
ಬೆಂಗಳೂರು : ದೇಶದಲ್ಲಿ ಒಂದು ರಾಷ್ಟ್ರೀಯ ಪಕ್ಷ ಮಾತ್ರ ತನ್ನ ಶಕ್ತಿ ಬೆಳೆಸಿಕೊಂಡಿದ್ದು, ಇದು ಭವಿಷ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪರೋಕ್ಷವಾಗಿ ಬಿಜೆಪಿ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಇಡೀ ದೇಶದ ವ್ಯವಸ್ಥೆಯನ್ನೇ ಬದಲಾಯಿಸಿ ತನ್ನ ತತ್ವ, ಸಿದ್ಧಾಂತಗಳನ್ನು ಸರ್ಕಾರದ ಮೂಲಕ ಹೇರಬಹುದು ಎಂಬ ಚರ್ಚೆ ನಡೆಯುತ್ತಿದೆ. ಆದರೆ ದೇಶದಲ್ಲಿ ಭದ್ರವಾಗಿ ಬೇರು ಬಿಟ್ಟಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡಲು ಸಾಧ್ಯವಿಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ.
ವಿಧಾನಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹಾಗೂ ಪ್ರೊ.ವಲೇರಿಯನ್ ರೊಡ್ರಿಗನ್ ಅವರು ಇಂಗ್ಲಿಷ್‌ನಲ್ಲಿ ಹೊರತಂದಿದ್ದ ‘ಇಂಡಿಯನ್ ಪಾರ್ಲಿಮೆಂಟ್’ ಪುಸ್ತಕವನ್ನು ಪ್ರೊ.ಜೆ.ಎಸ್.ಸದಾನಂದ ಅವರು ಕನ್ನಡಕ್ಕೆ ಅನುವಾದಿಸಿ ಅಂಕಿತ ಪ್ರಕಾಶನ ಮುದ್ರಿಸಿರುವ ‘ಭಾರತದ ಸಂಸತ್ತು- ಒಂದು ಕಾರ್ಯನಿರತ ಪ್ರಜಾಪ್ರಭುತ್ವ’ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಕಾಂಗ್ರೆಸ್ ದಿನೇ ದಿನೇ ಶಕ್ತಿ ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಹಿಂದೆ ಕಾಂಗ್ರೆಸ್ ಇಬ್ಭಾಗವಾಗಿದ್ದು, ನಂತರ ತಲೆ ಎತ್ತಿದ ಪ್ರಾದೇಶಿಕ ಪಕ್ಷಗಳಿಗೆ ಜಾತಿ, ಭಾಷೆಯ ಪ್ರಭಾವ ಮತ್ತು ಬೆಂಬಲ ದೊರೆತಿದ್ದು ಕಾರಣ. ಆದರೆ, ಈ ಅನೇಕ ಜಾತಿ, ಭಾಷೆ, ಸಂಸ್ಕೃತಿ ಮತ್ತು ಪ್ರಾದೇಶಿಕ ಪಕ್ಷಗಳ ಉಪಟಳಗಳ ನಡುವೆಯೂ ಪ್ರಸ್ತುತ ಒಂದು ರಾಷ್ಟ್ರೀಯ ಪಕ್ಷ ಮಾತ್ರ ತನ್ನ ಶಕ್ತಿ ಬೆಳೆಸಿಕೊಂಡಿದೆ. ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಬಹುದು ಎಂದು ಎಚ್ಚರಿಸಿದರು.
ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸುಭದ್ರವಾಗಿ ನಿಲ್ಲಲು ಭದ್ರ ಬುನಾದಿ ಹಾಕಿದ್ದು ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು. ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಕರೆಯುವಂತೆ ನೆಹರೂ ಅವರನ್ನು ದೇಶದ ಪ್ರಜಾಪ್ರಭುತ್ವದ ಬುನಾದಿದಾರ ಎಂದು ಕರೆಯಬೇಕು. ಆದರೆ, ಇತ್ತೀಚೆಗೆ ಅವರ ಕೊಡುಗೆ ಬಗ್ಗೆಯೇ ಕೆಲವರು ಲಘುವಾಗಿ ಮಾತನಾಡುತ್ತಿರುವುದು ಖಂಡನೀಯ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.