರ್ವ ನಾಯಕ ಅಭಿಷೇಕ್ ಮನು ಸಿಂಘ್ವಿ, ವಿರೋಧ ಪಕ್ಷಗಳದ್ದು ಸೈದ್ಧಾಂತಿಕ ವಿರೋಧ ಇರಬೇಕೆ ಹೊರತು ವ್ಯಕ್ತಿಯಾಧಾರಿತ ವಿರೋಧ ಸಲ್ಲದು ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಟೀಕಿಸುವ ಪ್ರತಿಪಕ್ಷ ನಾಯಕರ ರೀತಿ ಬದಲಾಗಲಿದೆ ಎಂಬ ಮುನ್ಸೂಚನೆ ಈ ನಾಯಕರ ಹೇಳಿಕೆಗಳಿಂದ ದೊರೆತಿದೆ ಎಂದು ಹೇಳಬಹುದು.

click me!