ಕರ್ನಾಟಕ -2025: ಸಿಎಂ ಅನಾವರಣ, ವಸತಿ, ನೀರು, ವಿದ್ಯುತ್, ಶಿಕ್ಷಣಕ್ಕೆ ಆದ್ಯತೆ ಮತ್ತೆ ಗೆದ್ದು ನಮ್ಮಿಂದಲೇ ಜಾರಿ

By Suvarna Web DeskFirst Published Mar 4, 2018, 8:09 AM IST
Highlights

ಕರ್ನಾಟಕ ಪ್ರಗತಿಯಲ್ಲಿ ದಾಪುಗಾಲುಹಾಕಿದ್ದು, ಗುಜರಾತ್ ಅನ್ನು ಹಲವುಕ್ಷೇತ್ರಗಳಲ್ಲಿ ಹಿಂದಿಕ್ಕಿದೆ. ಹೂಡಿಕೆಯಲ್ಲಿಗುಜರಾತ್ ಹಿಂದಿಕ್ಕಿ ಕರ್ನಾಟಕ ನಂ.1 ಸ್ಥಾನ ಗಳಿಸಿದೆ. ಪ್ರಸ್ತುತ ಕರ್ನಾಟಕಕ್ಕೆಬರುತ್ತಿರುವ ಶೇ.50ರಷ್ಟು ಅನುದಾನಕೂಡ ಗುಜರಾತ್‌ಗೆ ಬರುತ್ತಿಲ್ಲ.ಮುಂದೆಯೂ ಕರ್ನಾಟಕವನ್ನುಅಭಿವೃದ್ಧಿಯತ್ತ ಕೊಂಡೊಯ್ಯಲು ನವಕರ್ನಾಟಕ ವಿಷನ್-2025 ವರದಿಸಂಗ್ರಹಿಸಲಾಗುತ್ತಿದೆ

ಬೆಂಗಳೂರು(ಮಾ.04):ಕಳೆದ ಐದು ವರ್ಷಗಳಲ್ಲಿ ನವ ಕರ್ನಾಟಕ ನಿರ್ಮಾಣಕ್ಕೆ ತಮ್ಮ ನೇತೃತ್ವದ ಸರ್ಕಾರ ಭದ್ರ ಅಡಿಪಾಯ ಹಾಕಿದ್ದು, ಮುಂದಿನ ಚುನಾವಣೆಯಲ್ಲೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು ‘ನವ ಕರ್ನಾಟಕ ವಿಷನ್- 2025’ ಅನ್ನು ನಾವೇ ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನವ ಕರ್ನಾಟಕ ವಿಷನ್-2025 ಕಿರುಹೊತ್ತಗೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕರ್ನಾಟವು 2025ಕ್ಕೆ ಹೇಗಿರಬೇಕು ಎಂಬುದನ್ನು ತಿಳಿಯುವುದಕ್ಕಾಗಿ ಎಲ್ಲ ಕ್ಷೇತ್ರಗಳ ತಜ್ಞರು, ಸಾರ್ವಜನಿಕರಿಂದ ಸಲಹೆ, ಸೂಚನೆ ಪಡೆಯಲಾಗಿದೆ. ನಿರಂತರ ಪ್ರಗತಿಗಾಗಿ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ವರದಿ ಸಿದ್ಧಗೊಳಿಸಲಾಗಿದೆ. ಇಂದಿನ ನವ ಕರ್ನಾಟಕ ನಿರ್ಮಾಣ ಮಂಥನ ಸಭೆಯಲ್ಲಿ ನಡೆಯಲಿರುವ ಚರ್ಚೆಗಳನ್ನು ಸಹ ವರದಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿಯತ್ತ ಸಾಗಿದೆ. ಅದುವರೆಗೂ ಗುಜರಾತ್ ಅನ್ನು ಎಲ್ಲಾ ಕ್ಷೇತ್ರಗಳಲ್ಲೂ ಮಾದರಿ ಎನ್ನಲಾಗುತ್ತಿತ್ತು. ಆದರೆ, ಕರ್ನಾಟಕ ಪ್ರಗತಿಯಲ್ಲಿ ದಾಪುಗಾಲು ಹಾಕಿದ್ದು, ಗುಜರಾತ್ ಅನ್ನು ಹಲವು ಕ್ಷೇತ್ರಗಳಲ್ಲಿ ಹಿಂದಿಕ್ಕಿದೆ. ಹೂಡಿಕೆಯಲ್ಲಿ ಗುಜರಾತ್ ಹಿಂದಿಕ್ಕಿ ಕರ್ನಾಟಕ ನಂ.1 ಸ್ಥಾನ ಗಳಿಸಿದೆ. ಪ್ರಸ್ತುತ ಕರ್ನಾಟಕಕ್ಕೆ ಬರುತ್ತಿರುವ ಶೇ.50ರಷ್ಟು ಅನುದಾನ ಕೂಡ ಗುಜರಾತ್‌ಗೆ ಬರುತ್ತಿಲ್ಲ. ಮುಂದೆಯೂ ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನವ ಕರ್ನಾಟಕ ವಿಷನ್-2025 ವರದಿ ಸಂಗ್ರಹಿಸಲಾಗುತ್ತಿದೆ ಎಂದರು.

ಸಮಾಜ ಸುಧಾರಕರಾದ ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ  ಮಹಾತ್ಮಾಗಾಂಧೀಜಿ ಅವರ ತತ್ವ ಮತ್ತು ಸಮಾನತೆಯ ಸೂತ್ರದ ಮೇಲೆ ಮುಂದಿನ ಏಳು ವರ್ಷಗಳ ಕಾಲ ರಾಜ್ಯದ ಪ್ರಗತಿಯ ಹಾದಿಯನ್ನು ಮುನ್ನಡೆಸಲು ರೂಪಿಸಿರುವ ಆಡಳಿತಾತ್ಮಕ ಕ್ರಿಯಾ ಯೋಜನೆಯೇ ಈ ಮುನ್ನೋಟ ದಾಖಲೆ ಎಂದರು.

