
ನವದೆಹಲಿ : ಇಸ್ರೇಲ್, ರಷ್ಯಾ, ಸಿಂಗಾಪುರ ಸೇರಿದಂತೆ 27 ದೇಶಗಳಲ್ಲಿ ಇರುವಂತೆ ಭಾರತದಲ್ಲೂ ಸರ್ಕಾರಿ ನೌಕರಿ ಸೇರಲು ಮಿಲಿಟರಿ ಸೇವೆ ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ಆರಂಭವಾಗಿದೆ. ರಾಜ್ಯ ಅಥವಾ ಕೇಂದ್ರ ಸರ್ಕಾರದಲ್ಲಿ ಉದ್ಯೋಗವನ್ನು ಬಯಸುವವರು 5 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿಯೊಂದು ಶಿಫಾರಸು ಮಾಡಿದೆ. ಈ ಸಂಬಂಧ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಶೀಘ್ರ ಕೇಂದ್ರ ಸರ್ಕಾರದ ಮುಂದಿಡಲಿದೆ.
ಸರ್ಕಾರಿ ಉದ್ಯೋಗವನ್ನು ಬಯಸುವವರು ಸೇನಾ ಪಡೆಗಳಲ್ಲಿ ಕಾರ್ಯನಿರ್ವಹಿಸುವುದರಿಂದ ಸೇನೆಯಲ್ಲಿ ಖಾಲಿ ಇರುವ ಸಿಬ್ಬಂದಿ ಕೊರತೆಯನ್ನು ತುಂಬಲು ಸಹಾಯವಾಗಲಿದೆ ಎಂದು ರಕ್ಷಣಾ ವ್ಯವಹಾರಗಳ ಸಂಸದೀಯ ಸಮಿತಿ ಭಾವಿಸಿದೆ.
ಭಾರತೀಯ ಭೂಸೇನಾ ಪಡೆಯಲ್ಲಿ 7,000 ಅಧಿಕಾರಿಗಳು ಹಾಗೂ 20,000 ಪುರುಷರ ಕೊರತೆ ಇರುವಾಗಲೇ ಈ ಶಿಫಾರಸು ಮಾಡಲಾಗಿದೆ. ಅದೇ ರೀತಿ ಭಾರತೀಯ ವಾಯುಪಡೆ 150 ಅಧಿಕಾರಿಗಳು 15,000 ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ನೌಕಾ ಪಡೆಯಲ್ಲಿ 15,000 ಹುದ್ದೆಗಳು ಖಾಲಿ ಉಳಿದಿವೆ.
ರೈಲ್ವೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಉದ್ಯೋಗಿಗಳಿದ್ದು, ರಾಜ್ಯ ಸರ್ಕಾರಗಳಲ್ಲಿ 2 ಕೋಟಿಯಷ್ಟುಉದ್ಯೋಗಿಗಳಿದ್ದಾರೆ. ಆದರೆ, ಸರ್ಕಾರಿ ಉದ್ಯೋಗ ಆಕಾಂಕ್ಷಿಗಳನ್ನು ಕಡ್ಡಾಯ ಮಿಲಿಟರಿ ಸೇವೆಗೆ ಒಳಪಡಿಸುವ ಪ್ರಸ್ತಾಪಕ್ಕೆ ರಕ್ಷಣಾ ಇಲಾಖೆಯೇ ನಿರಾಸಕ್ತಿ ತೋರಿತ್ತು. ಹೀಗಾಗಿ ಈ ಶಿಫಾರಸುಗಳನ್ನು ಪರಿಶೀಲಿಸುವ ಜವಾಬ್ದಾರಿ ಈಗ ಸಂಸದೀಯ ಸಮಿತಿ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಹೆಗಲಿಗೆ ಹೋಗಿದೆ.
‘ಸೇನೆ ದೇಶದ ಭದ್ರತೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವುದರಿಂದ ಸೇನೆಯಲ್ಲಿ ಇರುವ ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರ ಮೊದಲ ಆದ್ಯತೆ ನೀಡಬೇಕು ಎಂದು ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ. ಸಿಬ್ಬಂದಿ ಸಚಿವಾಲಯ ಸರ್ಕಾರಿ ಸೇವೆಗಳಿಗೆ ಆಡಳಿತಾತ್ಮಕ ಮತ್ತು ಯೋಜನೆಗಳನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ವಿಷಯವಾಗಿ ರಕ್ಷಣಾ ಸಚಿವಾಲಯ ಸಿಬ್ಬಂದಿ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ತಮ್ಮ ಬೇಡಿಕೆಗಳ ಬಗ್ಗೆ ಮನವರಿಕೆ ಮಾಡಬೇಕಿದೆ’ ಎಂದು ಸಂಸದೀಯ ಸಮಿತಿ ಬಯಸಿದೆ ಎಂದು ವರದಿಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.