ಎನ್‌ಐಎ ಭಾರೀ ಉಗ್ರ ಬೇಟೆ ! 10 ಶಂಕಿತರು ಬಲೆಗೆ

By Web DeskFirst Published Dec 27, 2018, 7:38 AM IST
Highlights

17 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ ಬುಧವಾರ ಏಕಕಾಲಕ್ಕೆ ದೊಡ್ಡ ಪ್ರಮಾಣದ ದಾಳಿ ನಡೆಸಿದ್ದು, ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಭಯೋತ್ಪಾದಕ ಸಂಘಟನೆಯಿಂದ ಪ್ರೇರಿತವಾದ ಹೊಸ ಸಂಘಟನೆಯೊಂದರ ಜಾಲವೊಂದನ್ನು ಭೇದಿಸಿದೆ ಹಾಗೂ 10 ಶಂಕಿತ ಉಗ್ರರನ್ನು ಬಂಧಿಸಿದೆ.
 

ನವದೆಹಲಿ/ಲಖನೌ :  ಉತ್ತರ ಪ್ರದೇಶ ಹಾಗೂ ದಿಲ್ಲಿಯ 17 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬುಧವಾರ ಏಕಕಾಲಕ್ಕೆ ದೊಡ್ಡ ಪ್ರಮಾಣದ ದಾಳಿ ನಡೆಸಿದ್ದು, ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಭಯೋತ್ಪಾದಕ ಸಂಘಟನೆಯಿಂದ ಪ್ರೇರಿತವಾದ ಹೊಸ ಸಂಘಟನೆಯೊಂದರ ಜಾಲವೊಂದನ್ನು ಭೇದಿಸಿದೆ ಹಾಗೂ 10 ಶಂಕಿತ ಉಗ್ರರನ್ನು ಬಂಧಿಸಿದೆ.

‘ಹರ್ಕತ್‌ ಉಲ್‌ ಹರ್ಬ್‌ ಎ ಇಸ್ಲಾಂ’ ಎಂಬ ಹೊಸ ಗುಂಪು ಗಣರಾಜ್ಯ ದಿನಾಚರಣೆಗೂ ಮುನ್ನ ಉತ್ತರ ಭಾರತದ ಪ್ರಮುಖ ಸ್ಥಳಗಳು, ಅದರಲ್ಲೂ ವಿಶೇಷವಾಗಿ ದಿಲ್ಲಿಯ ಆಯಕಟ್ಟಿನ ಸ್ಥಳಗಳು, ದಿಲ್ಲಿ ಪೊಲೀಸ್‌ ಕಚೇರಿ ಮುಖ್ಯಾಲಯ, ಆರೆಸ್ಸೆಸ್‌ ಕಚೇರಿ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಂಚು ರೂಪಿಸಿತ್ತು. ಅಲ್ಲದೆ, ಅತಿಗಣ್ಯ ರಾಜಕಾರಣಿಗಳ ಮೇಲೆ ಫಿದಾಯೀನ್‌ (ಆತ್ಮಾಹುತಿ) ಹಾಗೂ ರಿಮೋಟ್‌ ಕಂಟ್ರೋಲ್‌ ಆಧರಿತ ದಾಳಿಗೆ ನಡೆಸಲು ಹೊಂಚು ಹಾಕಿತ್ತು ಎಂದು ತಿಳಿದುಬಂದಿದೆ.

ಇದೇ ವೇಳೆ ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಬಾಂಬ್‌ ಸ್ಫೋಟಕ್ಕೆ ರಿಮೋಟ್‌ ಕಂಟ್ರೋಲ್‌ ಅಗಿ ಬಳಸಲು ಉದ್ದೇಶಿಸಿದ್ದ 100 ಮೊಬೈಲ್‌, 135 ಸಿಮ್‌ಕಾರ್ಡ್‌, 112 ಟೈಮರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಓರ್ವ ಮೌಲ್ವಿ ಹಾಗೂ ಓರ್ವ ಎಂಜಿನಿಯರ್‌ ಕೂಡ ಇದ್ದಾನೆ. ಇವರು ವಿದೇಶದಲ್ಲಿನ ಸೂತ್ರಧಾರನ ಸಂಪರ್ಕದಲ್ಲಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದ್ದು, ಭಾರಿ ವಿಧ್ವಂಸಕ ಕೃತ್ಯವೊಂದು ಈ ಕಾರ್ಯಾಚರಣೆಯಿಂದ ತಪ್ಪಿದಂತಾಗಿದೆ.

