ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನವನ್ನು ಆಚರಣೆ ಮಾಡಲಾಗುತ್ತಿದ್ದು ಈ ದಿನ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ
ನವದೆಹಲಿ [ಅ.02]: ಅಹಿಂಸಾ ಮಾರ್ಗದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಕ್ಕೆ ಇಡೀ ವಿಶ್ವ ಬುಧವಾರ ಸಾಕ್ಷಿಯಾಗಲಿದೆ. ಗಾಂಧೀಜಿ ಸ್ಮರಣೆ, ವಿಚಾರ ಸಂಕಿರಣ, ಸೈಕ್ಲಿಂಗ್, ಪುತ್ಥಳಿ ಅನಾವರಣ, ಭಜನೆ ಸೇರಿದಂತೆ ಜಗತ್ತಿನಾದ್ಯಂತ ಅಸಂಖ್ಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಭಾರತದಲ್ಲಿ ಗಾಂಧಿ ಜಯಂತಿಯ ಮುಖ್ಯ ಕಾರ್ಯಕ್ರಮ ಗುಜರಾತಿನ ಅಹಮದಾಬಾದ್‌ನಲ್ಲಿರುವ ಸಾಬರಮತಿ ನದಿ ದಂಡೆಯ ಮೇಲೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿರುವ ಗ್ರಾಮ ಪಂಚಾಯಿತಿ ಮುಖ್ಯಸ್ಥರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದೇ ವೇಳೆ, ಪ್ಲಾಸ್ಟಿಕ್ ಮುಕ್ತ ಭಾರತ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ. ಅಲ್ಲದೆ ಭಾರತ ಈಗ ಬಯಲು ಶೌಚಮುಕ್ತ ಎಂದು ಪ್ರಕಟಿಸುವ ಸಾಧ್ಯತೆಯೂ ಇದೆ. ಪಶ್ಚಿಮ ಬಂಗಾಳ ಅಸಹಕಾರ ತೋರಿರುವ ಹಿನ್ನೆಲೆಯಲ್ಲಿ ನಗರ ಭಾರತವನ್ನು ಮಾತ್ರವೇ ಬಯಲು ಶೌಚ ಮುಕ್ತ ಎಂದು ಸಾರುವ ಸಂಭವ ಇದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ಸಾಬರಮತಿ ಆಶ್ರಮದ ಸುತ್ತಲಿನ ಗಾಂಧಿ ಅವರಿಗೆ ಸಂಬಂಧಿಸಿದ 60 ಕಟ್ಟಡಗಳನ್ನು ಸೇರಿಸಿ ಒಂದು ಸ್ಮಾರಕ ನಿರ್ಮಾಣ ಮಾಡುವ ಯೋಜನೆಯನ್ನು ಮೋದಿ ಅವರು ಪ್ರಕಟಿಸುವ ಸಾಧ್ಯತೆ ಇದೆ. ಗಾಂಧೀಜಿ ಅಂಚೆ ಚೀಟಿ ಹಾಗೂ ನಾಣ್ಯಗಳನ್ನೂ ಬಿಡುಗಡೆ ಮಾಡಲಾಗುತ್ತದೆ.
ಅ.2ರಿಂದ ಬಿಜೆಪಿ ಸಂಸದರು ಖಾದಿ ಪೋಷಾಕಿನಲ್ಲಿ 150 ಕಿ.ಮೀ. ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ಅ.2ರಿಂದ 9ರವರೆಗೆ ಕಾಂಗ್ರೆಸ್ ಪಕ್ಷದ ನಾಯಕರು ಗಾಂಧಿ ಟೋಪಿ ಧರಿಸಿ, ಅವರ ಫೋಟೋ ಹಿಡಿದು, ಘೋಷಣೆ ಕೂಗುತ್ತಾ ರಾಜ್ಯ ಮಟ್ಟದಲ್ಲಿ ಪಾದಯಾತ್ರೆಗಳನ್ನು ನಡೆಸಲಿದ್ದಾರೆ. ಪ್ಲಾಸ್ಟಿಕ್ ಬಳಕೆ ವಿರುದ್ಧ ಅಭಿಯಾನ ಮೂಡಿಸಲು 1.50 ಲಕ್ಷ ಸೈಕ್ಲಿಸ್ಟ್‌ಗಳು ಬುಧವಾರದಿಂದಿಂದಲೇ ಭಾರತ ಯಾತ್ರೆ ಆರಂಭಿಸಲಿದ್ದಾರೆ.
ಗಾಂಧಿ ಸ್ಮಾರಕಕ್ಕೆ ನಮನ:
ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪಕ್ಷದ ಹಲವು ಹಿರಿಯ ನಾಯಕರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ರಾಜಕೀಯ ನಾಯಕರು ಬುಧವಾರ ಬೆಳಗ್ಗೆ ರಾಜ್‌ಘಾಟ್‌ನಲ್ಲಿರುವ ಗಾಂಧಿ ಸಮಾಧಿ ಸ್ಥಳಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಲಿದ್ದಾರೆ.
