
ನವದೆಹಲಿ(ಡಿ.23): ಪ್ರಧಾನಿ ಮೋದಿ ಇಂಥಾದ್ದೊಂದು ದಿಟ್ಟ ನಿರ್ಧಾರ ತೆಗೆದುಕೊಂಡಾಗಲೇ. ಕಾಳಧನಿಕರು ಯಾವ ಯಾವ ಬಾಗಿಲು ಬಡಿಯಬೇಕು ಎಂದು ನಿರ್ಧರಿಸಿಬಿಟ್ಟಿದ್ದರು. ನೋಟು ಕಳ್ಳರು ನಾನಾ ಮಾರ್ಗಗಳನ್ನು ಕಂಡುಕೊಂಡಿದ್ದರು. ಒಂದೆಡೆ ಜನ ಒಂದು ನೋಟೂ ಸಿಗದೆ ಪರದಾಡುತ್ತಿದ್ದಾಗ, ಕೆಲವೇ ಮಂದಿಯ ಮನೆಯಲ್ಲಿ ಕೋಟಿ ಕೋಟಿ ನೋಟು ಸಿಕ್ಕಿತ್ತು. ಹೇಗಾಯಿತು ಎನ್ನುವುದು ಬಯಲಾಗುತ್ತಿದೆ. ಆದರೆ, ಈ ಬ್ಯಾಂಕ್'ನವರ ವಿರುದ್ಧ ಕಠಿಣ ಕ್ರಮ ಏಕಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಇದು ಮುಗಿಯಿತಾ ಗೋಳು ಅಭಿಯಾನದ ವಿಶೇಷ ವರದಿ 'ಟಾರ್ಗೆಟ್ ಆಗಬೇಕಿರುವುದು ಬ್ಯಾಂಕುಗಳು'.
ನವೆಂಬರ್ 8 ಪ್ರಧಾನಿ ಮೋದಿ ಹಳೆಯ ನೋಟು ನಿಷೇಧ ಘೋಷಿಸಿದ ದಿನ. ನವೆಂಬರ್ 10ರಿಂದಲೇ ಬ್ಯಾಂಕ್'ಗಳ ಕೆಲಸ ಶುರುವಾಯಿತು. ನವೆಬರ್ 11ರಿಂದ ಎಟಿಎಂಗಳು ಕೆಲಸ ಶುರು ಮಾಡಿದವು. ಮುಂದಿನ ಕೆಲಸ ಆರ್'ಬಿಐ ಮತ್ತು ಬ್ಯಾಂಕುಗಳದ್ದು. ಆರಂಭದಲ್ಲಿ ಬ್ಯಾಂಕ್ ಉದ್ಯೋಗಿಗಳ ಸಮರೋಪಾದಿ ಕೆಲಸ ದೇಶಾದ್ಯಂತ ಮೆಚ್ಚುಗೆ ಗಳಿಸಿತು. ಖುದ್ದು ಪ್ರಧಾನಿ ನರೇಂದ್ರ ಮೋದಿ ಕೂಡಾ ಬ್ಯಾಂಕ್ ಉದ್ಯೋಗಿಗಳನ್ನು ಅಭಿನಂದಿಸಿದ್ದರು.
"ನಾನು ಬ್ಯಾಂಕ್ ಸಿಬ್ಬಂದಿಗೆ ಅಭಿನಂದನೆ ಹೇಳ ಬಯಸುತ್ತೇನೆ. ದೇಶ ಬದಲಾಗಲಿದೆ ಎಂದು ಬರುತ್ತಿರುವ ಜನರಿಗಾಗಿ ಬ್ಯಾಂಕ್ ಉದ್ಯೋಗಿಗಳು ಶ್ರಮಿಸುತ್ತಿದ್ದಾರೆ. ಹಗಲಿರುಳೂ ದುಡಿಯುತ್ತಿದ್ದಾರೆ. ನಿವೃತ್ತ ನೌಕರರು ಬಂದು ಸಹಾಯ ಮಾಡುತ್ತಿದ್ದಾರೆ. ಅವರೆಲ್ಲರಿಗೂ ನನ್ನ ಅಭಿನಂದನೆ'" ಪ್ರಧಾನಿ ಮೋದಿ (13 ನವೆಂಬರ್ 2016)