ಯಾವುದೇ ರಾಜ್ಯಕ್ಕೆ ಮುನ್ನೋಟ ಇಲ್ಲದೆ ಅಭಿವೃದ್ಧಿ ಹೊಂದಲು ಸಾಧ್ಯ ವಿಲ್ಲ. ಗುರಿ ಇಲ್ಲದವರು ರಾಜಕೀಯ ನಾಯಕರಾಗಲು ಸಾಧ್ಯ ವಿಲ್ಲ, ಸರ್ವರನ್ನು ಒಳಗೊಂಡ, ಸರ್ವರನ್ನು ಬೆಸೆಯುವ, ಸರ್ವರಿಗೂ ಸಮಬಾಳು, ಸಮಪಾಲು ಒದಗಿಸುವುದು ಚುನಾ ಯಿತ ಸರ್ಕಾರದ ಜವಾಬ್ದಾರಿ, ಈ ನಿಟ್ಟಿನಲ್ಲಿ ತಮ್ಮ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಈಗಾಗಲೇ ರಾಜ್ಯ ಸರ್ಕಾರವು ರಾಜ್ಯದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.

ದೇಶದಲ್ಲೇ ಮೊದಲ ಬಾರಿಗೆ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಆನ್‌ಲೈನ್ ಮಾಡಲಾಯಿತು. ಈ ಮೂಲಕ ನೀತಿ ಆಯೋಗವೇ ತಿಳಿಸಿರುವಂತೆ ರೈತರಿಗೆ ಶೇ.38ರಷ್ಟು ಆದಾಯ ಹೆಚ್ಚಳವಾಗಿದೆ. ಆರೋಗ್ಯ ಕಲ್ಪಿಸುವುದಕ್ಕಾಗಿ ಯೂನಿ ವರ್ಸಲ್ ಹೆಲ್ತ್ ಕಾರ್ಡ್, ಅನ್ನಭಾಗ್ಯ, ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿಸಿದರು.

‘ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಎಚ್.ಡಿ. ದೇವೇಗೌಡ, ಜೆ. ಎಚ್. ಪಟೇಲ್ ಮತ್ತು ಧರ್ಮಸಿಂಗ್ ನೇತೃತ್ವದ ಸರ್ಕಾರ ಸೇರಿದಂತೆ ಒಟ್ಟಾರೆ 13 ಬಜೆಟ್ ಮಂಡಿಸಿದ್ದೇನೆ. ಆದರೆ, ಯಾವುದೇ ಸರ್ಕಾರಗಳು ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ. ನಮ್ಮ ಪಕ್ಷ ನೀಡಿದ್ದ 165 ಭರವಸೆಗಳ ಪೈಕಿ 155 ಈಡೇರಿಸಲಾಗಿದೆ. ಪ್ರಣಾಳಿಕೆ ಯಲ್ಲಿ ನೀಡದ ಕೆಲವು ಯೋಜನೆಗಳನ್ನೂ ಜಾರಿ ಗೊಳಿಸಲಾಗಿದೆ’ ಎಂದು ಹೇಳಿದರು.

ಜೈರಾಂ ಶಹಬ್ಬಾಸ್‌ಗಿರಿ: ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಮಾತನಾಡಿ, ದಕ್ಷಿಣ ಭಾರತ ರಾಜ್ಯಗಳು ಜನಸಂಖ್ಯೆ ಹೆಚ್ಚಳದಲ್ಲಿ ಸ್ಥಿರತೆ ಕಾಯ್ದುಕೊಂಡು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದರೆ, ಉತ್ತರ ಭಾರತ ರಾಜ್ಯಗಳು ಇದಕ್ಕೆ ತದ್ವಿರುದ್ಧವಾಗಿದ್ದು, ಜನಸಂಖ್ಯೆ ಹೆಚ್ಚಳದಲ್ಲಿ ಮುಂದಿದೆ. 2025ಕ್ಕೆ ದೇಶದ ಜನಸಂಖ್ಯೆ 1.7 ಬಿಲಿಯನ್‌ಗೆ ಹೆಚ್ಚಳವಾಗಲಿದೆ. ಉತ್ತರದಿಂದ ದಕ್ಷಿಣಕ್ಕೆ ವಲಸೆ ಬರುತ್ತಿರುವವರನ್ನು ನಿಯಂತ್ರಿಸುವುದು ಸಾಮಾ ಜಿಕ ಸವಾಲಾಗಿದೆ ಎಂದರು.

ನವ ಕರ್ನಾಟಕ ವಿಷನ್-2025 ಸಿಇಒ ರೇಣುಕಾ ಚಿದಂಬರಂ ಮಾತನಾಡಿದರು. ಸಚಿವರಾದ ಕೆ.ಜೆ. ಜಾರ್ಜ್, ತನ್ವೀರ್ ಸೇಠ್, ಟಿ.ಬಿ.ಜಯಚಂದ್ರ, ಕೃಷ್ಣ ಬೈರೇಗೌಡ, ವಿನಯ್ ಕುಲಕರ್ಣಿ, ಪ್ರಿಯಾಂಕ್ ಖರ್ಗೆ, ಎಚ್. ಆಂಜನೇಯ, ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಮುಖ್ಯ ಕಾರ‌್ಯದರ್ಶಿ ಕೆ. ರತ್ನಪ್ರಭಾ ಇದ್ದರು.

click me!