
ಬೆಂಗಳೂರು(ಆ. 02): ಡಿಕೆ ಶಿವಕುಮಾರ್ ಮನೆ-ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದ ಘಟನೆ ಬಗ್ಗೆ ಇಡೀ ಕಾಂಗ್ರೆಸ್ ಕೆಂಡಾಮಂಡಲವಾಗಿ ಒಗ್ಗೂಡಿದೆ. ಕಾಂಗ್ರೆಸ್ ನಾಯಕರನ್ನು ಹಳಿಯಲೆಂದೇ ದುರುದ್ದೇಶಪೂರ್ವಕವಾಗಿ ಕೇಂದ್ರ ಸರಕಾರವು ಐಟಿ ದಾಳಿಯನ್ನು ಆಯೋಜಿಸಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ ಅವರು ಮೋದಿಯವರನ್ನು ಆಧುನಿಕ ಭಸ್ಮಾಸುರ ಎಂದು ಬಣ್ಣಿಸಿದ್ದಾರೆ.
ಮೋದಿ ನೋಟ್ ಬ್ಯಾನ್ ಮಾಡಿ ದೇಶದ ಆರ್ಥಿಕತೆಯನ್ನು ಭಸ್ಮ ಮಾಡಿದ್ದಾರೆ. ಈಗ ಕೇಂದ್ರದಲ್ಲಿ ವಿಪಕ್ಷಗಳನ್ನ ಭಸ್ಮ ಮಾಡಲು ಹುನ್ನಾರ ಮಾಡಿದ್ದಾರೆ ಎಂದು ಉಗ್ರಪ್ಪ ಹೇಳಿದ್ದಾರೆ.
ಬಿಹಾರ, ಮಣಿಪುರ, ಗೋವಾದಲ್ಲೂ ಬಿಜೆಪಿ ಅನಧಿಕೃತವಾಗಿ ಸರಕಾರ ರಚನೆ ಮಾಡಿದೆ. ಇನ್ನೂ ಏನೇ ಮಾಡಿದರೂ ದೇಶದಲ್ಲಿ ಕಾಂಗ್ರೆಸ್'ನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಸಾಧ್ಯವಿಲ್ಲ ಎಂದು ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮೋದಿ ಹಿಟ್ಲರ್ ಎಂದ ಗುಂಡೂರಾವ್:
ಮೋದಿಗೂ ಹಿಟ್ಲರ್'ಗೂ ಯಾವುದೇ ವ್ಯತ್ಯಾಸವಿಲ್ಲ. ಐಟಿ ದಾಳಿ ಹಿಂದೆ ರಾಜಕೀಯ ಧ್ವೇಷವಿದೆ. ಕಾಂಗ್ರೆಸ್ ಪಕ್ಷವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಪಾದಿಸಿದ್ದಾರೆ.
ಐಟಿ, ಇಡಿ ಮತ್ತು ಸಿಬಿಐ ಸಂಸ್ಥೆಗಳು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕೈಗೊಂಬೆಯಾಗಿವೆ. ಇಂತಹ ಏಜೆನ್ಸಿಗಳನ್ನು ಕೇಂದ್ರ ಸರಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದೂ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಗುಜರಾತಿನ ಕಾಂಗ್ರೆಸ್ ಶಾಸಕರು ಇಲ್ಲಿಗೆ ಬಂದದ್ದರಲ್ಲಿ ತಪ್ಪೇನೂ ಇಲ್ಲ. ಅಲ್ಲಿನ ಶಾಸಕರನ್ನು ಬೆದರಿಸುವ ಕಾರ್ಯ ನಡೆದಿದೆ. ಇದು ಬಿಜೆಪಿಯ ನೀಚ ಮಟ್ಟದ ರಾಜಕಾರಣವಾಗಿದೆ. ಕರ್ನಾಟಕ ರಾಜ್ಯಕ್ಕೆ ಅಗೌರವ ತೋರುವ ಕಾರ್ಯವಾಗಿದೆ. ಬಿಜೆಪಿ ಯಾವತ್ತೂ ಕೂಡ ಭಾಷೆ, ನೆಲ, ಜಲ, ಅನುದಾನದ ವಿಚಾರದಲ್ಲಿ ನಮ್ಮ ಪರ ನಿಲ್ಲುತ್ತಿಲ್ಲ ಎಂದು ಗುಂಡೂರಾವ್ ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.