17 ಕಡೆ ದಾಳಿ:  ಉತ್ತರ ಪ್ರದೇಶದ ಹಾಗೂ ದಿಲ್ಲಿಯ 17 ಸ್ಥಳಗಳಲ್ಲಿ ಎನ್‌ಐಎ ಬುಧವಾರ ದಾಳಿ ನಡೆಸಿದೆ. ‘ಹರ್ಕತ್‌ ಉಲ್‌ ಹರ್ಬ್‌ ಎ ಇಸ್ಲಾಂ’ ಎಂಬ ಈ ಹೊಸ ಸಂಘಟನೆಯು ಐಸಿಸ್‌ನಿಂದ ಪ್ರೇರಿತವಾಗಿದೆ. ಈ ಸಂಘಟನೆಯ ಐವರನ್ನು ಪಶ್ಚಿಮ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಎನ್‌ಐಎ ಹಾಗೂ ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ ಎಂದು ಎನ್‌ಐಎ ಹಾನಿರೀಕ್ಷಕ ಆಲೋಕ್‌ ಮಿತ್ತಲ್‌ ಹಾಗೂ ಉತ್ತರ ಪ್ರದೇಶ ಎಟಿಎಸ್‌ನ ಮಹಾನಿರೀಕ್ಷಕ ಅಸೀಂ ಅರುಣ್‌ ಹೇಳಿದ್ದಾರೆ. ಲಖನೌ, ಹಾಪುರ ಹಾಗೂ ಮೇರಠ್‌ ಜಿಲ್ಲೆಯಲ್ಲೂ ದಾಳಿ ನಡೆದಿದೆ.

ಇದೇ ವೇಳೆ ಇನ್ನೂ ಐವರನ್ನು ಈಶಾನ್ಯ ದಿಲ್ಲಿಯ ಸೀಲಂಪುರದಲ್ಲಿ ದಿಲ್ಲಿ ಪೊಲೀಸರ ವಿಶೇಷ ಘಟಕದ ನೆರವಿನಿಂದ ಬಂಧಿಸಲಾಗಿದೆ. ದಾಳಿ ಇನ್ನೂ ಮುಂದುವರಿದಿದೆ. ಬಂಧಿತ 10 ಜನರಲ್ಲದೇ ಇನ್ನೂ 6 ಜನ ಪೊಲೀಸ್‌ ವಶದಲ್ಲಿ ಇದ್ದು, ಅವರ ವಿಚಾರಣೆ ನಡೆದಿದೆ. ಬಂಧಿತರ ಸಂಖ್ಯೆ ಹೆಚ್ಚಬಹುದು ಎಂದು ಮಿತ್ತಲ್‌ ತಿಳಿಸಿದ್ದಾರೆ.

ಮುಫ್ತಿ ಎಂಬ ಲೀಡರ್‌:  ಬಂಧಿತರಲ್ಲಿ ಒಬ್ಬನಾಗಿರುವ ಮುಫ್ತಿ ಸೊಹೈಲ್‌ ಎಂಬಾತನೇ ಈ ಗುಂಪಿನ ನಾಯಕನಾಗಿದ್ದು, ಆತ ಮೂಲತಃ ಉತ್ತರಪ್ರದೇಶದ ಅಮ್ರೋಹಾ ನಗರದವನು. ದಿಲ್ಲಿಯ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ. ಇನ್ನು ಓರ್ವ ಎಂಜಿನಿಯರ್‌ ಕೂಡ ಬಂಧಿತರಲ್ಲಿ ಸೇರಿದ್ದಾನೆ. ಸೆರೆ ಸಿಕ್ಕವರೆಲ್ಲ 20-30 ವರ್ಷದವರು ಹಾಗೂ ಹೊಸದಾಗಿ ನೇಮಕವಾದವರು. ಜಿಹಾದಿ ವಿಚಾರಗಳನ್ನು ತಲೆಯಲ್ಲಿ ತುಂಬಿ ಇವರೆಲ್ಲರ ‘ಬ್ರೇನ್‌ವಾಶ್‌’ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲ್ಲದೆ, ಶಂಕಿತರೆಲ್ಲ ವಿದೇಶದಲ್ಲಿರುವ ಸೂತ್ರಧಾರನ ಅಣತಿಯಂತೆ ನಡೆದುಕೊಳ್ಳುತ್ತಿದ್ದರು. ಆ ಸೂತ್ರಧಾರನ ಹೆಸರು, ದೇಶ, ವಿವರ, ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಮಿತ್ತಲ್‌ ವಿವರಿಸಿದ್ದಾರೆ.

