ಸರ್ಕಾರಿ ಉಪನ್ಯಾಸಕರ ಖೊಟ್ಟಿ ಪದವಿ ಪತ್ತೆಗೆ ತನಿಖೆ

Published : Oct 28, 2017, 06:23 PM ISTUpdated : Apr 11, 2018, 12:36 PM IST
ಸರ್ಕಾರಿ ಉಪನ್ಯಾಸಕರ ಖೊಟ್ಟಿ ಪದವಿ ಪತ್ತೆಗೆ ತನಿಖೆ

ಸಾರಾಂಶ

ಭಾರಿ ತಲಾಷ್ | 2009ರಲ್ಲಿ ನೇಮಕಗೊಂಡ 2600 ಬೋಧಕರ ಮೇಲೆ ಕಣ್ಣು | ಎಂಫಿಲ್, ಪಿಎಚ್‌ಡಿ ಪದವಿ ಬಗ್ಗೆ ಮರುಪರಿಶೀಲನೆ ಆರಂಭಿಸಿದ ಸರ್ಕಾರ

ಮಂಗಳೂರು: 2015ರಲ್ಲಿ ನೇಮಕಗೊಂಡ ಕಾಲೇಜು ಉಪನ್ಯಾಸಕರ ಪೈಕಿ ಕೆಲವರು ನಕಲಿ ಶೈಕ್ಷಣಿಕ ದಾಖಲೆಗಳನ್ನು ನೀಡಿದ್ದು ಪತ್ತೆಯಾದ್ದರಿಂದ 2009ರಲ್ಲಿ ಕಾಯಂಗೊಂಡ ಉಪನ್ಯಾಸಕರ ಮೇಲೂ ಕಾಲೇಜು ಶಿಕ್ಷಣ ಇಲಾಖೆ ಸಂಶಯದ ದೃಷ್ಟಿ ಬೀರಿದೆ.

ಈ ಅವಧಿಯಲ್ಲಿ ನೇಮಕಗೊಂಡ ಉಪನ್ಯಾಸಕರ ಎಂಫಿಲ್ ದಾಖಲೆಗಳನ್ನು ಮರು ಪರಿಶೀಲನೆ ನಡೆಸುವಂತೆ ಎಲ್ಲ ಜಿಲ್ಲೆಗಳ ಕಾಲೇಜು ಶಿಕ್ಷಣ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. 2015ರಲ್ಲಿ ಸುಮಾರು 2200 ಮಂದಿ ಉಪನ್ಯಾಸಕರನ್ನು ಇಲಾಖೆ ಕಾಯಂಗೊಳಿಸಿತ್ತು. ಈ ವೇಳೆ 150 ಮಂದಿಯ ಎಂಫಿಲ್, ಪಿಎಚ್‌ಡಿ ಪದವಿ ನಕಲಿ ಎಂಬುದು ಪತ್ತೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಲೇಜು ಶಿಕ್ಷಣ ಇಲಾಖೆ, 2009ರಲ್ಲೂ ಹೀಗೆಯೇ ನಕಲಿ ದಾಖಲೆಗಳ ಹಾವಳಿ ನಡೆದಿರುವ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿ ಮರುಪರಿಶೀಲನೆಗೆ ಸೂಚನೆಯನ್ನು ನೀಡಿದೆ.

2009ರಲ್ಲಿ 2600 ಮಂದಿ ಉಪನ್ಯಾಸಕರ ನೇಮಕ ನಡೆದಿತ್ತು. ಇದರಲ್ಲಿ ಕೂಡ ನಕಲಿ ಎಂಫಿಲ್ ದಾಖಲೆ ಇರುವ ಬಗ್ಗೆ ಇಲಾಖೆಯ ಅಧಿಕಾರಿಗಳು ಸಂಶಯ ತಾಳಿದ್ದರು. ಹೀಗಾಗಿ ಎಂಫಿಲ್ ಪದವಿ ನೀಡಿದ ಮುಕ್ತ ವಿಶ್ವವಿದ್ಯಾಲಯಗಳ ವಿವರಗಳನ್ನು ಪರಿಶೀಲಿಸಿದಾಗ, ಇಲ್ಲಿಯೂ ನಕಲಿ ದಾಖಲೆಗಳ ಹಾವಳಿ ಇರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

2009ರಲ್ಲಿ ನೇಮಕಗೊಂಡ ಉಪನ್ಯಾಸಕರು ಹೊರ ರಾಜ್ಯದ ಮುಕ್ತ ವಿವಿಯ ಎಂಫಿಲ್ ಪದವಿ ಪಡೆದಿದ್ದರೆ, ಆ ದಾಖಲೆಗಳ ಮರು ಪರಿಶೀಲನೆ ನಡೆಸುವಂತೆ ಆದೇಶ ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಇಲಾಖೆಗೆ ವರದಿಯನ್ನು ಸಲ್ಲಿಸಲಾಗುವುದು.

