
ಚಿಕ್ಕಬಳ್ಳಾಪುರ(ಸೆ.18): ಮುಖ್ಯಮಂತ್ರಿಯಾಗಿದ್ದಾಗ ದಲಿತರ ನೆನಪಾಗಲಿಲ್ಲ ಈಗ ಇದ್ದಕ್ಕಿದ್ದಂತೆ ಚುನಾವಣೆ ಹತ್ತಿರ ಬಂದ ನಂತರ ದಲಿತರ ನೆನಪಾಗಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಧಿಕಾರವಿದ್ದಾಗ ಯಾರ ಮನೆಗೂ ಹೋಗಲಿಲ್ಲ. ಯಾರ ಮನೆಗೂ ಹೋಗಿ ತಿಂಡಿ ತಿನ್ನಲಿಲ್ಲ. ಈಗ ದಲಿತರ ಮನೆ ಎಂದು ಜಪ ಮಾಡುತ್ತಿದ್ದಾರೆ. ದಲಿತರ ಮನೆಗೆ ಹೋದಾಗ ಅಲ್ಲಿಯೇ ಉಪಹಾರ ಸೇವಿಸುತ್ತಾರೆ ಎಂದರೆ ಅದೂ ಇಲ್ಲ. ಹೋಟಲ್'ನಿಂದ ತಿಂಡಿ ತರಿಸಿ ತಿಂದು ಕೈತೊಳೆದು ಬರುತ್ತಾರೆ. ನಿಮಗೇನಾದರೂ ದಲಿತರ ಬಗ್ಗೆ ಕಾಳಜಿಯಿದ್ದರೆ ನಿಮ್ಮ ಹೆಣ್ಣು ಮಕ್ಕಳನ್ನು ದಲಿತರಿಗೆ ಕೊಡಿ, ದಲಿತರ ಹೆಣ್ಣು ಮಕ್ಕಳನ್ನು ನಿಮ್ಮ ಮನೆಗೆ ತಂದು ವಿವಾಹ ಮಾಡಿಕೊಳ್ಳಿ' ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.
ನಾನು ಮಾತ್ರವಲ್ಲ ಹಿಂದುಳಿದವರೆಲ್ಲ ದಲಿತರೆ
'ನಾನು ಕೂಡ ದಲಿತನೆ. ಹಿಂದುಳಿದವರೆಲ್ಲ ದಲಿತರೆ. ಶೋಷಿತರೆಲ್ಲ ದಲಿತರೆ. ಪರಿಶಿಷ್ಟರ ಅಭಿವೃದ್ಧಿ'ಗೆ ಪ್ರತ್ಯೇಕ ಕಾನೂನನ್ನು ಮಾಡಿ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯವನ್ನು ಒದಗಿಸುತ್ತಿರುವುದು ನಮ್ಮ ಸರ್ಕಾರ. ಹಿಂದೆ ಯಾವ ಸರ್ಕಾರ ಕೂಡ ರೀತಿ ಮಾಡಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್'ಸಿ ಎಸ್'ಟಿ ಅಭಿವೃದ್ಧಿಗಾಗಿ ನೀಡಲಾದ ಅನುದಾನ 21 ಸಾವಿರ ಕೋಟಿ. ನಮ್ಮ ಸರ್ಕಾರದ 5 ವರ್ಷದ ಅವಧಿಯಲ್ಲಿ ಖರ್ಚು ಮಾಡಲಾದ ಹಣ 86 ಸಾವಿರ ಕೋಟಿ ರೂ. ಅಲ್ಲಿಗಿಂತ 4 ಪಟ್ಟು ಹೆಚ್ಚು.
ಗುತ್ತಿಗೆದಾರರಿಗೆ ಮೀಸಲಾತಿ
ಇಡೀ ದೇಶದಲ್ಲಿ ಗುತ್ತಿಗೆದಾರರಿಗೆ ಪ.ಜಾ.ಪ.ಪಂ ವರ್ಗದವರಿಗೆ ಮೀಸಲು ನೀಡಿರುವುದು ನಮ್ಮ ಸರ್ಕಾರ. ಇದಕ್ಕಾಗಿ ಕಾನೂನನ್ನು ಸಹ ಮಾಡಲಾಗಿದೆ. ಬೇರೆ ಯಾವುದೇ ದೇಶದಲ್ಲಿ ಈ ವ್ಯವಸ್ಥೆಯಿಲ್ಲ. ದಲಿತರ ಅಭಿವೃದ್ಧಿಯನ್ನು ಮಾಡದೆ 150 ಮಿಷನ್ ಎನ್ನುತ್ತ ಓಡಾಡುತ್ತಿದ್ದಾರೆ'ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಜೈಲಿಗೆ ಹೋದವರು ನಮ್ಮ ಮೇಲೆ ಚಾರ್ಜ್'ಶೀಟ್ ಹಾಕುತ್ತಾರೆ
ಜೈಲಿಗೆ ಹೋಗಿದ್ದ ಯಡಿಯೂರಪ್ಪ ಮಾತೆತ್ತಿದರೆ ನಮ್ಮ ವಿರುದ್ಧ ಚಾರ್ಜ್'ಶೀಟ್ ಹಾಕುತ್ತೇನೆ ಎನ್ನುತ್ತಾರೆ. ದೇಶದಲ್ಲಿಯೇ ಹಗರಣ ಮುಕ್ತ ಸರ್ಕಾರವಿದ್ದರೆ ಅದು ನಮ್ಮ ಸರ್ಕಾರ. ಜೈಲಿಗೆ ಹೋಗಿ ಬಂದವರ ಬಳಿಯಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ರೈತರ ಸಾಲ ಮನ್ನ ಮಾಡಿ ಎಂದು ದಿಲ್ಲಿ ಚಲೋ ಮಾಡಿ ಎಂದರೆ ಚಾರ್ಜ್'ಶೀಟ್ ಹಾಕುತ್ತೇನೆ ಎಂದು ಅಬ್ಬರಿಸುತ್ತಿದ್ದಾರೆ' ಎಂದು' ಬಿಎಸ್'ವೈ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.