
ಬೆಂಗಳೂರು : ರಾಜ್ಯಕ್ಕೆ ಮೂರು ಲಕ್ಷ ಕೋಟಿ ರು. ಅನುದಾನ ನೀಡಿರುವುದಾಗಿ ಸುಳ್ಳು ಹೇಳುತ್ತಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಬಗ್ಗೆ ಲೆಕ್ಕ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ಒತ್ತಾಯಿಸಿದೆ. ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕೃಷಿ ಸಚಿವ ಕೃಷ್ಣ ಬೈರೇಗೌಡ, ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ ಮಾಡಿದ್ದರೂ, ಬಿಜೆಪಿಯ ಅಮಿತ್ ಶಾ ರಾಜ್ಯ ಸರ್ಕಾರಕ್ಕೆ ಪದೇ ಪದೇ ಲೆಕ್ಕ ಕೇಳುತ್ತಿದ್ದಾರೆ.
ಕೇಂದ್ರ ಸರ್ಕಾರ ನಾವು ಕಟ್ಟಿರುವ ತೆರಿಗೆಯ ಶೇ.47ರಷ್ಟು ಮಾತ್ರ ನಮಗೆ ಅನುದಾನದ ರೂಪದಲ್ಲಿ ನೀಡುತ್ತಿದೆ. ಅದರಲ್ಲೂ 10,533 ಕೋಟಿ ರು. ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಹೀಗಿದ್ದರೂ ಮೂರು ಲಕ್ಷ ಕೋಟಿ ಹಣ ನೀಡಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಹೀಗಾಗಿ ಪ್ರಧಾನಿಗಳು 3 ಲಕ್ಷ ಕೋಟಿ ರು. ಅನುದಾನದ ಲೆಕ್ಕ ನೀಡಬೇಕು, ಇಲ್ಲದಿದ್ದರೆ ಅಮಿತ್ ಶಾ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ದಿನೇಶ್ ಗುಂಡೂರಾವ್ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಒಟ್ಟು ತೆರಿಗೆ ಆದಾಯದಲ್ಲಿ ಶೇ.19ರಷ್ಟು ಹಣ ರಾಜ್ಯದಿಂದ ಸಂದಾಯವಾಗುತ್ತಿದೆ. ಆದರೆ ಕೇಂದ್ರ ಸರ್ಕಾರವು ಶೇ.6.3ರಷ್ಟು ಹಣ ಮಾತ್ರ ಕರ್ನಾಟಕಕ್ಕೆ ವಾಪಸ್ ನೀಡುತ್ತಿದೆ. ಉತ್ತರ ಪ್ರದೇಶವು ಕೇಂದ್ರಕ್ಕೆ ಶೇ.7ರಷ್ಟು ತೆರಿಗೆ ಮಾತ್ರ ನೀಡುತ್ತಿದೆ. ಆದರೂ ಶೇ.11.2ರಷ್ಟು ಹಣವನ್ನು ಉತ್ತರ ಪ್ರದೇಶಕ್ಕೆ ನೀಡಲಾಗುತ್ತಿದೆ. ಕನ್ನಡಿಗರ ಹಣವನ್ನು ಪಡೆದುಕೊಂಡು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಹಂಚಿಕೆ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು? ಈ ಬಗ್ಗೆ ಜನತೆಗೆ ಉತ್ತರ ಕೊಡಿ ಎಂದು ಕೇಳಿದರು.
14ನೇ ಹಣಕಾಸು ಆಯೋಗದ ಪ್ರಕಾರ ಕೇಂದ್ರದಿಂದ ರಾಜ್ಯಕ್ಕೆ 2.19 ಲಕ್ಷ ಕೋಟಿ ರು. ಅನುದಾನ ಬರಬೇಕು. ಇದರ ಪ್ರಕಾರ 3 ವರ್ಷದಲ್ಲಿ 96,204 ಕೋಟಿ ರು. ಅನುದಾನ ಬರಬೇಕಿತ್ತು. ಆದರೆ, 84 ಸಾವಿರ ಕೋಟಿ ರು. ಅನುದಾನ ಮಾತ್ರ ನೀಡಿದ್ದಾರೆ. ಇನ್ನೂ 10,553 ಕೋಟಿ ರು. ನೀಡಿಲ್ಲ. ನಿಯಮಗಳ ಪ್ರಕಾರ ನಮಗೆ ಬರಬೇಕಿರುವ ಹಣವೇ ಬಂದಿಲ್ಲ. ಭಾನುವಾರ ನಗರಕ್ಕೆ ಬರಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 10 ಸಾವಿರ ಕೋಟಿ ರು. ಹಣ ಯಾವಾಗ ನೀಡುತ್ತಾರೆ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.
ಶಾ ಸುಳ್ಳಿನ ಸಾರ್ವಭೌಮ: ಕೃಷ್ಣ ಬೈರೇಗೌಡ ಮಾತನಾಡಿ, ರಾಜ್ಯದ ಜನರು ಕೇಂದ್ರದ ಬಳಿ ಭಿಕ್ಷೆ ಬೇಡುತ್ತಿಲ್ಲ. ನಾವು ಕಟ್ಟಿರುವ ತೆರಿಗೆಯ ಪಾಲು ಕೇಳುತ್ತಿದ್ದೇವೆ. ಶಾ ಸುಳ್ಳಿನ ಸಾರ್ವಭೌಮರಂತೆ ವರ್ತಿಸುತ್ತಿದ್ದು, ಮೋದಿ ಅವರೂ ಸಹ ಭಾನುವಾರ ಸುಳ್ಳು ಭರವಸೆ ನೀಡಿ ಹೋಗಬಾರದು. ದೇಶಕ್ಕೆ ಹೆಚ್ಚು ವರಮಾನ ನೀಡುತ್ತಿರುವುದು ಕನ್ನಡಿಗರು. ಈ ವರಮಾನವನ್ನು ಇತರ ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅರ್ಥ ಮಾಡಿಕೊಳ್ಳಬೇಕು. ನೀವು 3 ಲಕ್ಷ ಕೋಟಿ ಎಲ್ಲೆಲ್ಲಿ ನೀಡಿದ್ದೀರಿ ಎಂಬ ಬಗ್ಗೆ ಲೆಕ್ಕ ಕೊಡಬೇಕು ಎಂದರು.
ಬಾಕಿ 10,533 ಕೋಟಿ ರು. ಬಿಡುಗಡೆ ಮಾಡಿ: ಹಣಕಾಸು ಆಯೋಗದ ಪ್ರಕಾರ 2015 – 2016 ರಲ್ಲಿ 27,307 ಕೋಟಿ ರು. ಅನುದಾನ ಬರಬೇಕಿತ್ತು. ಆಗ ಬಂದಿದ್ದು 23,983 ಕೋಟಿ ಮಾತ್ರ ಉಳಿಕೆ 3,319 ಕೋಟಿ ಬರಲಿಲ್ಲ ಎಂದು ಅವರು ಅಂಕಿ-ಅಂಶಗಳ ಸಹಿತ ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.