 ಪ್ರೊ.ಉದಯಶಂಕರ ಭಟ್

ಜಂಟಿ ನಿರ್ದೇಶಕರು, ಕಾಲೇಜು

ಶಿಕ್ಷಣ ಇಲಾಖೆ, ಮಂಗಳೂರು.

ಈ ಕಾರಣಕ್ಕೆ 2009ರಲ್ಲಿ ನೇಮಕ ಗೊಂಡ ಎಂಫಿಲ್ ಪಡೆದ ಉಪನ್ಯಾಸಕ ಪದವಿಯನ್ನು ಅಡ್ಡಪರಿಶೀಲನೆಗೆ ಇಲಾಖೆ ಮುಂದಾಗಿದೆ.ಶೇ.40ರಷ್ಟು ನಕಲಿ ಎಂಫಿಲ್?: ಕಾಲೇಜು ಶಿಕ್ಷಣ ಇಲಾಖೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಶೇ.30ರಿಂದ ಶೇ.40ರಷ್ಟು ಎಂಫಿಲ್‌ನ ನಕಲಿ ದಾಖಲೆಗಳು ಈಗಾಗಲೇ ಪತ್ತೆಯಾಗಿವೆ. ಕಳೆದ ಒಂದು ತಿಂಗಳಿನಿಂದ ಇದರ ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಮುಖ್ಯವಾಗಿ ಹೊರ ರಾಜ್ಯದ ಮುಕ್ತ ವಿವಿಗಳಿಂದ ನಕಲಿ ಪದವಿ ಪಡೆದಿರುವ ಕಳವಳಕಾರಿ ಅಂಶವನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ.

ಶಂಕೆಗೆ ಕಾರಣವಾಗಿರುವ ಉಪನ್ಯಾಸಕರ ಎಂಫಿಲ್ ದಾಖಲೆ ಪತ್ರಗಳನ್ನು ಆಯಾ ಮುಕ್ತ ವಿವಿಗೆ ತೆರಳಿ ವ್ಯಕ್ತಿಗತವಾಗಿ ಪರಿಶೀಲನೆ ನಡೆಸಬೇಕು. ಇದಕ್ಕಾಗಿ ರಾಜ್ಯಾದಂತ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತ್ಯೇಕ ತಂಡದಲ್ಲಿ ತನಿಖೆ ನಡೆಸುತ್ತಿದ್ದಾರೆ.

ನಕಲಿ ದಾಖಲೆ ಕಂಡುಬಂದಿರುವ ಪ್ರಕರಣದಲ್ಲಿ ಅಂತಹ ಉಪನ್ಯಾಸಕರನ್ನು ಹುದ್ದೆಯಿಂದ ತೆಗೆದುಹಾಕಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳ ಯಾವುದೇ ಮುಕ್ತ ವಿವಿಗಳು ಇನ್ನೊಂದು ರಾಜ್ಯದಲ್ಲಿ ಅಧ್ಯಯನ ಕೇಂದ್ರ ಅಥವಾ ಶಾಖೆಯನ್ನು ತೆರೆಯುವಂತಿಲ್ಲ. 2011ರಿಂದ ಹೊರ ರಾಜ್ಯದ ವಿವಿಗಳಲ್ಲಿ ಎಂಫಿಲ್ ಕೂಡ ಮಾಡುವಂತಿಲ್ಲ. ಆದರೆ ಯುಜಿಸಿಯ ನಿಯಮವನ್ನು ಮೀರಿ ಅಣ್ಣಾಮಲೈ ವಿವಿ, ಅಲಗಪ್ಪ ವಿವಿ, ವೆಂಕಟೇಶ್ವರ ವಿವಿ, ಕುಪ್ಪಂ ವಿವಿ ಹೆಸರಿನಲ್ಲಿ ದೂರಶಿಕ್ಷಣ ಕೇಂದ್ರದ ಶಾಖೆಯನ್ನು

ಕರ್ನಾಟಕದಲ್ಲೂ ತೆರೆದಿರುವ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಲಾಗುತ್ತಿದೆ. ಇದನ್ನೇ ನಂಬುವ ಕೆಲವು ಉಪನ್ಯಾಸಕರು ಎಂಫಿಲ್, ಪಿಎಚ್‌ಡಿ ಪದವಿ ಪ್ರಮಾಣ ಪತ್ರಗಳನ್ನು ಪಡೆಯುತ್ತಾರೆ. ಅಲ್ಲದೆ ಈ ದಾಖಲೆಗಳನ್ನು ನೇಮಕಾತಿ ಸಂದರ್ಭ ಇಲಾಖೆಗೆ ನೀಡಿದ್ದಾರೆ. ಇದುವೇ ಈಗ ಉಪನ್ಯಾಸಕರ ಕಾಯಂ ಉದ್ಯೋಗಕ್ಕೆ ಎರವಾಗಿ ಪರಿಣಮಿಸಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಯೊಬ್ಬರು.

(ಸಾಂದರ್ಭಿಕ ಚಿತ್ರ)


 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?