
ಬೆಳಗಾವಿ : ಸಚಿವ ಸ್ಥಾನದಿಂದ ಕೊಕ್ ನೀಡಿದ ಹಿನ್ನೆಲೆಯಲ್ಲಿ ಪಕ್ಷ ತೊರೆಯುವ ಬೆದರಿಕೆಯೊಡ್ಡಿರುವ ರಮೇಶ್ ಜಾರಕಿಹೊಳಿ ಅವರನ್ನು ಸಮಾಧಾನಪಡಿಸಿ ಪಕ್ಷದೊಂದಿಗೆ ಇರುವಂತೆ ಮನವೊಲಿಸುವ ಹೊಣೆಯನ್ನು ಕಾಂಗ್ರೆಸ್ ಹೈಕಮಾಂಡ್ ರಮೇಶ್ ಸಹೋದರ ಹಾಗೂ ನೂತನ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವಹಿಸಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ತೆರಳಿದ ಸತೀಶ್ ಜಾರಕಿಹೊಳಿ ಅವರು ತಮ್ಮ ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದರು.
ಮಂಗಳವಾರ ತಡರಾತ್ರಿ ನಗರಕ್ಕೆ ಆಗಮಿಸಿದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ರಮೇಶ್ ಜಾರಕಿಹೊಳಿ ಅವರ ಬಂಡಾಯದ ಬಗ್ಗೆ ಸತೀಶ್ ಜಾರಕಿಹೊಳಿ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಅಲ್ಲದೆ, ರಮೇಶ್ ಜಾರಕಿಹೊಳಿ ಹಾಗೂ ಅವರೊಂದಿಗೆ ಇರುವ ಶಾಸಕರ ಜತೆ ಖುದ್ದಾಗಿ ಮಾತನಾಡಿ ಯಾರೂ ಪಕ್ಷ ಬಿಡದಂತೆ ನೋಡಿಕೊಳ್ಳಬೇಕು ಎಂಬ ಹೊಣೆಯನ್ನು ವಹಿಸಿದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ತೆರಳಿದ ಸತೀಶ್ ಜಾರಕಿಹೊಳಿ ಅವರು ರಮೇಶ್ ಹಾಗೂ ಅವರೊಂದಿಗೆ ಇರುವ ಶಾಸಕರನ್ನು ಸಂಪರ್ಕಿಸುವ ಹಾಗೂ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು ಎನ್ನಲಾಗಿದೆ.
ಈ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸೌಹಾರ್ದ ಚರ್ಚೆಯಿಂದ ಪಕ್ಷದೊಳಗಿನ ಭಿನ್ನಮತ ಶಮನಗೊಳ್ಳಲಿದೆ. ಇದಕ್ಕೆ ಪಕ್ಷದ ಎಲ್ಲ ಮುಖಂಡರು ಮುಂದಾಗಿದ್ದು, ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ ಜಾರಕಿಹೊಳಿ ಅವರ ಜತೆ ಮಾತನಾಡುತ್ತೇನೆ ಎಂದರು.
ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದ್ದು, ಅಲ್ಲಿ ಎಲ್ಲವನ್ನೂ ಚರ್ಚಿಸಲಾಗಿದೆ. ಖಾತೆಗಳ ಬಗೆಗೂ ಚರ್ಚೆ ನಡೆದಿದ್ದು, ಯಾರೂ ಪಕ್ಷ ಬಿಟ್ಟು ಹೋಗಿಲ್ಲ. ಹೋಗುವುದೂ ಇಲ್ಲ. ಎಲ್ಲವನ್ನೂ ಚರ್ಚಿಸಿ ಸರಿ ಮಾಡಲಾಗುವುದು. ಬಂಡುಕೋರರು ಯಾರೂ ಇಲ್ಲ. ಶಾಸಕರಾದ ರಾಮಲಿಂಗಾರಡ್ಡಿ ಆಗಲಿ, ಸುಧಾಕರ ಆಗಲಿ ಪಕ್ಷದ ಚೌಕಟ್ಟಿನಲ್ಲೆ ಮಾತನಾಡಿದ್ದಾರೆಯೇ ಹೊರತು ಪಕ್ಷವನ್ನು ಬಿಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದರು.
ನಮ್ಮ ಜಿಲ್ಲೆಯ ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ ಕುಮಠಳ್ಳಿ ಸೇರಿದಂತೆ ಎಲ್ಲರೂ ನಮ್ಮೊಂದಿಗೇ ಇದ್ದಾರೆ. ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಇನ್ನು ರಮೇಶ ಜಾರಕಿಹೊಳಿ ಅವರನ್ನು ಹುಡುಕಿ ಭೇಟಿ ಆಗಬೇಕಿದೆ. ಮೊದಲಿನಿಂದಲೂ ಅವರು ಇರುವುದೇ ಹಾಗೆ. ಯಾವುದನ್ನೂ ಸರಿಯಾಗಿ ಮಾತನಾಡುವುದಿಲ್ಲ. ಇದನ್ನು ಸಾಕಷ್ಟುಬಾರಿ ಬಹಿರಂಗವಾಗಿಯೇ ಹೇಳಿದ್ದೇನೆ. ಆದರೂ ಅವರನ್ನು ಇದೀಗ ಭೇಟಿ ಮಾಡಿ ರಾಜಕೀಯವಾಗಿ ಏನು ಹೇಳಬೇಕೋ, ಹೇಗೆ ಹೇಳಬೇಕೋ ಹಾಗೆ ಹೇಳುವ ಪ್ರಯತ್ನ ಮಾಡುತ್ತೇನೆ ಎಂದರು.
ನನಗೆ ಈವರೆಗೆ ಖಾತೆ ಹಂಚಿಕೆ ಆಗಿಲ್ಲ. ನಾನು ಕೂಡ ಯಾವುದೇ ಖಾತೆಯ ಬಗ್ಗೆ ವರಿಷ್ಠರಿಗೆ ಬೇಡಿಕೆ ಇಟ್ಟಿಲ್ಲ. ಭಿನ್ನಮತ ಶಮನಕ್ಕೆ ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲರ ಅಸಮಾಧಾನ ಇತ್ಯರ್ಥಪಡಿಸುತ್ತೇವೆ. ಇಲ್ಲಿ ಯಾರೂ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.