ಆದರೆ, ದೇಶಾದ್ಯಂತ ಐಟಿ ದಾಳಿಗಳು ನಡೆಯುತ್ತಾ ಹೋದವು. ಬ್ಯಾಂಕ್ ಉದ್ಯೋಗಿಗಳೇ ಒಬ್ಬರ ಹಿಂದೊಬ್ಬರಂತೆ ಕಾಳಧನಿಕರ ಕೈಗೊಂಬೆಯಾಗಿರುವುದು ಜಗಜ್ಜಾಹಿರವಾಯಿತು. ಒಂದಲ್ಲ, ಎರಡಲ್ಲ, ನೂರಾರು ದಾಳಿಗಳಾದವು. ಇದರ ಅಧಿಕೃತ ಲೆಕ್ಕ ಹೀಗಿದೆ
ದೇಶಾದ್ಯಂತ ಕಾಳಧನಿಕರ ಬೇಟೆ
| ಸಿಕ್ಕಿಬಿದ್ದ ಕಪ್ಪು ಹಣ | 3,300 ಕೋಟಿ ರೂ |
| ಜಪ್ತಿಯಾದ ಹೊಸ ನೋಟು | 92 ಕೋಟಿ ರೂ |
| ಒಟ್ಟು ಐಟಿ ದಾಳಿ | 732 ದಾಳಿಗಳು |
| ವಿಚಾರಣೆಯ ನೋಟಿಸ್ | 3,200 |
| ಇಡಿ, ಸಿಬಿಐಗೆ ಶಿಫಾರಸು | 220 ಪ್ರಕರಣ |
ಪದೇ ಪದೇ ಸಿಕ್ಕಿಬಿತ್ತು ಆಕ್ಸಿಸ್ ಬ್ಯಾಂಕ್(Axis Bank)
ದೇಶದ ಪ್ರಮುಖ ಖಾಸಗಿ ಬ್ಯಾಂಕುಗಳಲ್ಲೊಂದಾದ ಆಕ್ಸಿಸ್ ಬ್ಯಾಂಕ್ ಇಂತಹ ಪ್ರಕರಣದಲ್ಲಿ ಪದೇ ಪದೇ ಸಿಕ್ಕಿಬಿತ್ತು. ಅದರಲ್ಲೂ ನವದೆಹಲಿಯ ಆಕ್ಸಿಸ್ ಬ್ಯಾಂಕ್ ಶಾಖೆಗಳಲ್ಲಿ ನಕಲಿ ಖಾತೆಗಳನ್ನು ಮಾಡಿ, ಕಾಳಧನಿಕರ ಹಣ ಡೆಪಾಸಿಟ್ ಮಾಡಿಸಿದ್ದರು. ಸದ್ಯಕ್ಕೆ ಬಯಲಾಗಿರುವ ಲೆಕ್ಕದ ಪ್ರಕಾರ ಆಕ್ಸಿಸ್ ಬ್ಯಾಂಕ್'ವೊಂದರಲ್ಲೇ 160 ಕೋಟಿ ಬ್ಲಾಕ್ & ವೈಟ್ ದಂಧೆ ನಡೆದಿದೆ. 24 ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ನೂರಕ್ಕೂ ಹೆಚ್ಚು ಬೇನಾಮಿ ಖಾತೆ ಸೃಷ್ಟಿಸಿ ದಂಧೆ ನಡೆಸಲಾಗಿದೆ. ಆಕ್ಸಿಸ್ ಬ್ಯಾಂಕ್ ಅಧ್ಯಕ್ಷೆ ಶಿಖಾ ಶರ್ಮಾ, ನನಗೆ ಮಜುಗರವಾಗುತ್ತಿದೆ ಎಂದಿದ್ದಾರೆ. ಆದರೆ, ಇದು ಕೇವಲ ಮಜುಗರ ಪಡುವ ಸಂಗತಿಯಷ್ಟೇ ಅಲ್ಲ. ಯಾಕೆಂದರೆ ಆರ್ಬಿಐ ಅಧಿಕಾರಿಗಳೇ ಬಲೆಗೆ ಬಿದ್ದಾಗ ಆಕ್ಸಿಸ್ ಬ್ಯಾಂಕ್ ಯಾವ ಲೆಕ್ಕ. ಹೀಗೆ ಬ್ಯಾಂಕ್ ಅಧಿಕಾರಿಗಳು ಸಿಕ್ಕಿಬೀಳುತ್ತಾ ಹೋದಾಗ ಯಾವ ಬ್ಯಾಂಕ್ ಉದ್ಯೋಗಿಗಳನ್ನು ಪ್ರಧಾನಿ ಅಭಿನಂದಿಸಿದ್ದರೋ ಅದೇ ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಮೋದಿ ಗುಡುಗಿದ್ದರು.
