
ಬೆಂಗಳೂರು(ಡಿ.23): ವೈದ್ಯ ಮತ್ತು ದಂತ ವೈದ್ಯ ಕೋರ್ಸ್ ದಾಖಲಾತಿಗೆ ಮುಂದಿನ ವರ್ಷ ನಡೆಯಲಿರುವ ನೀಟ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ ಎಂಬ ಆರೋಪಕ್ಕೆ ಹೊಸ ತಿರುವು ಸಿಕ್ಕಿದೆ. ಈ ಕುರಿತಾದ ಎಕ್ಸ್ಲೂಸಿವ್ ದಾಖಲೆಗಳು ಸುವರ್ಣ ನ್ಯೂಸ್'ಗೆ ಲಭ್ಯವಾಗಿವೆ.
ನೀಟ್ ಪರೀಕ್ಷೆಯನ್ನು ಇಂಗ್ಲೀಷ್ನಲ್ಲೇ ಬರೆಯಬಹುದು ಅಂತ ರಾಜ್ಯ ಸರ್ಕಾರವೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ವಿಷಯ ಬಹಿರಂಗವಾಗಿದೆ. ಈ ಪತ್ರ ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ. ನವೆಂಬರ್ 25 ಕ್ಕೆ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಇಂಗ್ಲಿಷ್'ನಲ್ಲಿಯೇ ಪರೀಕ್ಷೆ ನಡೆಸುವಂತೆ ಹೇಳಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಮೂಲಕ, ರಾಜ್ಯ ಸರ್ಕಾರವೇ ಕನ್ನಡವನ್ನು ಕಡೆಗಣಿಸಿರುವುದು, ಜನತೆಯನ್ನು ಕೆರಳಿಸಿದೆ. ಈಗ ಡಿಸೆಂಬರ್ 20ರಂದು ಮತ್ತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ, ಕನ್ನಡದಲ್ಲೇ ಪರೀಕ್ಷೆ ನಡೆಸುವಂತೆ ಅವಕಾಶ ಕೋರಿದೆ.
ಆರೋಗ್ಯ ಸಚಿವಾಲಯದ ಅಧಿಕೃತ ಮಾಹಿತಿಗಳ ಪ್ರಕಾರ ಅಸ್ಸಾಮಿ, ಗುಜರಾತಿ, ತೆಲುಗು, ಬಂಗಾಳಿ, ತಮಿಳು ಹಾಗೂ ಮರಾಠಿ ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದ್ದು ಕನ್ನಡಿಗರು ಮಾತ್ರ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲೇ ನೀಟ್ ಪರೀಕ್ಷೆ ಬರೆಯಬೇಕಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರುವಂತಾಗಿದೆ.
ಆದರೆ, ಕನ್ನಡ ಕಡೆಗಣಿಸಿದ್ದು ತಮ್ಮದೇ ಸರ್ಕಾರದ ಅಧಿಕಾರಿ ಎನ್ನುವ ವಿಷಯ ಸಿಎಂ ಸಿದ್ದರಾಮಯ್ಯ ಅವರ ಅರಿವಿಗೆ ಬಂದೇ ಇಲ್ಲ. ಮೈಸೂರಿನಲ್ಲಿ ಈ ಕುರಿತಾಗಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ 'ನೀಟ್ ಪರೀಕ್ಷೆ ಕನ್ನಡದಲ್ಲಿ ಬರೆಯಲು ಏಕೆ ಅವಕಾಶ ಕೊಟ್ಟಿಲ್ಲವೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಮುಖ್ಯ ಕಾರ್ಯದರ್ಶಿಗೆ ಹೇಳಿದ್ದೇನೆ' ಎನ್ನುವ ಉತ್ತರ ನೀಡಿದ್ದಾರೆ.
ಬೇರೆ ರಾಜ್ಯಗಳು ತಮ್ಮ ಮಾತೃಭಾಷೆಗಾಗಿ ಬಡಿದಾಡುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ರಾಜ್ಯ ಭಾಷೆ ಕನ್ನಡವನ್ನುಉಳಿಸಬೇಕಾದ ರಾಜ್ಯ ಸರ್ಕಾರವೇ ಇಂತಹ ಅಸಡ್ಡೆ ತೋರಿರುವುದು ವಿಪರ್ಯಾಸವೇ ಸರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.