ಸರ್ಕಾರದ ಅಸ್ತಿತ್ವದ ಬಗ್ಗೆ ಸಿಎಂ ಹೇಳಿದ್ದೇನು..?

By Web DeskFirst Published Oct 15, 2018, 8:58 AM IST
Highlights

ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಧಿಕಾರಿಗಳು ತಮ್ಮ ವೇಗಕ್ಕೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರು : ರಾಜ್ಯದಲ್ಲಿ ಅಧಿಕಾರಿಗಳು ನನ್ನ ವೇಗಕ್ಕೆ ಕೆಲಸ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಾರ್ಯಾಂಗದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲಸ ಮಾಡುವ ಅಧಿಕಾರಿಗಳಿಗೆ ನಾವು ಮುಕ್ತ ಅವಕಾಶ  ನೀಡುತ್ತೇವೆ. ಹೀಗಾಗಿ ಅಧಿಕಾರಿಗಳು ಸರ್ಕಾರದ ಅಸ್ತಿತ್ವದ ವಿಚಾರದಲ್ಲಿ ಧೃತಿಗೆಡದೆ ಕಾರ್ಯನಿರ್ವಹಿಸಬೇಕು ಎಂದಿದ್ದಾರೆ. 

ರಾಜ್ಯ ಸರ್ಕಾರ ಟೇಕಾಫ್ ಆಗುತ್ತಿಲ್ಲ, ಅಧಿಕಾರಿಗಳೇ ಕಾರುಬಾರು ನಡೆಸುತ್ತಾರೆ ಎಂಬ ವಿಪಕ್ಷ ಬಿಜೆಪಿ ಪದೇ ಪದೇ ಆರೋಪ ಮಾಡುತ್ತಿರುವ ನಡುವೆಯೇ ಮುಖ್ಯಮಂತ್ರಿಗಳು ಈ ಮಾತನ್ನು ಹೇಳಿದ್ದಾರೆ. ನಗರದಲ್ಲಿ ಭಾನುವಾರ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡ ‘ಬ್ರ್ಯಾಂಡ್ ಮಂಗಳೂರು’ ಹಾಗೂ ಪತ್ರಕರ್ತರ ಗ್ರಾಮ ವಾಸ್ತವ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಪಕ್ಷ ಬಿಜೆಪಿ ಹೆಸರೆತ್ತದೆ ಟಾಂಗ್ ನೀಡಿದ ಅವರು, ಕೆಲವು ಕಿಡಿಗೇಡಿಗಳು ಸರ್ಕಾರದ ಅಸ್ತಿತ್ವದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. 

ಆದರೆ ರಾಜ್ಯ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಸರ್ಕಾರದ ಅಸ್ತಿತ್ವದ ವಿಚಾರದಲ್ಲಿ ಧೃತಿಗೆಡದೆ  ಕಾರ್ಯನಿರ್ವಹಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ಶಾಸಕರೊಬ್ಬರು ಮಂಗಳೂರಿನ ಉಳ್ಳಾಲದಲ್ಲಿ ಅಕ್ರಮ ಮರಳುಗಾರಿಕೆ ನಡೆಸಿರುವ ಆರೋಪದ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ಪರಿಸರಕ್ಕೆ ಯಾರು ಹಾನಿ ಮಾಡಿದರೂ ತಪ್ಪು. ಈ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.  

click me!