
ಮೈಸೂರು: ‘ಮನ್ ಕಿ ಬಾತ್ ಅಂದ್ರೆ ಹುಡುಗ ಹುಡುಗಿ ಮಾತನಾಡೋದು, ದೇಶ ಮುನ್ನಡೆಸೋರಿಗೆ ಮನ್ ಕಿ ಬಾತ್ ಯಾರಿಗೆ ಬೇಕು,’ ಎಂದು ಕಾಂಗ್ರೆಸ್ ಮುಖಂಡ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ರೈತರ ಪಕ್ಷ ಅನ್ನೋ ಜೆಡಿಎಸ್ ಯಾಕೆ ಹಾಲಿಗೆ ಬೆಂಬಲ ಬೆಲೆ ಕೊಡಲಿಲ್ಲಾ , ಯಡಿಯೂರಪ್ಪ ಯಾರಿಗೆ ಹಾಲು ಕುಡಿಸ್ತಾರೆ ಅಂತಾ ನಿಮಗೆ ಗೊತ್ತಾ ಎಂದು ಹಾಸ್ಯ ಚಟಾಕಿ ಹಾರಿಸಿದ ಸಿ ಎಂ ಇಬ್ರಾಹಿಂ, ಯಡಿಯೂರಪ್ಪ ಮೋದಿ, ಶಾ ಅವರನ್ನು ರಾಜ್ಯದಲ್ಲಿ ಗಿರಿಕಿ ಹೊಡೆಸ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಿದ್ದರಾಮಯ್ಯ ಚಾಮುಂಡೇಶ್ವರಿ ಮರುಚುನಾವಣೆಯಲ್ಲಿ ಗೆದ್ದಾಗಲೇ ಅವರು ಸಿಎಂ ಆಗ್ತಾರೆ ಎಂದು ನಿರ್ಧಾರವಾಗಿತ್ತು. ಹೀಗಾಗಿ ಬಾ ಮಗನೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡು ಎಂದು ಕರೆಯುತ್ತಿದ್ದಾಳೆ, ಎಂದಿದ್ದಾರೆ.
ಸಿದ್ದರಾಮಯ್ಯ ಬಸವ ತತ್ವದ ನಿಜವಾದ ಪ್ರತಿಪಾದಕ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲಾ ವರ್ಗದ ಜನರಿಗೂ ಸಮಾನ ಅವಕಾಶ ಸಾಧ್ಯ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಮೋದಿ ಎಲ್ಲವನ್ನು ಬಿಟ್ಟು ಬಂದೆ ಅಂತಾರೆ, ಅವರ ಬಳಿ ಬಿಟ್ಟು ಬರಲು ಏನಿತ್ತು? ಎಲ್ಲವನ್ನ ಯಶೋದ ಬಾಯ್ ಬಳಿ ಬಿಟ್ಟು ಬಂದಿರಬೇಕು, ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅಂದ್ರೆ ಮೋದಿಯವರಿಗೆ ನಡುರಾತ್ರಿಯಲ್ಲಿ ನಡುಕ ಶುರುವಾಗ್ತದೆ ಎಂದಿದ್ದಾರೆ.
ನಾನು ಎಲ್ಲಾ ರಾಜಕೀಯ ಮುಖಂಡರ ಮನೆಗೆ ಹಬ್ಬದ ಶುಭಾಶಯಗಳನ್ನು ಹೇಳಲು ಹೋಗಿದ್ದೆ ಎಂದ ಇಬ್ರಾಹಿಂ, ಪಕ್ಷಾಂತರ ಬಗ್ಗೆ ಹಾಪೋಹಗಳನ್ನು ನಿರಾಕರಿಸಿದ್ದಾರೆ. ‘ ನನ್ನ ಹಾಗೂ ಸಿದ್ದರಾಮಯ್ಯ ನಡುವಿನ ಸಂಭಂದ ಗೋಕರ್ಣದಲ್ಲಿರೋ ಶಿವಲಿಂಗದಂತೆ’ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.