"ಅವರು ಹಿಂಬಾಗಿಲಿನ ದಾರಿ ಹುಡುಕಿಕೊಂಡಿದ್ದಾರೆ. ಮೋದಿ 500, 1000 ರೂ. ನೋಟ್ ಬ್ಯಾನ್ ಮಾಡಿದರೇನು ನಮ್ಮನ್ನು ಏನು ಮಾಡೋಕಾಗುತ್ತೆ ಎಂದುಕೊಂಡಿದ್ದಾರೆ. ಬ್ಯಾಂಕ್ ಸಿಬ್ಬಂದಿಯೂ ಸಿಕ್ಕಿಬೀಳುತ್ತಿದ್ದಾರೆ. ಆದರೆ, ಅವರಿಗೆ ಗೊತ್ತಿಲ್ಲ, ಈ ಮೋದಿಯ ಕ್ಯಾಮೆರಾ ಕಣ್ಣು ಅಲ್ಲಿಯೂ ಇದೆ. ಡಿಸೆಂಬರ್ 30 ಕಳೆಯಲಿ ಮೂರು ತಿಂಗಳಾಗಬಹುದ, ಆರು ತಿಂಗಳಾಗಬಹುದು ಆದರೆ ಈ ಮೋದಿ ಯಾರೊಬ್ಬರನ್ನೂ ಬಿಡುವುದಿಲ್ಲ. ಒಬ್ಬೊಬ್ಬರನ್ನೂ ಹುಡುಕಿ, ಹುಡುಕಿ ಜೈಲಿಗಟ್ಟುತ್ತೇವೆ" - ಪ್ರಧಾನಿ ಮೋದಿ (10 ಡಿಸೆಂಬರ್ 2016)
ಬಳಿಕ 500 ಬ್ಯಾಂಕುಗಳ ಮೇಲೆ ಕೇಂದ್ರ ಸರ್ಕಾರವೇ ಸ್ಟಿಂಗ್ ನಡೆಸಿದೆ ಎಂಬುದೂ ಗೊತ್ತಾಯಿತು. ಇದರ ಬೆನ್ನಲ್ಲೇ ಸಿಸಿಟಿವಿ ದಾಖಲೆಗಳನ್ನು ನಾಶ ಮಾಡದಂತೆ ಕಟ್ಟಾಜ್ಞೆಯನ್ನೂ ಹೊರಡಿಸಲಾಗಿತು. ಇಷ್ಟಕ್ಕೂ ಈ ವ್ಯವಸ್ಥೆಯಲ್ಲಿ ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ಕಾಳಧನಿಕರ ಜೊತೆ ಕೈಜೋಡಿಸಿಬಿಟ್ಟಿದ್ದರೆ ಸ್ಥಿತಿ ಹೇಗಾಗುತ್ತಿತ್ತೋ?.ಕಾಳಧನಿಕರ ಜೊತೆ ಕೈಕುಲುಕಿದ್ದು ಕೆಲವರು ಮಾತ್ರ ಆದರೆ, ಆ ಕೆಲವರ ಹೊಡೆತವೇ ಇಷ್ಟು ದೊಡ್ಡದಾಗಿದೆ.
ಗಮನಿಸಬೇಕಾದ ಅಂಶವೆಂದರೆ, ಇಂಥಹ ಕಳ್ಳಮಾರ್ಗಗಳನ್ನು ಕಾಳಧನಿಕರು ಹುಡುಕುತ್ತಾರೆ ಎಂಬುದನ್ನು ಆರ್'ಬಿಐ ಆಗಲೀ, ಬ್ಯಾಂಕ್'ನ ಉನ್ನತ ಅಧಿಕಾರಿಗಳಲೀ ಗುರುತಿಸದೇ ಹೋದದ್ದು. ಹೀಗಾಗಿ ಾದಾಯ ತೆರಿಗೆ ಇಲಾಖೆ ಮಾಡಿರುವ blackmoneyinfo@incometax.gov.in ಗೆ ಪ್ರತಿದಿನ 4000 ಕ್ಕೂ ಹೆಚ್ಚು ಮಾಹಿತಿ ಬರುತ್ತಿವೆಯಂತೆ. ಅವುಗಳನ್ನು ಹುಡುಕಿಯೇ ಇಷ್ಟು ದೊಡ್ಡ ತಿಮಿಂಗಿಲಗಳು ಸಿಕ್ಕಿಬೀಳುತ್ತಿವೆ. ಆದರೆ, ಜನರ ನಂಬಿಕೆ ಮತ್ತು ಸರ್ಕಾರ ಇಟ್ಟ ನಂಬಿಕೆ ಎರಡನ್ನೂ ಸೋಲಿಸಿದ ಬ್ಯಾಂಕ್ ಸಿಬ್ಬಂದಿ ವಿರುದ್ಧ ಏನು ಕ್ರಮ..?
ಅತೀ ಹೆಚ್ಚು ಅಕ್ರಮದಲ್ಲಿ ಪಾಲುದಾರನಾಗಿದ್ದ ಆಕ್ಸಿಸ್ ಬ್ಯಾಂಕ್ನ ಲೈಸೆನ್ಸ್ ರದ್ದು ಮಾಡುತ್ತೀರಾ ಎಂಬ ಪ್ರಶ್ನೆಗೆ, ಆರ್ಬಿಐ ಇಲ್ಲ ಎಂದಿದೆ. ಸಾರ್ವಜನಿಕ ಬ್ಯಾಂಕುಗಳ 30ಕ್ಕೂ ಹೆಚ್ಚು ಜನರನ್ನು ಸಸ್ಪೆಂಡ್ ಮಾಡಿದೆ. ಸಸ್ಪೆಂಡ್ ಆದವರು ಕೆಲವು ತಿಂಗಳ ನಂತರ ಮತ್ತೆ ಕೆಲಸಕ್ಕೆ ಬರುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.