
ಬೆಂಗಳೂರು (ಸೆ.26): ಮುಂದಿನ ಏಳು ವರ್ಷಗಳಲ್ಲಿ ನವ ಕರ್ನಾಟಕ ನಿರ್ಮಾಣ ಮಾಡ್ತೀವಿ ಅನ್ನೋ ಘೋಷಣೆಯೊಂದಿಗೆ ಸಿದ್ದರಾಮಯ್ಯ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದ ಜನರಿಗೆ ಹಲವು ಭಾಗ್ಯಗಳನ್ನು ಕರುಣಿಸಿರೋ ಕಾಂಗ್ರೆಸ್ ಇದೀಗ 2015 ರ ಹೊತ್ತಿಗೆ ರಾಜ್ಯ ಅಭಿವೃದ್ದಿಯಲ್ಲಿ ಇನ್ನಷ್ಟು ಮುಂಚೂಣಿಗೆ ಬರಲಿದೆ ಅನ್ನುತ್ತಿದ್ದಾರೆ. ಆ ಮೂಲಕ ಚುನಾವಣೆಗೂ ಕೂಡಾ ಭರ್ಜರಿಯಾಗೇ ತಯಾರಾಗುತ್ತಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ. ಅದರಲ್ಲೂ ಆಡಳಿತ ಪಕ್ಷವಂತೂ ಮತ್ತೆ ಅಧಿಕಾರ ಉಳಿಸಿಕೊಳ್ಳೋಕೆ ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮಾಡದೇ ಇದ್ದ ಹೊಸ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅದೇ ನವ ಕರ್ನಾಟಕ-2025. ಇದರ ಮೂಲಕ ಜನರ ಮನ ಗೆಲ್ಲೋಕೆ ಕಸರತ್ತು ಆರಂಭಿಸಿದ್ದಾರೆ. ಅನ್ನಬಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ನಂತಹ ಜನಪ್ರಿಯ ಯೋಜನೆಗಳ ನಂತರ ಇದೀಗ ಮುಂದಿನ ಏಳು ವರ್ಷಗಳೊಳಗೆ ನವ ಕರ್ನಾಟಕ ನಿರ್ಮಾಣ ಮಾಡೋ ಯೋಚನೆಯೊಂದಿಗೆ ಜನರ ಬಳಿಗೆ ಹೋಗಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ.
ಏನಿದು ನವ ಕರ್ನಾಟಕ-2025?
ಮುಂದಿನ ಏಳು ವರ್ಷದಲ್ಲಿ ರಾಜ್ಯದ ಅಭಿವೃದ್ಧಿ ಹೇಗೆ ಸಾಗಬೇಕು ಎನ್ನುವ ನೀಲನಕ್ಷೆಯನ್ನು ತಯಾರಿಸಲಾಗುತ್ತೆ. ಪ್ರಮುಖ 13 ಆದ್ಯತಾ ವಲಯಗಳಿಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುವ ಸಲುವಾಗಿ ಮಾಹಿತಿ ಕಲೆಹಾಕುವುದು. ಇನ್ನು ಜನರ ಸಲಹೆ ಆಧರಿಸಿ ಅಭಿವೃದ್ಧಿ ಯೋಜನೆಗಳ ರೂಪುರೇಷೆ ಮಾಡೋದು ಸರ್ಕಾರದ ಯೋಚನೆ. ಜನ ಹಾಗೂ ಜನಪ್ರತಿನಿಧಿಗಳಿಂದ ಮಾಹಿತಿ ಸಂಗ್ರಹಿಸಲಾಗುವುದು. ಸರ್ಕಾರದ ಹಿರಿಯ ಅಧಿಕಾರಿಗಳು ಜನರ ಬಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ ಅಭಿವೃದ್ಧಿಯ ರೂಪುರೇಷೆಯನ್ನು ತಯಾರಿಸಲಿದ್ದಾರೆ. ಇನ್ನು ಜನರ ಸಲಹೆ ಆಧರಿಸಿ ನವ ಕರ್ನಾಟಕ ಮುನ್ನೋಟ-2025 ಅನ್ನು ಮುಂದಿನ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು. ಡಿಸೆಂಬರ್ ನಲ್ಲಿ ಮುನ್ನೋಟ ಯೋಜನೆ ಸಂಪೂರ್ಣ ಸಿದ್ಧಗೊಳ್ಳಲಿದೆ. ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ಮುನ್ನೋಟದ ಅಂಶಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗೆ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಯ ರೂಪುರೇಷೆ ತಯಾರಿಸಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಈಗಾಗಲೇ ನವಕರ್ನಾಟಕ ನಿರ್ಮಾಣ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡೋದನ್ನೂ ಸಿಎಂ ಆರಂಭಿಸಿದ್ದಾರೆ. ಗುಜರಾತ್ ಮಾದರಿಯನ್ನು ಮುಂದಿಟ್ಟು ಕರ್ನಾಟಕದಲ್ಲಿ ಚುನಾವಣೆ ಎದುರಿಸಿದ್ದ ಬಿಜೆಪಿಗೆ ಟಾಂಗ್ ನೀಡಲು ಕರ್ನಾಟಕ ಮಾದರಿಯನ್ನೇ ರೆಡಿ ಮಾಡಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.