
ಬೆಂಗಳೂರು : ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಈಗಲೂ ಬದ್ಧನಿದ್ದೇನೆ. ನನ್ನ ಬೆಂಬಲಕ್ಕೆ ಎಷ್ಟುಶಾಸಕರಿದ್ದಾರೆ ಎಂಬುದನ್ನು ಈಗ ಹೇಳುವುದಿಲ್ಲ. ನನಗೆ ನಾಲ್ಕು ದಿನ ಸಮಯ ಕೊಡಿ, ರಾಜೀನಾಮೆ ನೀಡುವುದು ಸೇರಿದಂತೆ ಎಲ್ಲ ವಿಚಾರಗಳನ್ನು ಬಹಿರಂಗಪಡಿಸುತ್ತೇನೆ ಎಂದು ಸಚಿವ ಸ್ಥಾನ ಕಳೆದುಕೊಂಡು ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾನತನಾಡಿದ ಅವರು, ರಾಜೀನಾಮೆ ನೀಡಲು ಈಗಾಗಲೇ ತೆಗೆದುಕೊಂಡಿರುವ ನಿರ್ಧಾರಕ್ಕೆ ಬದ್ಧನಿದ್ದೇನೆ. ಯಾವಾಗ ರಾಜೀನಾಮೆ ನೀಡಬೇಕು ಎಂಬುದನ್ನು ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದರು.
ಹೈಕಮಾಂಡ್ ಭೇಟಿಯಾಗುವಿರಾ ಎಂಬ ಪ್ರಶ್ನೆಗೆ, ಹೈಕಮಾಂಡ್ ಅಲ್ಲ ಯಾರನ್ನೂ ಭೇಟಿಯಾಗುವುದಿಲ್ಲ. ನನ್ನ ವಿರುದ್ಧದ ಎಲ್ಲ ಸುಳ್ಳು ಪ್ರಚಾರಗಳಿಗೂ ಶೀಘ್ರ ಉತ್ತರ ಕೊಡುತ್ತೇನೆ. ರಾಜೀನಾಮೆ ನೀಡುವುದಂತೂ ಸ್ಪಷ್ಟ. ನಾಲ್ಕು ದಿನ ಕಾಲಾವಕಾಶ ಕೊಡಿ, ಎಲ್ಲವನ್ನೂ ಜನರ ಮುಂದಿಡುತ್ತೇನೆ ಎಂದು ಹೇಳಿದರು.
ಮಾಧ್ಯಮಗಳ ವಿರುದ್ಧ ಗರಂ:
ಸಚಿವ ಸ್ಥಾನದಿಂದ ಕೊಕ್ ಸೇರಿದಂತೆ ಇದುವರೆಗಿನ ಎಲ್ಲಾ ಬೆಳವಣಿಗೆಗಳಿಗೂ ಮಾಧ್ಯಮವೇ ಕಾರಣ ಎಂದು ಈ ವೇಳೆ ಹರಿಹಾಯ್ದ ರಮೇಶ್ ಜಾರಕಿಹೊಳಿ, ಎಲ್ಲಾ ಬೆಳವಣಿಗೆಗೂ ನೀವೇ (ಮಾಧ್ಯಮದವರೇ) ಕಾರಣ. ಒಂದೇ ವಾರದಲ್ಲಿ ಹೀರೋ ಆಗಿದ್ದವರನ್ನು ವಿಲನ್ ಆಗಿ, ವಿಲನ್ ಆಗಿದ್ದವರನ್ನು ಹೀರೋ ಆಗಿ ಬಿಂಬಿಸಿದ್ದಾರೆ. ಇನ್ನು ಒಂದು ವಾರ ಕಾಯಿರಿ, ಯಾರು ಹೀರೋ, ಯಾರು ವಿಲನ್, ಯಾವುದು ಸತ್ಯ ಹಾಗೂ ಯಾವುದು ಸುಳ್ಳು ಎಂಬುದನ್ನು ಬಹಿರಂಗ ಪಡಿಸುತ್ತೇನೆ ಎಂದರು.
ನಿಮ್ಮೊಂದಿಗೆ ಎಷ್ಟುಜನ ಶಾಸಕರು ಇದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಕ್ರುದ್ಧರಾದ ಅವರು, ಅದನ್ನು ನಿಮಗೆ ಏಕೆ ಹೇಳಬೇಕು. ಇಷ್ಟಕ್ಕೂ ಅದನ್ನು ಕೇಳಲು ನೀವ್ಯಾರು? ನಿಮಗ್ಯಾಕೆ ಅದೆಲ್ಲ ಹೇಳಬೇಕು. ನಾನು ಹೇಳುವುದಿಲ್ಲ ಎಂದು ಹೇಳಿದರು. ಸುದ್ದಿಗಾರರು ಮತ್ತೆ ಮತ್ತೆ ಇದೇ ಪ್ರಶ್ನೆಯನ್ನು ಕೇಳಿದಾಗ, ನನ್ನನ್ನು ರೇಗಿಸಬೇಡಿ. ಸಮಾಜಕ್ಕೆ ದ್ರೋಹಿಗಳು ನೀವು (ಮಾಧ್ಯಮದವರು) ಎಂದೂ ಹೇಳಿದರು.
ಬಿಜೆಪಿ ಸೇರುವಿರಾ ಎಂಬ ಪ್ರಶ್ನೆಗೆ, ನೀವೇ ಹೋಗಿ ಸೇರಿಕೊಳ್ಳಿ ಎಂದು ಮಾರುತ್ತರಿಸಿದರು.
ಪಕ್ಷ ಸಂಘಟನೆ, ಸಚಿವ ಸಂಪುಟದಲ್ಲಿ ಪಾಲ್ಗೊಳ್ಳದ ಆರೋಪ ತಮ್ಮ ವಿರುದ್ಧ ಕೇಳಿಬಂದಿತ್ತಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಹಾಗೆಂದ ಮಾತ್ರಕ್ಕೆ ಸಚಿವ ಸ್ಥಾನದಲ್ಲಿ ಆಸಕ್ತಿ ಇಲ್ಲ ಎಂದಲ್ಲ ಎಂದ ಅವರು, ಇಷ್ಟಕ್ಕೂ ಅದನ್ನು ನೀವ್ಯಾಕೆ ಕೇಳ್ತೀರಾ? ಕೇಳೋರು ಬೇರೆ ಇದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.