ಅಧಿಕಾರಿಗಳಿಗೆ ಸಿಎಂ ’ಚುಚ್ಚು’ಮದ್ದು!

By Web DeskFirst Published Jul 31, 2018, 7:54 AM IST
Highlights

-ಸಾಲ ಮನ್ನಾ, ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿ, ಜನರ ಕಷ್ಟಕ್ಕೆ ಸ್ಪಂದಿಸಿ 

-ನಾನು ಬರೀ 4-5  ಜಿಲ್ಲೆಗಳ ಸಿಎಂ ಅಲ್ಲ, ಆರೋಪ ನಂಬಬೇಡಿ: ಅಧಿಕಾರಿಗಳಿಗೆ ಕಿವಿಮಾತು

ಬೆಂಗಳೂರು (ಜು. 31): ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯನ್ನು  ಮಧ್ಯವರ್ತಿಗಳು ದುರುಪಯೋಗ ಮಾಡಿಕೊಳ್ಳದಂತೆ  ಪಾರದರ್ಶಕವಾಗಿ ಜಾರಿಗೊಳಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ  ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಆರಂಭದಲ್ಲಿ  ಮಾತನಾಡಿದ ಅವರು, ಸುಮಾರು 49 ಸಾವಿರ ಕೋಟಿ ರು.ನಷ್ಟು ಕೃಷಿ ಸಾಲ ಮನ್ನಾ ಮಾಡಲಾಗಿದೆ. ಈ ಬಗ್ಗೆ  ನಾಲ್ಕೈದು ದಿನದಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗುವುದು. ಬಳಿಕ ಈ ಯೋಜನೆಯನ್ನು ಮಧ್ಯವರ್ತಿಗಳು ದುರುಪಯೋಗ ಮಾಡಿಕೊಳ್ಳದಂತೆ
ಎಚ್ಚರ ವಹಿಸಬೇಕು. ಪಾರದರ್ಶಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ತಾಕೀತು ಮಾಡಿದರು.

ಸಾಲಮನ್ನಾ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಜನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಆದ್ಯತೆ ನೀಡಬೇಕು. ಪ್ರತಿ ತಿಂಗಳು ತಾಲೂಕುಗಳಿಗೆ ಭೇಟಿ ನೀಡಿ  ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಜಿಲ್ಲೆಯಲ್ಲಿ ಲೋಪದೋಷಗಳನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಓಗಳು ಸರಿಪಡಿಸಬೇಕು. ಒಂದು ಸಾವಿರ ಕೋಟಿ ರು. ತೆರಿಗೆ ಕಡಿಮೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಸತ್ಯಕ್ಕೆ ದೂರವಾಗಿದೆ.

ಹಣ ಖರ್ಚು ಮಾಡಲು ಯಾವುದೇ ಕೊರತೆ ಇಲ್ಲ. ಕೊರತೆ ಇರುವ ಜಿಲ್ಲೆಗಳಿಗೆ ಮತ್ತೆ ಹಣ ಬಿಡುಗಡೆ ಮಾಡಲಾಗಿದೆ. ಸುಮಾರು 43 ಕೋಟಿ ರು.ನಷ್ಟು ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗಿದೆ.
ನೀರಾವರಿ ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಿವೆ ಎಂದು ವಿವರಿಸಿದರು. ಹಳೇ ಮೈಸೂರು ಪ್ರಾಂತ್ಯದ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿರುವ ಮುಖ್ಯಮಂತ್ರಿ ಎಂಬುದಾಗಿ ಕೆಲವರು ನನ್ನನ್ನು ಟೀಕಿಸಿದ್ದಾರೆ. ನಾನು ನಾಲ್ಕು ಜಿಲ್ಲೆಯ ಮುಖ್ಯಮಂತ್ರಿಯಲ್ಲ. ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದರ ಬಗ್ಗೆ ನೋವಿದೆ.  

click me!