
ಮಂಗಳೂರು : ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಂಗಳೂರು ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಭಾನುವಾರ ರವಿಶಂಕರ ಪ್ರಸಾದ್ ಬಿಡುಗಡೆ ಮಾಡಿರುವ ‘ಚಾರ್ಜ್ಶೀಟ್’ ಪುಸ್ತಕದಲ್ಲಿ ‘ಬಿಬಿಎಂಪಿಯಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಸೀರೆಯನ್ನು ಎಳೆದಾಡಿದ್ದಂತೂ ಕಾಂಗ್ರೆಸ್ ನೆರಳಲ್ಲಿ ದುರುಳ ಶಕ್ತಿಗಳ ಉಪಟಳ ಎಷ್ಟುಎಂಬುದಕ್ಕೆ ನಿದರ್ಶನವಾಗಿದೆ.
ಹಾಗೆಯೇ ಶಾಸಕ ಮುನಿರತ್ನ ಬೆಂಬಲಿಗರನ್ನು ಮರ್ಜಿಯಲ್ಲಿರಿಸಲು ನಿರಾಕರಿಸಿದ ಬಿಜೆಪಿ ಪಾಲಿಕೆ ಸದಸ್ಯೆ ಮಮತಾ ವಾಸುದೇವ್ ಅವರಿಗೆ ಪ್ರತಿನಿತ್ಯ ಕಿರುಕುಳ ನೀಡಲಾಗುತ್ತಿದೆ’ ಎಂಬ ಒಕ್ಕಣೆಯ ಬರಹವನ್ನು ಪ್ರಕಟಿಸಲಾಗಿದೆ. ಈ ಬರಹಕ್ಕೆ ಸಂಬಂಧಪಡದ ಪ್ರತಿಭಾ ಕುಳಾಯಿ ಅವರ ಫೋಟೊ ಬಳಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಾ ಕುಳಾಯಿ ಸೋಮವಾರ ದೂರು ನೀಡಿದ್ದಾರೆ.
ಪುಸ್ತಕದಲ್ಲಿರುವ ಬರಹಕ್ಕೆ ಸಂಬಂಧವೇ ಇಲ್ಲದಿದ್ದರೂ ನನ್ನ ಅನುಮತಿ ಇಲ್ಲದೆ ಫೋಟೊ ಹಾಕಿ ರಾಜಕೀಯ, ಸಾಮಾಜಿಕ, ವೈಯಕ್ತಿಕ ಗೌರವಕ್ಕೆ ಧಕ್ಕೆ ತರಲಾಗಿದೆ. ರಾಜಕೀಯ ಮೈಲೇಜ್ ಪಡೆಯಲು ಇಂತಹ ಮಟ್ಟಕ್ಕಿಳಿದ ಬಿಜೆಪಿ ನಾಯಕರ ನಡೆ ಖಂಡನೀಯ. ಚುನಾವಣೆ ಸಂದರ್ಭದಲ್ಲಿ ತಪ್ಪು ಸಂದೇಶ ನೀಡುವ ಈ ಕಾರ್ಯವನ್ನು ಅವರು ಪ್ರಯತ್ನಪೂರ್ವಕವಾಗಿ ನಡೆಸಿದ್ದಾರೆ.
ನಾನು ಬಿಬಿಎಂಪಿ ಕಾರ್ಪೊರೇಟರ್ ಅಲ್ಲ. ನನ್ನ ಗೌರವಕ್ಕೆ ಧಕ್ಕೆ ತಂದಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಾ ಕುಳಾಯಿ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.