2000 ಕೋಟಿ ರು. ಕೇಳಿ ಮೋದಿಗೆ ಸಿಎಂ ಪತ್ರ

By Web DeskFirst Published Aug 25, 2018, 12:19 PM IST
Highlights

ಕೇಂದ್ರ ಸರ್ಕಾರವು ಮಧ್ಯಂತರ ಪರಿಹಾರ ಮೊತ್ತವಾಗಿ ಎರಡು ಸಾವಿರ ಕೋಟಿ ರು. ತಕ್ಷಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು :  ಜಲಪ್ರಳಯದಿಂದ ಕಂಗೆಟ್ಟಿರುವ ಕೊಡಗು ಜಿಲ್ಲೆಯನ್ನು ಪುನರ್‌ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಕೇಂದ್ರ ಸರ್ಕಾರವು ಮಧ್ಯಂತರ ಪರಿಹಾರ ಮೊತ್ತವಾಗಿ ಎರಡು ಸಾವಿರ ಕೋಟಿ ರು. ತಕ್ಷಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ನರೇಂದ್ರ ಮೋದಿ ಅವರಿಗೆ ಶುಕ್ರವಾರ ಪತ್ರ ಬರೆದಿರುವ ಕುಮಾರಸ್ವಾಮಿ, ವಿಪರೀತ ಮಳೆಯಿಂದಾಗಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಾಕಷ್ಟುಹಾನಿಯಾಗಿದೆ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಯಥೇಚ್ಛವಾಗಿ ಹಾನಿಯಾಗಿದ್ದು, ಜನರು ಆಸ್ತಿ-ಪಾಸ್ತಿ ಕಳೆದುಕೊಂಡು ತೀರ ಸಂಕಷ್ಟಪಡುವಂತಾಗಿದೆ. ಕೊಡಗು ಜಿಲ್ಲೆಯ ಮರುನಿರ್ಮಾಣ ಕಾರ್ಯದಲ್ಲಿ ರಾಜ್ಯ ಸರ್ಕಾರವು ತೊಡಗಿದ್ದು, ಕೇಂದ್ರದ ನೆರವಿನ ಅಗತ್ಯ ಇದೆ. ಹೀಗಾಗಿ ಕೇಂದ್ರವು ಎರಡು ಸಾವಿರ ಕೋಟಿ ರು.ಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.

ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ನಷ್ಟದ ಬಗ್ಗೆ ಪ್ರಾಥಮಿಕ ಹಂತದ ಅಂದಾಜು ಮಾಡಲಾಗಿದ್ದು, ಸುಮಾರು ಮೂರು ಸಾವಿರ ಕೋಟಿ ರು. ಎಂದು ಅಂದಾಜು ಮಾಡಲಾಗಿದೆ. ರಸ್ತೆ, ಮೂಲಸೌಕರ್ಯ, ಬೆಳೆ, ಸಾರ್ವಜನಿಕ ಆಸ್ತಿ ಸೇರಿದಂತೆ ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಅಂದಾಜು ನಷ್ಟದ ಮೊತ್ತವು ಇನ್ನಷ್ಟುಹೆಚ್ಚಳವಾಗುವ ಸಾಧ್ಯತೆ ಇದೆ. ತುರ್ತು ಕಾರ್ಯಗಳನ್ನು ಕೈಗೊಳ್ಳಬೇಕಿರುವ ಕಾರಣ ವಿವಿಧ ಮೂಲಗಳಿಂದ ಹಣದ ಕ್ರೋಢೀಕರಣಕ್ಕೆ ಸರ್ಕಾರವು ಒತ್ತು ನೀಡಿದೆ. ಕೊಡಗು ಜಿಲ್ಲೆಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಕಾರ್ಯೋನ್ಮುಖವಾಗಿದ್ದು, ಕೇಂದ್ರದ ನೆರವನ್ನು ಸಹ ನಿರೀಕ್ಷಿಸಿದೆ ಎಂದು ತಿಳಿಸಿದ್ದಾರೆ.

ಆ.14ರಿಂದ ಆ.22ರವರೆಗೆ ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ವಿಪರೀತ ಮಳೆಯಿಂದಾಗಿ ಮಣ್ಣು ಕುಸಿತ, ಗುಡ್ಡ ಕುಸಿತ ಸಂಭವಿಸಿದೆ. ಪರಿಣಾಮ ಇಡೀ ಭೌಗೋಳಿಕ ಚಿತ್ರಣವೇ ಬದಲಾಗಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಜನ ಜೀವನವನ್ನೇ ಕೊಚ್ಚಿಕೊಂಡು ಹೋಗಿದೆ. ರಸ್ತೆ ಸಂಪರ್ಕವು ಸಂಪೂರ್ಣವಾಗಿ ಕಡಿತಗೊಂಡಿದೆ. ಜನರ ರಕ್ಷಣೆ ಕಾರ್ಯಕ್ಕಾಗಿ ರಾಜ್ಯ ಸರ್ಕಾರವು ಸಕಲ ಕಾರ್ಯಗಳನ್ನು ಕೈಗೊಂಡಿದೆ. ಪ್ರವಾಹ, ಮಣ್ಣು ಕುಸಿತ ಘಟನೆಗಳಿಂದ ಕೊಡಗು ಜಿಲ್ಲೆಯಲ್ಲಿ 17 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅಲ್ಲದೇ, 2,200ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ವಿವರಿಸಿದ್ದಾರೆ.

ಅಧಿಕ ಮಳೆಯಿಂದಾಗಿ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳು, ಮೂಲಸೌಕರ್ಯ ಸಂಪೂರ್ಣವಾಗಿ ನಾಶವಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರವು ಪರಿಣಾಮಕಾರಿ ಕ್ರಮ ಕೈಗೊಂಡಿದೆ. 53ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳನ್ನು ತೆಗೆದು 7,500ಕ್ಕಿಂತ ಹೆಚ್ಚು ಮಂದಿಗೆ ಆಶ್ರಯ ನೀಡಲಾಗಿದೆ. 50 ಸಾವಿರಕ್ಕೂ ಹೆಚ್ಚು ಅಕ್ಕಿ, ಎಣ್ಣೆ, ಉಪ್ಪು, ಸಕ್ಕರೆ ಸೇರಿದಂತೆ ಆಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ಪೂರೈಕೆ ಮಾಡಲಾಗಿದೆ. 4500ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮನೆಗಳನ್ನು ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಸುಸಜ್ಜಿತವಾದ ಶೆಡ್‌ಗಳನ್ನು ನಿರ್ಮಿಸಿಕೊಡಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ. ಸುಮಾರು 10 ಸಾವಿರ ಮಂದಿಗೆ ಶೆಡ್‌ಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಶಾಶ್ವತವಾಗಿ ಆಶ್ರಯ ಲಭ್ಯವಾಗುವವರೆಗೆ ತಾತ್ಕಾಲಿಕ ಶೆಡ್‌ನಲ್ಲಿ ನಿರಾಶ್ರಿತರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.

click me!