
ಬೆಂಗಳೂರು(ಮೇ.29): ಎಸ್ ಆರ್ ಪಾಟೀಲ್ ಮಾಜಿ ಸಚಿವ. ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲು ಸಿದ್ದರಾಮಯ್ಯ ಭಾರೀ ಪ್ರಯತ್ನ ಮಾಡಿದ್ದರು. ಆದರೆ, ಅಧ್ಯಕ್ಷ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ. ಹಾಗಾದರೆ ಎಸ್ ಆರ್ ಪಾಟೀಲ್'ಗೆ ಯಾವ ಸ್ಥಾನ ನೀಡುವ ಚಿಂತನೆ ಕಾಂಗ್ರೆಸ್'ನಲ್ಲಿ ನಡೆದಿದೆ ? ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್ ಆರ್ ಪಾಟೀಲ್ ಐಟಿ-ಬಿಟಿ ಸಚಿವರಾಗಿದ್ದವರು. ಆದರೆ, ಏಕಾಏಕಿ ಅವರ ಸಚಿವ ಸ್ಥಾನದಿಂದ ರಾಜೀನಾಮೆ ಪಡೆಯಲಾಗಿತ್ತು. ಹಿಂದು ಮುಂದು ನೋಡದೆ ಪಾಟೀಲ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಪಾಟೀಲ್ ಕೂಡಾ ಒಪ್ಪಿದ್ದರು ಎನ್ನಲಾಗಿದೆ.
ಎಸ್ ಆರ್ ಪಾಟೀಲ್ ಪರ ಸಿಎಂ ಒಲವಿತ್ತು ನಿಜ. ಆದರೆ, ಹೈಕಮಾಂಡ್ ನಿರ್ಧಾರ ಮತ್ತು ಆಲೋಚನೆಗಳೇ ಬೇರೆಯಾಗಿದ್ದು, ಪಾಟೀಲ್'ಗೆ ಅಧ್ಯಕ್ಷ ಸ್ಥಾನ ಕೈತಪ್ಪುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಹೈಕಮಾಂಡ್ ಈ ವಿಚಾರದಲ್ಲಿ ಸಿದ್ದರಾಮಯ್ಯರ ಮಾತು ಕೇಳಲು ತಯಾರಿಲ್ಲ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಎಸ್ ಆರ್ ಪಾಟೀಲ್ ಅಕ್ಷರಶಃ ಅತಂತ್ರರಾಗಿದ್ದಾರೆ. ಇತ್ತ ಮಂತ್ರಿ ಸ್ಥಾನವೂ ಇಲ್ಲ. ಅಧ್ಯಕ್ಷ ಸ್ಥಾನವೂ ಇಲ್ಲ ಎನ್ನುವ ಹಾಗೇ ಆಗಿದೆ.
ಆದರೆ, ಅಂತಿಮವಾಗಿ ಸಿದ್ದರಾಮಯ್ಯ ಒಂದು ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಎಸ್ ಆರ್ ಪಾಟೀಲರನ್ನು ಮಂತ್ರಿಯನ್ನಾಗಿ ಅಥವಾ ವಿಧಾನ ಪರಿಷತ್ ಸಭಾಪತಿಯನ್ನಾಗಿಯಾದರೂ ಮಾಡಬೇಕು ಎನ್ನುವುದು. ಸಂಪುಟ ವಿಸ್ತರಣೆ ಮಾಡಿದರೆ ಮತ್ತೆ ಪಕ್ಷ ಮತ್ತು ಸರ್ಕಾರದಲ್ಲಿ ಭಿನ್ನಮತ ಆರಂಭವಾಗಬಹುದು ಎನ್ನುವ ಆತಂಕ ಸಿದ್ದರಾಮಯ್ಯರದ್ದು. ಆದ್ದರಿಂದ ಮಂತ್ರಿ ಬದಲಾಗಿ ಛೇರ್ಮನ್ ಹುದ್ದೆಗೆ ಪಾಟೀಲರನ್ನು ತರುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲ ಹೆಚ್ಚಿದೆ. ಹೀಗಾಗಿ ಸಬಾಪತಿ ಮಾಡುವುದೇ ಒಳಿತು ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ ಎನ್ನಲಾಗಿದೆ.
ಒಟ್ಟು ಸದಸ್ಯರ ಸಂಖ್ಯೆ 75
ಕಾಂಗ್ರೆಸ್ 32 - ಪಕ್ಷೇತರ 3 ಸದಸ್ಯರ ಬೆಂಬಲ- ಒಟ್ಟು 35
ಬಿಜೆಪಿ 22 - ಪಕ್ಷೇತರ 2 ಸದಸ್ಯರ ಬೆಂಬಲ- ಒಟ್ಟು 24
ಜೆಡಿಎಸ್ - 13
ಸಭಾಪತಿ - 01
ಖಾಲಿ ಇರುವ ಸಂಖ್ಯೆ- 02
ಪಾಟೀಲರನ್ನು ಸಭಾಪತಿ ಮಾಡಲು ಒಂದೆರಡು ಮತಗಳು ಕಡಿಮೆ ಆಗಬಹುದು. ಆದರೆ, ಜೆಡಿಎಸ್ ಬೆಂಬಲ ಪಡೆದು ಪಾಟೀಲರನ್ನು ಶತಾಗತಾಯ ಛೇರ್ಮನ್ ಮಾಡಲು ಸಿದ್ದರಾಮಯ್ಯ ವೇದಿಕೆ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಯಾರಾಗುತ್ತಾರೆ ಎನ್ನುವುದರ ಮೇಲೆ ಪಾಟೀಲರ ಸಭಾಪತಿ ಪತಿ ಸ್ಥಾನ ನಿಂತಿದೆ ಎನ್ನಲಾಗಿದೆ. ಯಾಕೆಂದರೆ ಡಿಕೆ ಶಿವಕುಮಾರ್ ಅಧ್ಯಕ್ಷರಾದರೆ, ದೇವೇಗೌಡರು ಕಾಂಗ್ರೆಸ್'ಗೆ ಬೆಂಬಲ ನೀಡಲು ಒಪ್ಪುತ್ತಾರಾ ಎನ್ನುವ ಪ್ರಶ್ನೆ ಕೂಡಾ ಎದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.