ಇತ್ತೀಚೆಗೆ ಈ ವ್ಯಕ್ತಿಗಳ ಚಟುವಟಿಕೆ ಶಂಕಾಸ್ಪದವಾಗಿತ್ತು. ಇದರ ಜಾಡು ಹಿಡಿದು ಹೊರಟಾಗ ಇವರ ಕಾರ್ಯಚಟುವಟಿಕೆಯ ಬಗ್ಗೆ ತಿಳಿದುಬಂತು. ವಾಟ್ಸಪ್‌ ಹಾಗೂ ಟೆಲಿಗ್ರಾಂ ಆ್ಯಪ್‌ಗಳ ಮೂಲಕ ಇವರು ವಿದೇಶದಲ್ಲಿನ ಸೂತ್ರಧಾರನ ಸಂಪರ್ಕದಲ್ಲಿ ಇರುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.

ಬಾಂಬ್‌ ಸ್ಫೋಟಿಸಲು 100 ಮೊಬೈಲ್‌ ಬಳಕೆ!:  ಶಂಕಿತರ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಐಸಿಸ್‌ ಧ್ವಜ, ಬಾಂಬ್‌ ಸ್ಫೋಟಿಸಲು ‘ರಿಮೋಟ್‌ ಕಂಟ್ರೋಲ್‌’ ಆಗಿ ಬಳಸಲು ಉದ್ದೇಶಿಸಿದ್ದ 100 ಮೊಬೈಲ್‌ ಹಾಗೂ 135 ಸಿಮ್‌ಕಾರ್ಡ್‌, 112 ಅಲಾಮ್‌ರ್‍ ಕ್ಲಾಕ್‌ (ಟೈಮರ್‌) ವಶಪಡಿಸಿಕೊಳ್ಳಲಾಗಿದೆ. ಇವರು ಆತ್ಮಾಹುತಿ ದಾಳಿಗೆ ನೆರವಾಗುವ ಸುಸೈಡ್‌ ಜಾಕೆಟ್‌ ನಿರ್ಮಾಣದಲ್ಲಿ ತೊಡಗಿದ್ದರು ಎಂದು ಎನ್‌ಐಎ ಐಜಿ ಮಾಹಿತಿ ನೀಡಿದ್ದಾರೆ. ಬಂಧಿತರ ಬಳಿ ದೊರಕಿರುವ ಸಿಮ್‌, ಅಲಾಮ್‌ರ್‍ ಕ್ಲಾಕ್‌, ಮೊಬೈಲ್‌ಗಳನ್ನು ಗಮನಿಸಿದಾಗ ಇವರ ಜಾಲ ಎಷ್ಟರ ಮಟ್ಟಿಗೆ ವಿಸ್ತಾರವಾಗಿತ್ತು, ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಂಚು ರೂಪುಗೊಂಡಿತ್ತು ಎಂಬುದು ತಿಳಿದುಬರುತ್ತದೆ ಎಂದೂ ಅವರು ಹೇಳಿದ್ದಾರೆ.

ಶಂಕಿತ ಉಗ್ರರಿಗೆ ಕುಖ್ಯಾತ ಇಸ್ಲಾಂ ಧಾರ್ಮಿಕ ಪ್ರವಚನಕಾರ ಝಾಕೀರ್‌ ನಾಯ್ಕನ ನಂಟು ಇದೆ ಎಂದೂ ಗೊತ್ತಾಗಿದೆ ಎಂದು ಇದೇ ವೇಳೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.

click me!