ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭಂಗವಿಲ್ಲ!

Published : Sep 25, 2017, 04:02 PM ISTUpdated : Apr 11, 2018, 12:40 PM IST
ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭಂಗವಿಲ್ಲ!

ಸಾರಾಂಶ

ಬಿಬಿಎಂಪಿಯಲ್ಲಿ ಮೈತ್ರಿ ಆಡಳಿತ ಮುಂದುಮರಿಸಲು ಸಹಮತ ಹೊಂದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇದೀಗ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳ ಹಂಚಿಕೆ ವಿಚಾರವಾಗಿ ಉಭಯ ಪಕ್ಷಗಳ ನಾಯಕರ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದೆ.

ಬೆಂಗಳೂರು: ಬಿಬಿಎಂಪಿಯಲ್ಲಿ ಮೈತ್ರಿ ಆಡಳಿತ ಮುಂದುಮರಿಸಲು ಸಹಮತ ಹೊಂದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇದೀಗ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳ ಹಂಚಿಕೆ ವಿಚಾರವಾಗಿ ಉಭಯ ಪಕ್ಷಗಳ ನಾಯಕರ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದೆ.

ಮೇಯರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಜೆಡಿಎಸ್ ತನ್ನ ಪಟ್ಟು ಸಡಿಸಲಿಸಿ ಆ ಸ್ಥಾನವನ್ನು ಕಾಂಗ್ರೆಸ್‌ಗೇ ಬಿಟ್ಟುಕೊಡಲು ಒಪ್ಪಿಕೊಂಡು ತನ್ನ ಪಾಲಿಗೆ ಉಪಮೇಯರ್ ಹುದ್ದೆ ಹಾಗೂ ತೆರಿಗೆ ಆರ್ಥಿಕ ಸ್ಥಾಯಿ ಸಮಿತಿ ಸೇರಿದಂತೆ ಪ್ರಮುಖ ನಾಲ್ಕು ಸ್ಥಾಯಿ ಸಮಿತಿ ಸ್ಥಾನಗಳನ್ನು ಪಡೆಯಲು ಸಮ್ಮತಿಸಿದೆ. ಆದರೆ,  ಕಳೆದ ವರ್ಷದ ಆಡಳಿತದ ವೇಳೆ ಉಂಟಾದ ಗೊಂದಲಗಳು ಮರುಕಳಿಸಬಾರದು. ಸ್ಥಾಯಿ ಸಮಿತಿಗಳ ಅಧಿಕಾರ ಕಸಿಯುವುದು, ಅನುದಾನಕ್ಕೆ ಕೊಕ್ಕೆ ಹಾಕುವಂತಹ ಪ್ರಯತ್ನಗಳನ್ನು ಮಾಡಬಾರದು.

ಪ್ರತಿ ತಿಂಗಳು ಸಮನ್ವಯ ಸಮಿತಿ ಸಭೆ ನಡೆಸಿ ಜೆಡಿಎಸ್‌ಅನ್ನು ಸಹಮತಕ್ಕೆ ತೆಗೆದುಕೊಳ್ಳಬೇಕು ಎಂಬ ಷರತ್ತುಗಳನ್ನು ವಿಧಿಸಿದೆ. ಗೊಂದಲಗಳು ಮರುಕಳಿಸಿದರೆ ಮೈತ್ರಿ ಕಡಿದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಜೆಡಿಎಸ್ ನಾಯಕರು ನೀಡಿದ್ದಾರೆ.

ಭಾನುವಾರ ಜೆಡಿಎಸ್ ನಾಯಕ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರ ಎಚ್‌ಎಸ್‌ಆರ್ ಲೇಔಟ್’ನ ನಿವಾಸದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಶಾಸಕ ಗೋಪಾಲಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಸೇರಿದಂತೆ ಪಕ್ಷದ ವಿವಿಧ ನಾಯಕರೊಂದಿಗೆ ಮೇಯರ್ ಮತ್ತು ಉಪಮೇಯರ್ ಚುನಾವಣೆಗಳ ಕುರಿತು ಮಾತುಕತೆ ನಡೆಸಿದರು.

ಸಭೆಯಲ್ಲಿ ಮೊದಲಿಗೆ ರಾಮಲಿಂಗಾರೆಡ್ಡಿ ಅವರು ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ನಿಲುವನ್ನು ತಿಳಿಸಿದರು. ಇದಕ್ಕೆ ಜೆಡಿಎಸ್ ನಾಯಕ ಕುಪೇಂದ್ರರೆಡ್ಡಿ ಅವರು, ಮೇಯರ್ ಸ್ಥಾನ ನಿಮಗೇ ಇರಲಿ. ಆದರೆ, ಉಪಮೇಯರ್ ಸ್ಥಾನದ ಜತೆಗೆ ಐದು ಸ್ಥಾಯಿ ಸಮಿತಿಗಳನ್ನು ನೀಡುವಂತೆ ಬೇಡಿಕೆ ಇಟ್ಟರು.

