ಡಿಕೆಶಿ ವಿರುದ್ಧ ಗರಂ ಆದ ಕಾಂಗ್ರೆಸ್ ಮುಖಂಡ

By Web DeskFirst Published Mar 10, 2019, 10:14 AM IST
Highlights

ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕಾಂಗ್ರೆಸ್ ಮುಖಂಡರೋರ್ವರು ಗರಂ ಆಗಿದ್ದಾರೆ. ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಪಕ್ಷಕ್ಕಿಂತ ಸರ್ಕಾರವೇ ಮುಖ್ಯ ಎಂದು ಕಿಡಿ ಕಾರಿದ್ದಾರೆ. 

ಮಂಡ್ಯ: ಸಚಿವ ಡಿ.ಕೆ.ಶಿವಕುಮಾರ್‌ಗೆ ಪಕ್ಷಕ್ಕಿಂತ ಸರ್ಕಾರವೇ ಮುಖ್ಯ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎ.ಮಂಜು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವಿದ್ದರೆ ಸರ್ಕಾರ, ಅಧಿಕಾರ ಅನ್ನೋದನ್ನು ಡಿ.ಕೆ.ಶಿವಕುಮಾರ್‌ ಅರ್ಥ ಮಾಡಿಕೊಳ್ಳಬೇಕು ಎಂದು ಛೇಡಿಸಿದರು. ರಾಷ್ಟ್ರದಲ್ಲಿ ರಾಹುಲ್‌ ಪ್ರಧಾನಿ ಅಭ್ಯರ್ಥಿ ಅಂತಾ ಘೋಷಣೆ ಆಗಬೇಕು. ಇಲ್ಲದೇ ಹೋದರೆ ‘ಎಲ್ಲೋ ಒಂದೆಡೆ ಶಾಸ್ತ್ರ ಕೇಳಿದ್ದೇವೆ, ಕನ್ನಡಿಗರಿಗೆ ಮತ್ತೊಮ್ಮೆ ಪ್ರಧಾನಿ ಅವಕಾಶವಿದೆ’ ಅಂತ ಎಡವಟ್ಟು ಆಗಬಾರದು ಎಂದಿದ್ದಾರೆ.

ಅಲ್ಲದೆ, ಮಾಜಿ ಪ್ರಧಾನಿ ದೇವೇಗೌಡರ ಫ್ಯಾಮಿಲಿ ರಾಜಕೀಯವನ್ನು ಉದ್ಧಾರ ಮಾಡಲು ಮಂಡ್ಯದ ಶಾಸಕರು ಟೊಂಕ ಕಟ್ಟಿನಿಂತಿದ್ದಾರೆ. ಸ್ವಾಭಿಮಾನಿ ಮಂಡ್ಯದ ಜನ ಸ್ಥಳೀಯರಿಗೆ ಒತ್ತು ಕೊಟ್ಟು ಸ್ಥಳೀಯರನ್ನೇ ಆಯ್ಕೆ ಮಾಡಿ ಗೌರವ ಹೆಚ್ಚಿಸಿಕೊಳ್ಳಲಿ. ಕುಟುಂಬ ರಾಜಕಾರಣದ ವಿರುದ್ಧ ಬೆಳೆದವರು ದೇವೇಗೌಡರು, ಈಗ ಕುಟುಂಬ ಬಿಟ್ಟು ರಾಜಕಾರಣ ಮಾಡಲಾಗಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತಿದ್ದಾರೆ. ಅಂಬರೀಷ್‌ ಅವರಿಂದ ಹೆಚ್ಚು ಸಹಾಯ ಆಗಿರೋದೇ ಜೆಡಿಎಸ್‌ನವರಿಗೆ. ಅವರೇ ಈಗ ಅಂಬಿ ಕುಟುಂಬದ ವಿರುದ್ಧ ಮಾತಾಡ್ತಾರೆ, ಇದು ನಿಜವಾದ ದುರಂತ ಎಂದರು.

ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಅಂತ ಹೇಳಿದರು. ರೇವಣ್ಣ ಹೆಣ್ಣಿನ ಬಗ್ಗೆ ಸಣ್ಣತನದ ಮಾತನಾಡುತ್ತಾರೆ. ಇದು ನಮ್ಮ ಗೌಡ ಜಾತಿಗೆ, ಭಾರತೀಯ ಸಂಸ್ಕೃತಿಗೆ ಅಪಮಾನ, ಅಗೌರವ. ಈ ರೇವಣ್ಣ ಏಳನೇ ಕ್ಲಾಸ್‌ ಬುದ್ಧಿ ಬಿಡಪ್ಪ ಅಂದ್ರೆ ಸರಿ ಹೋಗುತ್ತ? ಈ ಕುರಿತಂತೆ ಹೆಚ್ಚು ವಿಶ್ಲೇಷಣೆ ಮಾಡಬಾರದು ಎಂದು ಹೇಳಿದರು.

ನಿಖಿಲ್‌ಗೆ ರಾಜಕೀಯ ಪ್ರಬುದ್ಧತೆ ಇಲ್ಲ. ಅವರಪ್ಪ ಸಿಎಂ, ತಾತ ಮಾಜಿ ಪ್ರಧಾನಿ. ಸೇವೆ ಮಾಡೋಕೆ ಅಷ್ಟೇ ಸಾಕಾಗಿತ್ತು. ಅಧಿಕಾರ ಬೇಕಾಗಿರಲಿಲ್ಲ. ನಿಖಿಲ್‌ನಿಂದ ಮಂಡ್ಯ ಅಭಿವೃದ್ಧಿ ಸಾಧ್ಯವೇ? ಎಂದು ಟೀಕಿಸಿದರು.

ಗೌಡರಿಗೆ ಮಾತ್ರ ಕೈ ಬೆಂಬಲ:  ಹಾಸನದಲ್ಲಿ ದೇವೇಗೌಡ ಸ್ಪರ್ಧಿಸಿದರೆ ಮಾತ್ರ ಕಾಂಗ್ರೆಸ್‌ನವರು ಬೆಂಬಲ ಕೊಡುತ್ತೇವೆ. ಇಲ್ಲದೇ ಹೋದರೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

click me!