ಸಮಾಜವನ್ನು ಒಗ್ಗೂಡಿಸುವ ಬದಲು ಜಾತಿ-ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸಿ ಒಡೆಯುವ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಒಡೆಯುವ ಮಹಾಪುರುಷ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಜು.28): ಸಮಾಜವನ್ನು ಒಗ್ಗೂಡಿಸುವ ಬದಲು ಜಾತಿ-ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸಿ ಒಡೆಯುವ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಒಡೆಯುವ ಮಹಾಪುರುಷ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿನ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿಗಳು ಲಿಂಗಾಯತರಿಗೆ ಸ್ವತಂತ್ರ ಧರ್ಮದ ಸ್ಥಾನಮಾನ, ಪ್ರತ್ಯೇಕ ನಾಡಧ್ವಜದಂತಹ ವಿಷಯಗಳನ್ನು ಚರ್ಚೆಗೆ ಬಿಟ್ಟಿದ್ದಾರೆ. ಸಮಾಜ ಸುಧಾರಕರಾದ ಬಸವಣ್ಣ, ಕನಕದಾಸ, ಅಂಬೇಡ್ಕರ್‌ರಂತಹ ಮಹಾನ್ ವ್ಯಕ್ತಿಗಳು ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡಿದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ಜಾತಿ ಒಡೆದು ಮಹಾಪುರುಷರಾಗಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಪ್ರಸ್ತುತ ಲಿಂಗಾಯತರು ಪ್ರತ್ಯೇಕ ಧರ್ಮ ಕೇಳಿದ್ದಾರೆ. ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮ ಎಂದು ಘೋಷಣೆ ಮಾಡಿದರೆ ಮುಂದಿನ ದಿನದಲ್ಲಿ ಕುರುಬರು, ದಲಿತರ, ತಿಗಳರು ಸೇರಿದಂತೆ ಇತರೆ ಸಮುದಾಯದವರು ಪ್ರತ್ಯೇಕ ಧರ್ಮ ಮಾಡಿ ಎಂದು ಕೇಳುತ್ತಾರೆ. ಆಗ ಪ್ರತಿ ಸಮುದಾಯಕ್ಕೂ ಧರ್ಮ ಮಾಡಲು ಸಾಧ್ಯವೇ? ಪ್ರತ್ಯೇಕ ಧರ್ಮದ ಬಗ್ಗೆ ಧಾರ್ಮಿಕ ನಾಯಕರು ತೀರ್ಮಾನಿಸುತ್ತಾರೆ. ಇದು ಸರ್ಕಾರದ ಕೆಲಸವಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಜನರ, ರೈತರ ಹಿತ ಕಾಪಾಡುವುದು, ರಾಜ್ಯದ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡುವುದಕ್ಕಾಗಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಆದರೆ, ರಾಜ್ಯದ ಅಭಿವೃದ್ಧಿಯ ಕಡೆ ಗಮನ ನೀಡದೆ ಪ್ರತ್ಯೇಕ ಬಾವುಟ, ಪ್ರತ್ಯೇಕ ಧರ್ಮ ಮಾಡುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಸಂಘ-ಸಂಸ್ಥೆಗಳು, ಧಾರ್ಮಿಕ ನಾಯಕರು ಪ್ರತ್ಯೇಕ ಧರ್ಮಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಆ ವಿಷಯ ಅವರಿಗೆ ಬಿಟ್ಟುಬಿಡಬೇಕು. ಅದು ರಾಜಕೀಯ ಪಕ್ಷಗಳ ಕೆಲಸವಲ್ಲ. ಪ್ರತ್ಯೇಕ ಧರ್ಮಗಳು ಬೇಕು ಎಂಬುದಾಗಿ ಹೊರಟರೆ ಸಮಾಜ ಉಳಿಯುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ನೀಡುವ ಕುರಿತು ಅಭಿಪ್ರಾಯ ಸಂಗ್ರಹಕ್ಕೆ ಮುಖ್ಯಮಂತ್ರಿಗಳು ಐವರು ಸಚಿವರನ್ನು ನಿಯೋಜಿಸಿದ್ದಾರೆ. ಅವರವರ ಇಲಾಖೆಯಲ್ಲಿ ಮಾಡುವ ಕೆಲಸ ಬಹಳಷ್ಟಿವೆ. ಅದನ್ನು ಮಾಡುವ ಬದಲು ಪ್ರತ್ಯೇಕ ಧರ್ಮ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಿಸುವುದು ಅಗತ್ಯವೇನಿತ್ತು? ಅವರಿಗೆಲ್ಲಾ ಕೆಲಸ ಇಲ್ಲವೇ? ಮುಂದಿನ ಚುನಾವಣೆಯಲ್ಲಿ ಐವರು ಸಚಿವರು ಸೇರಿದಂತೆ ಕಾಂಗ್ರೆಸ್‌ನ ಬಹುತೇಕರಿಗೆ ಫುಟ್‌ಪಾತೇ ಗತಿ ಎಂದು ಈಶ್ವರಪ್ಪ ಲೇವಡಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಹೇಗಿದೆ ಹಾಗೂ ಅವರ ಕೆಲಸಗಳು ಎಷ್ಟರಮಟ್ಟಿಗೆ ಸರಿ ಎಂಬುದರ ಬಗ್ಗೆ ಬಿಜೆಪಿ ಮನೆಮನೆಗೆ ಹೋಗಿ ಅಭ್ರಿಪಾಯ ಸಂಗ್ರಹಿಸುತ್ತಿದೆ. ಕಾಂಗ್ರೆಸ್‌ನಂತೆ ಸಮಾಜ ಒಡೆಯುವುದಕ್ಕಾಗಿ ಅಭಿಪ್ರಾಯ ಕ್ರೋಡೀಕರಿಸುತ್ತಿಲ್ಲ. ಯಾರು ಏನು ಕೆಲಸ ಮಾಡಬೇಕೋ ಅದನ್ನು ಮಾತ್ರ ಮಾಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದ ಅವರು, ಮುಖ್ಯಮಂತ್ರಿಗಳು ಬೆಳಗ್ಗೆ ಒಂದು ಹೇಳಿಕೆ ನೀಡಿದರೆ, ಸಂಜೆ ಮತ್ತೊಂದು ಹೇಳಿಕೆ ನೀಡುತ್ತಾರೆ. ಒಂದು ಕಡೆ ಬರಗಾಲ ಇದೆ ಎಂದು ಹೇಳಿದರೆ, ಮತ್ತೊಂದೆಡೆ ಅತಿಹೆಚ್ಚು ನೀರು ಬಂದಿದೆ, ಮೋಡಬಿತ್ತನೆ ಮಾಡಲಾಗುತ್ತಿದೆ, ಕೆರೆಗಳ ಡಿನೋಟಿಫಿಕೇಷನ್ ಮಾಡುವ ಬಗ್ಗೆ ಹೇಳಿಕೆ ನೀಡುತ್ತಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.