ನೀವೇ ನಮ್ ಜೊತೆ ಬಂದ್ರೆ ಹೆಂಗಣ್ಣ?:ಹೆಚ್‌ಡಿಕೆ ಗೆ ಆಫರ್ ಕೊಟ್ಟ ರಮೇಶಣ್ಣ!

By Web DeskFirst Published Mar 7, 2019, 11:15 AM IST
Highlights

ಆತುರದ ನಿರ್ಧಾರ ಬೇಡ ರಮೇಶಣ್ಣ ಅಂದ್ರು ಸಿಎಂ| ನೀವೇ ನಮ್ ಜೊತೆ ಬಂದ್ಬಿಡಿ ಅಂದ್ರು ರಮೇಶ್ ಜಾರಕಿಹೊಳಿ| ಸಂಧಾನ ಮಾತುಕತೆ ವೇಳೆ ಸಿಎಂ ಕುಮಾರಸ್ವಾಮಿಗೆ ಆಫರ್ ಕೊಟ್ಟ ರಮೇಶ್| ಲೋಕಸಭೆ ಚುನಾವಣೆಗೆ ಕಾಯುತ್ತಿದ್ದಾರೆ ಅತೃಪ್ತ ಶಾಸಕರು| ಬಳ್ಳಾರಿ ಗ್ರಾಮೀಣ ಶಾಸಕ ನಾಗೆಂದ್ರ ಕಫ ಶಮನಕ್ಕೆ ಸಿಎಂ ಯತ್ನ|

ಬೆಂಗಳೂರು(ಮಾ.07): ಮುನಿಸಿಕೊಂಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರೊಂದಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಂಧಾನ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಸಿಎಂ ರಮೇಶ್ ಜಾರಕಿಹೊಳಿಗೆ ಸಲಹೆ ನೀಡಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ನೀವೇ ನಮ್ಮ ಜೊತೆ ಬಂದು ಬಿಡಿ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅವರನ್ನು ದಂಗು ಬಡಿಸಿದ್ದಾರೆ.

ರಮೇಶ್ ಬಿಜೆಪಿ ಸೇರಲಿದ್ದಾರೆ ಎಂಬ ವದಮತಿ ಮಧ್ಯೆಯೇ ಸಂಧಾನ ಮಾತುಕತೆ ನಡೆಸಿದ ಸಿಎಂ, ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ ಎಂದು ಮನವಿ ಮಾಡಿದರು. ಅಲ್ಲದೇ ಸಚಿವ ಡಿಕೆ ಶಿವಕುಮಾರ್ ಬೆಳಗಾವಿ ರಾಜಕಾರಣದಲ್ಲಿ ತಲೆ ಹಾಕದಂತೆ ನೋಡಿಕೊಳ್ಳುವ ಭರವಸೆಯನ್ನೂ ಕುಮಾರಸ್ವಾಮಿ ನೀಡಿದ್ದಾರೆ.

'ನಾನು ಈಗಾಗಲೇ ಕೆಸಿ ವೇಣುಗೋಪಾಲ್ ಅವರೊಂದಿಗೆ ಮಾತನಾಡಿದ್ದು, ಅವರೇ ನಿಮ್ಮೊಂದಿಗೆ ಮಾತುಕತೆ ನಡೆಸುವಂತೆ ನನ್ನನ್ನು ಕಳುಹಿಸಿದ್ದಾರೆ' ಎಂದು ಸಿಎಂ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಮೇಶ್, 'ನನಗೆ ನಿಮ್ಮ ಮೇಲೆ ಏನೂ ಸಿಟ್ಟಿಲ್ಲ, ಆದರೆ ಏನೇ ನಿರ್ಧಾರ ಆಗಬೇಕಾದರೂ ಅದು ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಮಾತ್ರ. ಹೀಗಾಗಿ ಲೋಕಸಭೆ ಚುನಾವಣೆವರೆಗೂ ತಾವು ತಟಸ್ಥರಾಗಿ ಉಳಿಯಲಿದ್ದು, ಫಲಿತಾಂಶದ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ ಕುರಿತು ಚಿಂತಿಸುವುದಾಗಿ ಹೇಳಿದರು.

ಇನ್ನು ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರೊಂದಿಗೂ ಮಾತನಾಡಿದ ಸಿಎಂ, ಬಳ್ಳಾರಿ ಉಪಚುನಾವಣೆಯಲ್ಲಿ ನಡೆದ ಬೆಳವಣಿಗೆಗಳು ಮತ್ತು ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆಸಿದರು.

ಸದ್ಯ ಕಾಂಗ್ರೆಸ್ ಶಾಸಕರ ಕೋಪ ಶಮನಗೊಳಿಸುವಲ್ಲೇ ಬ್ಯುಸಿಯಾಗಿರುವ ಸಿಎಂ, ಆತುರದ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ ತಮ್ಮ ನಿರ್ಧಾರ ಏನು ಎಂಬುದರ ಕುರಿತು ಗುಟ್ಟು ಬಿಟ್ಟು ಕೊಡದ ಅತೃಪ್ತ ನಾಯಕರು, ಲೋಕಸಭೆ ಚುನಾವಣೆಯ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ.

click me!