
ಚಿತ್ರದುರ್ಗ: ‘ಲಿಂಗಾಯತ ಧರ್ಮ-ಸಾಂವಿಧಾನಿಕ ಮಾನ್ಯತೆ’ ವಿಷಯ ಆಧರಿಸಿ ಗುರುವಾರ ಚಿತ್ರದುರ್ಗದಲ್ಲಿ ನಡೆದ ಲಿಂಗಾಯತರ ಸಮಾವೇಶದಲ್ಲಿ ವೀರಶೈವ ಮಠಾಧಿಪತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ‘ನಮ್ ಜೊತೆ ಬರಾಕಿಲ್ಲ ಅಂದ್ರೆ ಮಠ ಖಾಲಿ ಮಾಡಿ’ ಎಂಬ ಎಚ್ಚರಿಕೆ ಸಂದೇಶವನ್ನೂ ಈ ಸಮಾವೇಶದ ಮೂಲಕ ರವಾನಿಸಲಾಯಿತು. ಜತೆಗೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕ ಧರ್ಮಕ್ಕಾಗಿ ಕಾನೂನು ಹೋರಾಟ ಕೈಗೊಳ್ಳುವ ಘೋಷಣೆಯನ್ನು ಮತ್ತೊಮ್ಮೆ ಮೊಳಗಿಸಲಾಯಿತು.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಮುಂಚೂಣಿ ವಹಿಸಿರುವ ಸಚಿವರಾದ ಎಂ.ಬಿ. ಪಾಟೀಲ್, ವಿನಯ ಕುಲಕರ್ಣಿ ಹಾಗೂ ಮಾಜಿ ಸಚಿವ ಬಸವರಾಜ ಹೊರಟ್ಟಿ ವೀರಶೈವ ಮಠಾಧಿಪತಿಗಳ ಮೇಲೆ ಆಕ್ರೋಶದ ಮಳೆಗರೆದರು. ಶೇ.90ರಷ್ಟು ಸಮಾಜ ನಮ್ಮ ಜೊತೆಗಿದೆ. ಒಣ ಬಡಿವಾರ ನಮಗೆ ಆಗಂಗಿಲ್ಲ, ಬಂದ್ರೆ ನಮ್ ಜೊತೆ ಬನ್ನಿ. ಇಲ್ಲಾ ಅಂದ್ರೆ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ ಎಂದರು.
ಇನ್ನು ಮೇಲೆ ನಾವು ಪಕ್ಷಾಧಾರಿತ ರಾಜಕಾರಣ ಮಾಡುವುದಿಲ್ಲ. ನಮ್ಮದೇನಿದ್ದರೂ ಲಿಂಗಾಯತ ಧರ್ಮದ ರಾಜಕಾರಣ. ಇದಕ್ಕಾಗಿ ಏನೇ ತ್ಯಾಗ ಮಾಡಲು ಸಿದ್ಧರಿದ್ದೇವೆ. ನಮ್ಮ ಮೇಲೆ ವೀರಶೈವರು ಮುನಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಸೋಲಿಸಬಹುದು. ಅದಕ್ಕೂ ನಾವು ಸಿದ್ಧರಿದ್ದೇವೆ. ಸಮಾಜ ಅಭಿವೃದ್ಧಿಯ ಸಂಕಲ್ಪ ಮಾಡಿದ್ದೇವೆ. ಎಲ್ಲದಕ್ಕೂ ರೆಡಿಯಾಗಿದ್ದೇವೆ ಎಂದು ಹೇಳಿದರು.
