
ನವದೆಹಲಿ [ಅ.02] : ಕರ್ನಾಟಕ ಹಾಗೂ ಕೇರಳ ಮಧ್ಯೆ ತೀವ್ರ ಸಂಘರ್ಷಕ್ಕೆ ಕಾರಣವಾಗಿರುವ ಬಂಡೀಪುರ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ರಾತ್ರಿ ಸಂಚಾರ ನಿಷೇಧ ವಿವಾದ ಮತ್ತಷ್ಟುತೀವ್ರ ಸ್ವರೂಪ ಪಡೆದುಕೊಂಡಿದೆ. ಕೇರಳದ ವಯನಾಡ್ ಸಂಸದರೂ ಆಗಿರುವ ನಿಕಟಪೂರ್ವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಕೇರಳದ ಪರ ದನಿಯೆತ್ತಿದ್ದು, ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ವಿವಾದ ಇತ್ಯರ್ಥಗೊಳಿಸಲು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದಾರೆ.
ಬಂಡೀಪುರ ವಿಷಯ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲು ದೆಹಲಿಗೆ ತೆರಳಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ರಾಹುಲ್ ಗಾಂಧಿ ಕೇರಳ ಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮಧ್ಯೆ ಹಾದು ಹೋಗುವ ಕೇರಳ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-766 ರಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರಾಹುಲ್ ಗಾಂಧಿ, ಕೇರಳ ಸಿಎಂಗೆ ಮನವಿ ಮಾಡಿದ್ದಾರೆ.
ಭೇಟಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಬಂಡೀಪುರದಲ್ಲಿ ರಾತ್ರಿ ನಿಷೇಧ ತೆರವಿಗೆ ವಯನಾಡ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಕೇರಳ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ್ದೇನೆ. ರಾತ್ರಿ ವೇಳೆ ಸಂಚಾರ ನಿಷೇಧದಿಂದಾಗಿ ವಯನಾಡ್, ಕಲ್ಲಿಕೋಟೆ, ಮಲಪ್ಪುರಂಗೆ ಮಾತ್ರವಲ್ಲ ಇಡೀ ಕೇರಳಕ್ಕೆ ಭಾರೀ ಹಾನಿಯಾಗುತ್ತಿದೆ. ಇತ್ತೀಚೆಗೆ ವಯನಾಡ್‌ನಲ್ಲಿ ಸಂಭವಿಸಿದ ಭೂ ಕುಸಿತದ ವೇಳೆ ಕೂಡ ಸಂಚಾರ ನಿಷೇಧದಿಂದಾಗಿ ಭಾರೀ ತೊಂದರೆಯುಂಟಾಗಿತ್ತು. ಈ ಎಲ್ಲಾ ವಿಷಯಗಳನ್ನು ಸಿಎಂ ಗಮನಕ್ಕೆ ತಂದಿದ್ದೇನೆ. ಅವರು ಕೇಂದ್ರ ಸರ್ಕಾರರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ ಈ ಬಗ್ಗೆ ರಾಹುಲ್, ವಿಜಯನ್‌ಗೆ ಪತ್ರ ಕೂಡ ಬರೆದಿದ್ದು, ಕರ್ನಾಟಕ ಹಾಗೂ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಸಲಹೆ ನೀಡಿದ್ದಾರೆ. ಅಲ್ಲದೆ ಸಂಚಾರ ನಿಷೇಧ ತೆರವು ಸಾಧ್ಯವಾಗದೇ ಹೋದಲ್ಲಿ ಪರ್ಯಾಯ ಮಾರ್ಗ ರಚನೆ ಬಗ್ಗೆಯೂ ಕ್ರಮ ಕೈಗೊಳ್ಳಿ. ಜೊತೆಗೆ ನೆದರ್‌ಲೆಂಡ್ ಮಾದರಿ ಇಕೋ ಬ್ರಿಡ್ಜ್ ಅಥವಾ ತಡರಾತ್ರಿ 1 ರಿಂದ 3ರ ವರೆಗೆ ವಾಹನ ಸಂಚಾರ ಮುಕ್ತ ಮಾಡುವ ಅವಕಾಶಗಳನ್ನೂ ಪರಿಶೀಲಿಸಬಹುದು. ಪ್ರಾಣಿ ಸಂರಕ್ಷಣೆ ಹೆಸರಿನಲ್ಲಿ ಮನುಷ್ಯರ ಬದುಕುವ ಹಕ್ಕು ಕಸಿದುಕೊಳ್ಳಬಾರದು ಎಂದು ಹೇಳಿದ್ದಾರೆ.
ಈ ಮಧ್ಯೆ ಸಂಚಾರ ತೆರವುಗೊಳಿಸಬೇಕೆಂದು ಆಗ್ರಹಿಸಿ ವಿವಿಧ ಪಕ್ಷಗಳ ಯುವ ಕಾರ್ಯಕರ್ತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಸುಲ್ತಾನ್ ಬತ್ತೇರಿಯಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ಸೇರಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.