ಯಶಸ್ವಿನಿ ಮುಂದುವರಿಯುತ್ತಾ? ಇಂದು ನಿರ್ಧಾರ

First Published May 30, 2018, 7:31 AM IST
Highlights

ಸಾಕಷ್ಟು ವಿರೋಧದ ನಡುವೆಯೂ ಕಾಂಗ್ರೆಸ್‌ ಸರ್ಕಾರವು ಅಂತಿಮ ಹಂತದಲ್ಲಿ ಜಾರಿಗೊಳಿಸಿದ ಯೂನಿವರ್ಸಲ್‌ ಹೆಲ್ತ್‌ ಸ್ಕೀಮ್‌ ಮತ್ತು ಯಶಸ್ವಿನಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬುಧವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
 

ಬೆಂಗಳೂರು :  ಸಾಕಷ್ಟು ವಿರೋಧದ ನಡುವೆಯೂ ಕಾಂಗ್ರೆಸ್‌ ಸರ್ಕಾರವು ಅಂತಿಮ ಹಂತದಲ್ಲಿ ಜಾರಿಗೊಳಿಸಿದ ಯೂನಿವರ್ಸಲ್‌ ಹೆಲ್ತ್‌ ಸ್ಕೀಮ್‌ ಮತ್ತು ಯಶಸ್ವಿನಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬುಧವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿಗಳು ಯೋಜನೆಯ ಕುರಿತು ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಜಯ್‌ ಸೇಠ್‌, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಯೂನಿವರ್ಸಲ್‌ ಹೆಲ್ತ್‌ ಸ್ಕೀಮ್‌ ಮತ್ತು ಯಶಸ್ವಿನಿ ಯೋಜನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಬುಧವಾರ ಬೆಳಗ್ಗೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಯಶಸ್ವಿನಿ ಆರೋಗ್ಯ ಯೋಜನೆಯ ಅವಧಿ ಮುಕ್ತಾಯ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಮುಂದುವರಿಸಬೇಕೇ? ಅಥವಾ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕೇ ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಯೂನಿವರ್ಸಲ್‌ ಹೆಲ್ತ್‌ ಸ್ಕೀಮ್‌ ಜಾರಿಯಾಗಿರುವ ಕಾರಣ ಈ ಯೋಜನೆಯಲ್ಲಿಯೇ ಯಶಸ್ವಿನಿ ಯೋಜನೆ ಸೇರಿಸುವ ಬಗ್ಗೆ ಮಾತುಕತೆ ನಡೆದಿದೆ. ಯೂನಿವರ್ಸಲ್‌ ಹೆಲ್ತ್‌ ಸ್ಕೀಮ್‌ನಲ್ಲಿನ ಎದುರಾಗುವ ಕೆಲವು ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆಗಳ ನಡೆದಿವೆ. ಅಲ್ಲದೇ, ಯಶಸ್ವಿನಿ ಯೋಜನೆಯನ್ನು ಮುಂದುವರಿಸುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ತಿಳಿದು ಬಂದಿದೆ.

ಯೋಜನೆಯ ಸಾಧಕ-ಬಾಧಕ ಕುರಿತ ಸಮಗ್ರ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬುಧವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

click me!