ಮೋದಿ ಆಡಳಿತ ‘ಬಾಯಿ ಬಡಾಯಿ, ಸಾಧನೆ ಶೂನ್ಯ': ಸಿಎಂ

Published : May 26, 2017, 10:30 PM ISTUpdated : Apr 11, 2018, 12:45 PM IST
ಮೋದಿ ಆಡಳಿತ ‘ಬಾಯಿ ಬಡಾಯಿ, ಸಾಧನೆ ಶೂನ್ಯ': ಸಿಎಂ

ಸಾರಾಂಶ

ಪೊಳ್ಳು ಭರವಸೆಗಳ ಮೂಲಕ ನಿರೀಕ್ಷೆಗಳ ಆಶಾಗೋಪುರ ಕಟ್ಟಿದ್ದ ನರೇಂದ್ರ ಮೋದಿ ಅವರ ಮೂರು ವರ್ಷಗಳ ಆಡಳಿತದ ಬಗ್ಗೆ ಜನರು ಭ್ರಮನಿರಸನರಾಗಿದ್ದಾರೆ. ಮೋದಿಯ ಒಟ್ಟಾರೆ ಆಡಳಿತ ‘ಬಾಯಿ ಬಡಾಯಿ, ಸಾಧನೆ ಶೂನ್ಯ’ ಎಂಬಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.

 ಬೆಂಗಳೂರು (ಮೇ.26): ಪೊಳ್ಳು ಭರವಸೆಗಳ ಮೂಲಕ ನಿರೀಕ್ಷೆಗಳ ಆಶಾಗೋಪುರ ಕಟ್ಟಿದ್ದ ನರೇಂದ್ರ ಮೋದಿ ಅವರ ಮೂರು ವರ್ಷಗಳ ಆಡಳಿತದ ಬಗ್ಗೆ ಜನರು ಭ್ರಮನಿರಸನರಾಗಿದ್ದಾರೆ. ಮೋದಿಯ ಒಟ್ಟಾರೆ ಆಡಳಿತ ‘ಬಾಯಿ ಬಡಾಯಿ, ಸಾಧನೆ ಶೂನ್ಯ’ ಎಂಬಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.
‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳಿದ್ದ ಬಿಜೆಪಿ ಇದೀಗ ದಲಿತರು, ಅಲ್ಪಸಂಖ್ಯಾತರನ್ನು ಮಾತ್ರ ಬರಬೇಡಿ ಎನ್ನುವ ಮೂಲಕ ಸಬ್ ಕಾ ಸಾಥ್ ಪದದ ಅರ್ಥವನ್ನೇ ಕೆಡಿಸಿದೆ. ಪೊಳ್ಳು ಭರವಸೆ ನೋಡಿಕೊಂಡು ಬೆಂಬಲಿಸಿದ್ದ ಯುವಕ-ಯುವತಿಯರಿಗೆ ವಸ್ತುಸ್ಥಿತಿಯ ಅರಿವಾಗುತ್ತಿದೆ ಎಂದು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಮೋದಿ ಹೇಳಿದ್ದರು. ಇದೀಗ ಅವರೇ ಕೊಟ್ಟಿರುವ ಅಂಕಿ ಅಂಶದ ಪ್ರಕಾರ ೩ ವರ್ಷದಲ್ಲಿ ೪ ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ನಿರ್ಮಲ ಭಾರತದ ಹೆಸರನ್ನು ಸ್ವಚ್ಛ ಭಾರತ ಎಂದು ಬದಲಿಸಿಕೊಂಡು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ತಾರತಮ್ಯ ಮಾಡುತ್ತಿದ್ದು, ಕೇಂದ್ರ ಅನುದಾನಿತ ಎಲ್ಲ ಯೋಜನೆಗಳಿಗೂ ಅನುದಾನ ಕಡಿತಗೊಳಿಸಿದ್ದಾರೆ. ೧೪ನೇ ಹಣಕಾಸು ಆಯೋಗದಲ್ಲಿ ಗುಜರಾತ್‌ಗೆ ಆರು ಸಾವಿರ ಕೋಟಿ ಅನುದಾನ ನೀಡಿ ನಮಗೆ ಒಂದು ಸಾವಿರ ಚಿಲ್ಲರೆ ಕೋಟಿ ಕೊಟ್ಟಿದ್ದಾರೆ ಎಂದು ಟೀಕಿಸಿದರು.
 