ವಿಶ್ವಸಂಸ್ಥೆ ಸೇರಿದಂತೆ ವಿಶ್ವಾದ್ಯಂತ ಆಚರಣೆ
ವಿಶ್ವಸಂಸ್ಥೆಯಲ್ಲಿ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ನೆದರ್ಲೆಂಡ್ ಸರ್ಕಾರ ಮುಂದಿನ ಒಂದು ವಾರ ಸಭೆ, ಸೈಕಲ್ ರಾರಯಲಿ, ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬ್ರಿಟನ್, ದಕ್ಷಿಣ ಕೊರಿಯಾ, ಆಸ್ಪ್ರೇಲಿಯಾ, ಡೊಮಿನಿಕನ್ ರಿಪಬ್ಲಿಕ್ ಸೇರಿದಂತೆ ಹಲವು ದೇಶಗಳು ಅದ್ಧೂರಿ ಗಾಂಧಿ ಜಯಂತಿಗೆ ಭರದ ಸಿದ್ಧತೆ ಮಾಡಿಕೊಂಡಿವೆ. ಲಂಡನ್‌ನಲ್ಲಿ ಸಸ್ಯಾಹಾರ ಉತ್ಸವ ನಡೆಸಲಾಗುತ್ತದೆ. ವಿಶ್ವದ 54 ದೇಶಗಳಲ್ಲಿ ಬುಧವಾರ ಗಾಂಧೀಜಿ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತದೆ.
ಬಿಜೆಪಿಯಿಂದ ಸಂಕಲ್ಪ ಯಾತ್ರೆ
ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬುಧವಾರ ದೆಹಲಿಯಲ್ಲಿ ಪಕ್ಷದ ಗಾಂಧೀ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ದೇಶಾದ್ಯಂತ 4 ತಿಂಗಳು ನಡೆಯುವ ಈ ಆಂದೋಲನದಲ್ಲಿ ಪಕ್ಷದ ನಾಯಕರು ಗಾಂಧಿ ಚಿಂತನೆಗಳು, ಸ್ವಚ್ಛತೆ, ಸರಳತೆ, ಖಾದಿ ಬಳಕೆ, ಅಹಿಂಸೆ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಅಲ್ಲದೆ ಬುಧವಾರ ಪಕ್ಷದ ಎಲ್ಲಾ ನಾಯಕರಿಗೂ ಕನಿಷ್ಠ 2 ಕಿ.ಮೀ ಪಾದಯಾತ್ರೆ ನಡೆಸಿ ಆ ಪ್ರದೇಶವನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಮಾಡುವಂತೆ ಸೂಚಿಸಲಾಗಿದೆ.
ದೇಶಾದ್ಯಂತ ಕಾಂಗ್ರೆಸ್ ಯಾತ್ರೆ
ಕಾಂಗ್ರೆಸ್ ಬುಧವಾರ ದೇಶವ್ಯಾಪಿ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಭಾಗವಾಗಿ ದೆಹಲಿಯಲ್ಲಿ ಸ್ವತಃ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗುವ ಈ ಪಾದಯಾತ್ರೆಯು ದೆಹಲಿ ಕಾಂಗ್ರೆಸ್ ಘಟಕದಿಂದ ಆರಂಭಗೊಂಡು ಮಹಾತ್ಮ ಗಾಂಧೀಜಿ ಅವರ ಸಮಾಧಿ ಇರುವ ರಾಜ್‌ಘಾಟ್‌ನಲ್ಲಿ ಗೌರವ ನಮನ ಸಲ್ಲಿಕೆಯೊಂದಿಗೆ ಸಮಾಪ್ತಿಯಾಗಲಿದೆ.
ಉ.ಪ್ರ.ದಲ್ಲಿ ಸತತ 36 ಗಂಟೆ ಕಲಾಪ
ಉತ್ತರಪ್ರದೇಶ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸತತ 36 ಗಂಟೆ ಕಲಾಪ ನಡೆಸಲು ನಿರ್ಧರಿಸಲಾಗಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಉಭಯ ಸದನಗಳ ಕಲಾಪ ಆರಂಭವಾಗಲಿದೆ. ಹಗಲು-ರಾತ್ರಿ ವಿರಾಮವಿಲ್ಲದೇ ನಡೆಯುವ ಈ ವಿಶೇಷ ವಿಧಾನಮಂಡಲ ಕಲಾಪದಲ್ಲಿ ಮಹಾತ್ಮ ಗಾಂಧಿ ಅವರ ಚಿಂತನೆಗಳು, ಸುಸ್ಥಿರ ಅಭಿವೃದ್ಧಿ ಗುರಿ ಕುರಿತ ವಿಶ್ವಸಂಸ್ಥೆ ನಿಗದಿಪಡಿಸಿರುವ ಗುರಿ ಮತ್ತಿತರ ವಿಷಯಗಳನ್ನು ಚರ್ಚಿಸಲಾಗುತ್ತದೆ.