ಇದಕ್ಕೆ ಒಪ್ಪದ ರಾಮಲಿಂಗಾರೆಡ್ಡಿ ಅವರು, ಮೇಯರ್- ಉಪಮೇಯರ್ ಚುನಾವಣೆಯಲ್ಲಿ ಗೆಲುವಿಗೆ ಪಕ್ಷೇತರರ ಸದಸ್ಯರ ಸಹಕಾರ ಬೇಕೇ ಬೇಕು. ಅವರಿಗೂ ಸ್ಥಾಯಿ ಸಮಿತಿ ಸ್ಥಾನಗಳನ್ನು ನೀಡಬೇಕು. ಹಾಗಾಗಿ ಇಲ್ಲಿಯವರೆಗೆ ಇದ್ದಂತೆ ಒಟ್ಟು 12 ಸ್ಥಾಯಿ ಸಮಿತಿಗಳಲ್ಲಿ ಉಭಯ ಪಕ್ಷಗಳು ತಲಾ ನಾಲ್ಕು ಸಮಿತಿಗಳನ್ನು ಹಂಚಿಕೊಂಡು ಹಾಗೂ ಪಕ್ಷೇತರರಿಗೆ ಮಿಕ್ಕ ನಾಲ್ಕು ಸಮಿತಿಗಳನ್ನು ಬಿಟ್ಟುಕೊಡಬೇಕಾಗಿದೆ. ಬೇಕಿದ್ದರೆ ಪ್ರಮುಖ ನಾಲ್ಕು ಸ್ಥಾಯಿ ಸಮಿತಿಗಳನ್ನು ನೀಡಲು ಪ್ರಯತ್ನಿಸೋಣ ಎಂದು ವಾಸ್ತವ ಸ್ಥಿತಿಯನ್ನು ತಿಳಿಸಿದರು.

ಇದಕ್ಕೆ ಸಮ್ಮತಿಸಿದ ಜೆಡಿಎಸ್ ನಾಯಕರು, ಉಪಮೇಯರ್ ನಿಧಿಯ ಮೊತ್ತವನ್ನು 150 ಕೋಟಿ ರು. ಗೆ ಹೆಚ್ಚಳ ಮಾಡಬೇಕು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ, ನಗರ ಯೋಜನೆ ಸಮಿತಿ ಸೇರಿದಂತೆ ಪ್ರಮುಖ ನಾಲ್ಕು ಸಮಿತಿಗಳನ್ನು ತಮ್ಮ ಪಕ್ಷದ ಸದಸ್ಯರಿಗೆ ಬಿಟ್ಟುಕೊಡುವಂತೆ ಮನವಿ ಮಾಡಿದರು.

ರಾಮಲಿಂಗಾರೆಡ್ಡಿ ಅವರು ಉಪಮೇಯರ್ ನಿಧಿಯನ್ನು 100 ಕೊಟಿ ರು.ಗೆ ಹೆಚ್ಚಿಸುವ ಪ್ರಯತ್ನ ಮಾಡುತ್ತೇನೆ. ಆದರೆ, 150 ಕೋಟಿ ಆಗುವುದಿಲ್ಲ. ನಾಲ್ಕು ಪ್ರಮುಖ ಸ್ಥಾಯಿ ಸಮಿತಿಗಳನ್ನು ನೀಡಲು ಒಪ್ಪಿಗೆ ಸೂಚಿಸಿದರು ಎಂಬುದು ಖಚಿತವಾಗಿದೆ.

ಅಧಿಕಾರ ಮೊಟಕಾದ್ರೆ ಮೈತ್ರಿ ಕಟ್: ಕಳೆದ ಬಾರಿಯಂತೆ ಪಾಲಿಕೆ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದು, ಸ್ಥಾಯಿ ಸಮಿತಿಗಳ ಅಧಿಕಾರ ಮೊಟಕುಗೊಳಿಸುವುದು, ಅನುದಾನಕ್ಕೆ ಕೊಕ್ಕೆ ಹಾಕುವುದು, ನಮ್ಮ ಸದಸ್ಯರನ್ನು ಅಗೌರವದಿಂದ ನಡೆಸಿಕೊಳ್ಳುವ ಕೆಲಸಗಳನ್ನು ಮಾಡಿದರೆ ಮೈತ್ರಿ ಮೊಟಕುಗೊಳಿಸುವುದಾಗಿ ಸಭೆಯಲ್ಲಿ ದೇವೇಗೌಡರು ಸ್ಪಷ್ಟ ಎಚ್ಚರಿಕೆ ನೀಡಿದರು.

 ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಅವರು, ಈ ಬಾರಿ ಅಂತಹ ಯಾವುದೇ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ನಾನೇ ಖುದ್ದು ಜವಾಬ್ದಾರಿ ವಹಿಸಿಕೊಂಡು ಅಂತಹ ಪ್ರಯತ್ನಗಳಾಗದಂತೆ ನೋಡಿಕೊಳ್ಳುತ್ತೇನೆ. ಒಂದು ವೇಳೆ ಅಂತಹ ಪ್ರಯತ್ನಗಳು ಕಂಡುಬಂದರೆ ಕೂಡಲೇ ನನ್ನ ಗಮನಕ್ಕೆ ತಕ್ಷಣ ಪರಿಹರಿಸುತ್ತೇನೆ ಎಂದು ಭರವಸೆ

ನೀಡಿದರು ಎಂದು ಗೊತ್ತಾಗಿದೆ.                  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