ನನ್ನ ಗುರು ದೇವೇಗೌಡ ಅಲ್ಲ ರಾಮಕೃಷ್ಣ ಹೆಗಡೆ: ಸಿದ್ದರಾಮಯ್ಯ

By Suvarna Web DeskFirst Published Feb 22, 2018, 7:17 AM IST
Highlights

ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರೇ ಹೊರತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು : ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರೇ ಹೊರತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಾಸಕರ ಭವನದ ಆವರಣದಲ್ಲಿ ಶಾಸಕರ ಸಾಂಸಾರಿಕ ಕೊಠಡಿ ಕಟ್ಟಡ ಉದ್ಘಾಟನೆ ಬಳಿಕ ಲೋಕಾರೂಢಿಯಾಗಿ ಮಾತನಾಡಿದ ಮುಖ್ಯಮಂತ್ರಿಗಳು, ನಾನು ರಾಜಕೀಯವಾಗಿ ಇಷ್ಟುಎತ್ತರಕ್ಕೆ ಬೆಳೆದಿದ್ದು ದೇವೇಗೌಡರ ಹಂಗಿನಿಂದಲ್ಲ. ರಾಮಕೃಷ್ಣ ಹೆಗಡೆ ಅವರು ನನ್ನನ್ನು ಬೆಳೆಸಿದರು. ಅನಂತರ ನನ್ನ ಸ್ವಂತ ಸಾಮರ್ಥ್ಯದಿಂದ ಬೆಳೆದು ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿದರು.

1983ರಲ್ಲಿ ಸ್ವಂತ ಬಲದಿಂದ ಗೆದ್ದು ಬಂದೆ. ಆಗ ದೇವೇಗೌಡರು ಯಾರು ಎಂಬುದೇ ನನಗೆ ಗೊತ್ತಿರಲಿಲ್ಲ. ಎರಡು ಬಾರಿ ಯಾರ ಹಂಗಿಲ್ಲದೇ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದೆ. ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಸಚಿವರಾಗಿ ಮಾಡಿದ್ದರು. ನಂತರ ನನಗೂ ಹೆಗಡೆ ಅವರ ನಡುವಿನ ಮನಸ್ತಾಪದಿಂದ ನನ್ನನ್ನು ವಜಾ ಮಾಡಿದರು. ಬಳಿಕ ನನ್ನನ್ನು ದೇವೇಗೌಡರು ಕರೆದುಕೊಂಡು ಹೋದರು ಎಂದು ಹೇಳಿದರು.

ಪಕ್ಕದಲ್ಲಿಯೇ ಇದ್ದ ಬಸವರಾಜ ಹೊರಟ್ಟಿಹಾಗೂ ಶ್ರೀಕಂಠೇಗೌಡರ ಕುರಿತು ಮಾತನಾಡಿದ ಅವರು, ಈ ಇಬ್ಬರ ಮಧ್ಯದಲ್ಲಿ ನಾನು ಸಿಕ್ಕಿಹಾಕಿಕೊಂಡಿಲ್ಲ. ಅವರ ಮಧ್ಯೆ ಸಿಕ್ಕಿಕೊಂಡಿದ್ದರೆ ಇಷ್ಟುಎತ್ತರಕ್ಕೆ ಬೆಳೆಯುತ್ತಿರಲಿಲ್ಲ. ನಿಮ್ಮಿಬ್ಬರ ಮಧ್ಯೆ ಉಳಿಯದೆ ನಾನು ಸೇಫ್‌ ಆದೆ. ಆದರೆ, ಸಿದ್ದರಾಮಯ್ಯನವರನ್ನು ಬೆಳೆಸಿದ್ದು ನಾನು ಎಂದು ದೇವೇಗೌಡರು ಹೇಳುತ್ತಾರಲ್ಲ. ನನ್ನಂತಹ ನಾಲ್ಕು ಮಂದಿಯನ್ನು ಬೆಳೆಸಲಿ ನೋಡೋಣ. ಅವರದ್ದು ಕುಟುಂಬ ರಾಜಕಾರಣ. ಬೇರೆಯವರು ಬೆಳೆಯುವುದನ್ನು ದೇವೇಗೌಡರ ಕುಟುಂಬ ಸಹಿಸುವುದಿಲ್ಲ ಎಂದು ಟೀಕಿಸಿದರು.

click me!