ಉಪ ಚುನಾವಣೆಗೆ ಯಾರಾಗಲಿದ್ದಾರೆ ಅಭ್ಯರ್ಥಿಗಳು..?

By Web DeskFirst Published Oct 8, 2018, 8:44 AM IST
Highlights

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದು ಈ ವೇಳೆ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲಿದ್ದಾರೆ. 

ಬೆಂಗಳೂರು :  ರಾಜ್ಯದ ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಮಂಗಳವಾರದ ನಂತರ ನಗರಕ್ಕೆ ಆಗಮಿಸಲಿದ್ದು, ಆ ನಂತರ ಪಕ್ಷದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಹಾಗೂ ಚುನಾವಣಾ ಉಸ್ತುವಾರಿಗಳ ನೇಮಕ ಪ್ರಕ್ರಿಯೆ ಆರಂಭವಾಗಲಿದೆ.

ಸೋಮವಾರ ವೇಣುಗೋಪಾಲ್‌ ನಗರಕ್ಕೆ ಆಗಮಿಸಬೇಕಿತ್ತು. ಆದರೆ, ಬದಲಾದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳವಾರ ಕೇರಳದಿಂದ ನೇರ ದೆಹಲಿಗೆ ತೆರಳಲಿದ್ದಾರೆ. ಮಂಗಳವಾರದ ನಂತರ ವೇಣುಗೋಪಾಲ್‌ ನಗರಕ್ಕೆ ಆಗಮಿಸಲಿದ್ದು, ಉಪಚುನಾವಣಾ ಸಮರ ನಡೆಯಲಿರುವ ಶಿವಮೊಗ್ಗ, ಮಂಡ್ಯ, ಬಳ್ಳಾರಿ ಲೋಕಸಭಾ ಕ್ಷೇತ್ರ ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿಗೆ ಪಕ್ಷದ ನಾಯಕರು ಸಭೆ ಸೇರಿ ಕಸರತ್ತು ಆರಂಭಿಸಲಿದ್ದಾರೆ.

ಸದ್ಯದ ಮಟ್ಟಿಗೆ ಯಾವುದೇ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಅಂತಿಮಗೊಳಿಸುವುದಾಗಲಿ, ಕ್ಷೇತ್ರಗಳ ಚುನಾವಣಾ ಉಸ್ತುವಾರಿಗಳನ್ನು ಅಂತಿಮಗೊಳಿಸಲಾಗಿಲ್ಲ. ಆದರೆ, ಆಯಾ ಜಿಲ್ಲಾ ಉಸ್ತುವಾರಿಗಳಿಗೆ ಚುನಾವಣಾ ಉಸ್ತುವಾರಿ ಹೊಣೆ ನೀಡುವ ಸಾಧ್ಯತೆ ಇದೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಡಿ.ಕೆ.ಶಿವಕುಮಾರ್‌ ಅವರಿಗೆ ಬಳ್ಳಾರಿ ಲೋಕಸಭಾ ಚುನಾವಣೆ ಉಸ್ತುವಾರಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಥವಾ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ, ಬಾದಾಮಿ ಶಾಸಕರೂ ಆದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಥವಾ ಬಾಗಲಕೋಟೆ ಜಿಲ್ಲಾ ಉಸ್ತುವಾರಿ, ಶಿವಾನಂದ ಪಾಟೀಲ್‌ ಅವರಿಗೆ ಜಮಖಂಡಿ ಕ್ಷೇತ್ರದ ಉಸ್ತುವಾರಿ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನುಳಿದ ಕ್ಷೇತ್ರಗಳ ಉಸ್ತುವಾರಿಗಳ ಬಗ್ಗೆ ವೇಣುಗೋಪಾಲ್‌ ಅವರು ಬಂದ ಬಳಿಕ ಚರ್ಚಿಸಿ ತೀರ್ಮಾನಿಸಲು ಪಕ್ಷ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

click me!