ಕಾಂಗ್ರೆಸ್, ಜೆಡಿಎಸ್ - ಕುತೂಹಲದ ನಡೆ ಏನು..?

First Published Jun 29, 2018, 7:53 AM IST
Highlights

 ಸರ್ಕಾರದ ಬಾಳುವಿಕೆ ಬಗ್ಗೆ ಸಿದ್ದರಾಮಯ್ಯ ಅವರ ವಿಡಿಯೋಗಳು ಬಿಡುಗಡೆಯಾದ ನಂತರ ಮೈತ್ರಿ ಕೂಟ ಸರ್ಕಾರದಲ್ಲಿ ತೀವ್ರ ಗೊಂದಲ ಉಂಟಾಗಿದ್ದು, ಮುಂದಿನ ನಡೆ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. 

ಬೆಂಗಳೂರು :  ಸರ್ಕಾರದ ಬಾಳುವಿಕೆ ಬಗ್ಗೆ ಸಿದ್ದರಾಮಯ್ಯ ಅವರ ವಿಡಿಯೋಗಳು ಬಿಡುಗಡೆಯಾದ ನಂತರ ಮೈತ್ರಿ ಕೂಟ ಸರ್ಕಾರದಲ್ಲಿ ಉಂಟಾಗಿರುವ ತೀವ್ರ ಗೊಂದಲದ ನಡುವೆಯೇ ಭಾನುವಾರ ಸಮನ್ವಯ ಸಮಿತಿ ಸಭೆ ನಡೆಯುವ ಸಾಧ್ಯತೆಯಿದ್ದು, ಈ ಸಭೆ ಅಂಗಪಕ್ಷಗಳ ನಡುವೆ ಸಮನ್ವಯತೆ ಸಾಧನೆಗೆ ನೆರವಾಗಲಿದೆಯೇ ಎಂಬ ಕುತೂಹಲ ಮೂಡಿದೆ.

ಜೆಡಿಎಸ್‌ ತನ್ನ ಪ್ರಣಾಳಿಕೆಯ ಪ್ರಮುಖ ಅಂಶವಾದ ಸಾಲಮನ್ನಾವನ್ನು ಜಾರಿಗೆ ತರಲು ಪಟ್ಟು ಹಿಡಿದಿದ್ದರೆ, ಇದರಿಂದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಪ್ರಮುಖ ಜನ ಪರ ಯೋಜನೆಗಳಿಗೆ ಪೆಟ್ಟು ಬೀಳುತ್ತದೆ ಎಂದು ಕಾಂಗ್ರೆಸ್‌ ಆತಂಕಗೊಂಡಿದೆ. ಹೀಗಾಗಿಯೇ ವೀರಪ್ಪ ಮೊಯ್ಲಿ ನೇತೃತ್ವದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯಿಂದ ಎರಡು ಪಕ್ಷಗಳ ಪ್ರಣಾಳಿಕೆಯ ಸಾಮಾನ್ಯ ಅಂಶಗಳನ್ನು ಬಜೆಟ್‌ಗೆ ಸೇರಿಸುವ ಬಗ್ಗೆ ವರದಿಯನ್ನು ಪಡೆಯಲಿದೆ.

ಈ ವರದಿಯು ಸಮನ್ವಯ ಸಮಿತಿಯಲ್ಲಿ ಚರ್ಚೆಗೆ ಬರಲಿದ್ದು, ಅದರಲ್ಲಿನ ಪ್ರಮುಖ ಅಂಶಗಳನ್ನು ಬಜೆಟ್‌ನಲ್ಲಿ ಅಳವಡಿಸಬೇಕು ಎಂಬುದು ಕಾಂಗ್ರೆಸ್‌ನ ಪಟ್ಟು. ಇದಕ್ಕೆ ಜೆಡಿಎಸ್‌ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಷ್ಟರ ಮಟ್ಟಿಗೆ ಒಪ್ಪುತ್ತಾರೆ ಎಂಬುದು ಕಾದು ನೋಡಬೇಕಿದೆ.

ಕಾಂಗ್ರೆಸ್‌ ತನ್ನ ಎಲ್ಲಾ ಜನಪ್ರಿಯ ಯೋಜನೆಗಳನ್ನು ಮುಂದುವರೆಸಬೇಕು ಎಂದು ಪಟ್ಟು ಹಿಡಿದಿದೆ. ಇದನ್ನು ಮಾಡಿದರೆ ಸಾಲಮನ್ನಾಗೆ (ಮೊದಲ ಹಂತದಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎನ್ನಲಾಗುತ್ತಿದೆ) ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಎಂಬ ಆತಂಕ ಜೆಡಿಎಸ್‌ನದ್ದು. ಇದನ್ನು ಹೇಗೆ ಸಮನ್ವಯ ಸಮಿತಿ ಸರಿದೂಗಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಇದಲ್ಲದೆ, ಅಧಿಕಾರಿಗಳ ವರ್ಗಾವಣೆ, ನಿಗಮ ಮಂಡಳಿ ನೇಮಕದಂತಹ ವಿಚಾರಗಳು ಸಹ ಸಭೆಯಲ್ಲಿ ಚರ್ಚೆಗೆ ಬರಲಿದೆ ಎನ್ನಲಾಗಿದೆ.

click me!