ಸಮಾವೇಶದ ಆರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಸವಧರ್ಮ ವಿಚಾರದಲ್ಲಿ ಜನ್ಮ ಹೋದರೂ ಚಿಂತೆಯಿಲ್ಲ, ನಿಲುವು ಬದಲಾಯಿಸುವುದಿಲ್ಲ. ಬಸವಣ್ಣನ ಫೋಟೋ ಹಾಕಿಕೊಂಡವರು ಸ್ವತಂತ್ರ ಧರ್ಮದ ಬಗ್ಗೆ ಮುಂದೆ ಬನ್ನಿ. ಇಲ್ಲಾಂದ್ರೆ ನಿಮ್ಮ ಜೊತೆ ಯಾರೂ ಬರುವುದಿಲ್ಲ. ವಿರಕ್ತ ಸ್ವಾಮೀಜಿಗಳಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿವೆ. ಅವುಗಳನ್ನು ಪ್ರಧಾನವಾಗಿ ಬಿಂಬಿಸಿಕೊಂಡು ಹೋಗದೆ ಸಮುದಾಯದ ಜೊತೆ ಕೈ ಜೋಡಿಸಬೇಕು. ವೀರಶೈವ ಮಹಾಸಭಾಕ್ಕೆ ಈಗಾಗಲೇ ತಿಳಿ ಹೇಳಿದ್ದೇವೆ. ನಮ್ಮ ಜೊತೆ ಬನ್ನಿ ಎಂದಿದ್ದೇವೆ. ಇಲ್ಲದಿದ್ದರೆ ಲಿಂಗಾಯತ ಮಹಾಸಭಾ ಗ್ಯಾರಂಟಿ ಎಂದು ಭವಿಷ್ಯದ ನಿಲುವು ಪ್ರಕಟಿಸಿದರು.
ಸಚಿವ ವಿನಯ ಕುಲಕರ್ಣಿ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ವೀರಶೈವ ಲಿಂಗಾಯತ ಅಂತ ಕಳಿಸಿದ್ದರಿಂದ ಮೂರು ಬಾರಿ ಪ್ರತ್ಯೇಕ ಧರ್ಮದ ಮನವಿ ತಿರಸ್ಕೃತಗೊಂಡಿದೆ. ಸುಪ್ರೀಂ ಕೋರ್ಟ್‌ನ 18 ಆದೇಶಗಳು ನಮ್ಮ ಪರವಾಗಿವೆ. ಹಾಗಾಗಿ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕೇ ಸಿಗುತ್ತದೆ ಎಂದರು.
ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಬೆಂಬಲಿಸುವ ಸಂಬಂಧ ಅ.15ರೊಳಗೆ ವೀರಶೈವ ಮಹಾಸಭಾದವರು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಾರಿಯನ್ನು ನಾವೇ ಪ್ರಕಟಿಸುತ್ತೇವೆ ಎಂದರು.
ಇದೇ ವೇಳೆ, ಹಿಂದೂ ಧರ್ಮದಿಂದ ಹೊರ ಹೋದರೆ ಸಮಸ್ಯೆ ಆಗುತ್ತೆ ಅಂತ ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೈನ ಧರ್ಮಕ್ಕೆ ಸೇರಿದ್ದು ಅವರಿಗೆ ಏನಾದರೂ ತೊಂದರೆ ಆಗಿದೆಯೇ? ನಮ್ಮನ್ನು ಪ್ರಶ್ನಿಸುವ ಅಮಿತ್ ಶಾ ಮೊದಲು ಜೈನಧರ್ಮ ಬಿಟ್ಟು ಹಿಂದೂ ಧರ್ಮಕ್ಕೆ ವಾಪಸಾಗಲಿ ಎಂದು ಪಾಟೀಲ ಇದೇ ವೇಳೆ ಸವಾಲು ಹಾಕಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೂರ್ತಿ ಮುರುಘಾಶರಣರು, ಲಿಂಗಾಯತ ಧರ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯ ಆಗಲೇ ಬೇಕು. ಕಾನೂನು ಸಮರಕ್ಕೆ ಎಲ್ಲರೂ ಸಿದ್ಧರಾಗೋಣ. ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅಗತ್ಯ ಕ್ರಮಗಳ ಕೈಗೊಳ್ಳಲು ಮುಂದಾಗೋಣವೆಂದರು. ಇಳಕಲ್‌ನ ಡಾ.ಮಹಾಂತ ಅಪ್ಪಗಳು, ಬಾಲ್ಕಿಯ ಬಸವಲಿಂಗ ಪಟ್ಟದೇವರು, ಮುಂಡರಗಿಯ ನಿಜಗುಣಶ್ರೀ, ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸೇರಿ ಹಲವು ಸ್ವಾಮೀಜಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಮಾತೆ ಮಹಾದೇವಿ ಗೈರು ಹಾಜರಾಗಿದ್ದು ವಿಶೇಷವಾಗಿ ಕಂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.