
ಮೈಸೂರು(ಜು.15): ಬಂಟ್ವಾಳ ಗಲಭೆ ವಿಚಾರವಾಗಿ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದ್ದಾರೆ.
ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಅವರನ್ನು ಬಂಧಿಸಿದರೆ ಕರ್ನಾಟಕದಲ್ಲಿ ಬೆಂಕಿ ಹತ್ತಿಕೊಳ್ಳಲಿದೆ ಎಂಬ ಮುಖ್ಯಮಂತ್ರಿ ಬಿಜೆಪಿ ನಾಯಕರ ಹೇಳಿಕೆಯನ್ನು ಖಂಡಿಸಿರುವ ಸಿಎಂ, ‘‘ಬಿಜೆಪಿಯವರಿಗೆ ಬೆಂಕಿ ಹಚ್ಚುವುದೇ ಕೆಲಸ. ಅವರು ಹಚ್ಚಿದ ಬೆಂಕಿಯನ್ನು ಆರಿಸುವುದು ನಮ್ಮ ಕೆಲಸವಾಗಿದೆ’’ ಎಂದಿದ್ದಾರೆ.
ಜತೆಗೆ, ಎಷ್ಟೇ ಪ್ರಯತ್ನ ಪಟ್ಟರೂ ಕರ್ನಾಟಕದಲ್ಲಿ ಅವರಿಗೆ ಬೆಂಕಿ ಹಚ್ಚಲು ಸಾಧ್ಯವಿಲ್ಲ, ಹಾಗೊಂದು ವೇಳೆ ಹಚ್ಚಿದರೂ ನಾವು ಸುಮ್ಮನೆ ಬಿಡಲ್ಲ ಎಂದೂ ಎಚ್ಚರಿಕೆ ನೀಡಿದ್ದಾರೆ. ಬಂಟ್ವಾಳದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಕಿ ಹತ್ತಿಕೊಳ್ಳಲಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳುತ್ತಾರೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇಡೀ ಕರ್ನಾಟಕದಲ್ಲಿ ಬೆಂಕಿ ಹತ್ತಿಕೊಳ್ಳಲಿದೆ ಎನ್ನುತ್ತಾರೆ.
ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಶವಪೆಟ್ಟಿಗೆಗೆ ಮೊಳೆ ಹೊಡೆಯುತ್ತೇವೆ ಎನ್ನುತ್ತಿದ್ದಾರೆ. ಇದು ಬಿಜೆಪಿಯವರ ಸಂಸ್ಕಾರವನ್ನು ತೋರಿಸುತ್ತದೆ’ ಎಂದು ಕಿಡಿಕಾರಿದರು. ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು: ಬಿಜೆಪಿಯವರು ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು. ಇದೇ ಇವರ ರಾಜಕೀಯದ ಹಿಡನ್ ಅಜೆಂಡಾ. ಇವರು ಎಷ್ಟೇ, ಏನೇ ಪ್ರಯತ್ನ ಮಾಡಿದರೂ ಕರ್ನಾಟಕದಲ್ಲಿ ಬೆಂಕಿಹಚ್ಚಲು ಸಾಧ್ಯವಿಲ್ಲ. ಒಂದು ವೇಳೆ ಬೆಂಕಿ ಹಚ್ಚಿದರೂ ಅವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಪ್ರಭಾಕರ್ ಭಟ್‌ರನ್ನು ಬಂಧಿಸಲು ನಾನು ಎಲ್ಲೂ ಹೇಳಿಲ್ಲ. ಇವರೇ ಯಾಕೆ ಪದೇ ಪದೇ ಆ ಮಾತು ಹೇಳುತ್ತಿದ್ದಾರೆ? ಇದು ಅವರ ಅಪರಾಧ ಮನೋಭಾವ ತೋರಿಸುತ್ತದೆ.
ಪ್ರಭಾಕರ್ ಭಟ್ ಆಗಲಿ ಇನ್ಯಾರೋ ಆಗಲಿ ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಪೊಲೀಸರಿಗೆ ಸೂಚಿಸಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಸಿಎಂ ಪ್ರಶ್ನಿಸಿದರು. ಬೆಂಕಿ ಆರುವುದು ಬೇಕಿಲ್ಲ: ಬಂಟ್ವಾಳ ಗಲಭೆಗೆ ಸಂಬಂಧಿಸಿ ಮಂಗಳೂರಿನಲ್ಲಿ ರಮಾನಾಥ್ ರೈ ಅವರ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯನ್ನು ಬಿಜೆಪಿಯವರು ಬಹಿಷ್ಕರಿಸಿದ್ದಕ್ಕೂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘ಅವರು ಶಾಂತಿ ಸಭೆಗೆ ಯಾಕೆ ಹೋಗಿಲ್ಲ? ಯಾಕೆಂದರೆ ಯಾವುದೇ ಸಮಸ್ಯೆ ಪರಿಹಾರ ಆಗುವುದು ಅವರಿಗೆ ಬೇಕಿಲ್ಲ. ಸಮಸ್ಯೆ ಜೀವಂತವಾಗಿದ್ದರಷ್ಟೇ ಅವರ ಬೇಳೆ ಬೇಯಿಸಿಕೊಳ್ಳಲು ಸಾಧ್ಯ. ಅವರು ಭಾವನಾತ್ಮಕ, ಮತೀಯ ವಿಚಾರಗಳನ್ನು ಕೆರಳಿಸಿಬಿಟ್ಟು, ಬೆಂಕಿ ಹಚ್ಚಿನೋಡುತ್ತಾ ಕೂರುತ್ತಾರೆ. ರಾಮ ಮಂದಿರ ಕಟ್ಟುವುದಾಗಿ ಹೇಳುತ್ತಿದ್ದಾರೆ. ಇಷ್ಟು ವರ್ಷವಾದರೂ ರಾಮಮಂದಿರ ಕಟ್ಟಿದ್ದಾರಾ ಎಂದು ಪ್ರಶ್ನಿಸಿದ ಸಿಎಂ,ಮಂದಿರ ಕಟ್ಟುವುದು ಅವರ ಉದ್ದೇಶವಲ್ಲ ಎಂದರು.
ಜತೆಗೆ, ಬಿಜೆಪಿಯವರು ಯಾವಾಗಲೂ ಕತ್ತರಿ ಇರಿಸಿಕೊಂಡಿರುತ್ತಾರೆ, ಅವರು ಕತ್ತರಿಯಿಂದ ಕತ್ತರಿಸಿದ್ದನ್ನು ಹೊಲಿಯುವುದು ನಮಗೆ ಗೊತ್ತು. ಅದೇ ನಮ್ಮ ಕೆಲಸ. ಅದಕ್ಕಾಗಿಯೇ ನಾವು ಸೂಜಿ ಇಟ್ಟುಕೊಂಡಿರುತ್ತೇವೆ ಎಂದು ಸಿಎಂ ವ್ಯಂಗ್ಯವಾಡಿದರು
ಕೆಂಪಯ್ಯ ನೇಮಿಸಿಲ್ಲ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ. ಮಂಗಳೂರಿನಲ್ಲಿ ಬೆಂಕಿ ಹಚ್ಚಿದ್ದೇ ಬಿಜೆಪಿಯವರು.ನಿರ್ಮಲಾ ಸೀತಾರಾಮನ್ ಅವರು ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶದ ಕುರಿತು ಮಾತನಾಡಲಿ ಎಂದು ಸಿಎಂ ತಿರುಗೇಟು ನೀಡಿದರು.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.