ವೈಯಕ್ತಿಕ ಜೀವನಕ್ಕೆ ತಲೆ ಹಾಕಬೇಡಿ:
ಜನರ ವೈಯಕ್ತಿಕ ಜೀವನ, ಜನರ ಹಕ್ಕು ದಮನ ಮಾಡಲಾಗುತ್ತಿದೆ. ಭಾವನಾತ್ಮಕ ವಿಷಯಗಳಿಗೆ ಹೆಚ್ಚು ಪ್ರಚಾರ ನೀಡಿ ಜನರನ್ನು ಕೆರಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹದ್ದೇ ಊಟ ಮಾಡಿ, ಹೀಗೇ ಉಡುಗೆ ತೊಡಿ ಎಂದು ಹೇಳುವ ಹಕ್ಕು ಇವರಿಗೆ ಯಾರು ಕೊಟ್ಟರು ಎಂದು ಸಿದ್ದರಾಮಯ್ಯ ತರಾಟೆ ತೆಗೆದುಕೊಂಡರು.
 
ಯಡಿಯೂರಪ್ಪರಿಂದ ಅಸ್ಪಶ್ಯತೆ:
ಎಂದೂ ದಲಿತರ ಮನೆಗೆ ಹೋಗದ ಯಡಿಯೂರಪ್ಪ ಇದೀಗ ದಲಿತರ ಮನೆಗೆ ಹೋಗುತ್ತಿದ್ದಾರೆ. ಹಾಳಾಗಿ ಹೋಗಲಿ, ಅವರು ಮಾಡಿರುವ ಪಲಾವ್ ತಿನ್ನದೆ ಹೋಟೆಲ್ ತಿಂಡಿ ತರಿಸಿಕೊಂಡು ಊಟ ಮಾಡಿದ್ದಾರೆ. ಇದು ಕೂಡ ಅಸ್ಪಶ್ಯತೆಯ ಸಂಕೇತವಲ್ಲವೇ? ಜನರನ್ನು ಒಂದು ಬಾರಿ ಮೂರ್ಖರನ್ನಾಗಿ ಮಾಡಬಹುದು, ಮತ್ತೆ ಮತ್ತೆ ಮೂರ್ಖರನ್ನಾಗಿ ಮಾಡಲು ಹೋದರೆ ತಾವೇ ಮೂರ್ಖರಾಗಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಡಿಯೂರಪ್ಪಗೆ ಎಚ್ಚರಿಕೆ ನೀಡಿದರು.
 
ಮೊಯ್ಲಿ-ಮೋದಿ ಗೊಂದಲ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರಾಟೆಯಲ್ಲಿ ಸಿದ್ದರಾಮಯ್ಯ ಅವರು ಮೋದಿ ಬದಲು ಮೊಯ್ಲಿ ಎಂದು ಉಚ್ಚರಿಸಿದರು. ಬಳಿಕ ಪತ್ರಕರ್ತರು ಎಚ್ಚರಿಸಿದ್ದಕ್ಕೆ  ನಗುತ್ತಾ ಆ ಎರಡೂ ಹೆಸರು ಯಾವಾಗ್ಲೂ ಕನ್‌ಫ್ಯೂಸ್ ಆಗುತ್ತೆ ಎಂದರಾದರೂ ಮೊಯ್ಲಿ ಏನು ಪ್ರಧಾನಮಂತ್ರಿ ಆಗಿದ್ದರೇನ್ರಿ? ನಾನು ಮಾತನಾಡಿದ್ದು ಪ್ರಧಾನಮಂತ್ರಿ ಬಗ್ಗೆ ಎಂದು ಸಮಜಾಯಿಷಿ ನೀಡಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