ಮಂಡ್ಯ ಬಜೆಟ್ ಎಂದವ್ರಿಗೆ ಮತ ಕೇಳೋ ನೈತಿಕ ಹಕ್ಕಿಲ್ಲ

By Web DeskFirst Published Oct 28, 2018, 11:20 AM IST
Highlights

ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಆರ್. ಅಶೋಕ್ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ನನ್ನ ವಿರುದ್ಧ ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಗೆ ಮಾತ್ರ ಸೀಮಿತ ಎಂದು ರಾಜ್ಯದ ಉದ್ದಗಲಕ್ಕೂ ಇಲ್ಲ ಸಲ್ಲದ ಆರೋಪ ಮಾಡಿದ್ದರು. ಈಗ ಜಿಲ್ಲೆಯಲ್ಲಿ ಮತ ಯಾಚನೆ ಮಾಡಲು ಇಲ್ಲಿಗೆ ಬಂದಿದ್ದಾರೆ. ಇವರಿಗೆ ನಾಚಿಕೆಯಾಗಬೇಕು - ಹೆಚ್.ಡಿ.ಕುಮಾರಸ್ವಾಮಿ

ಮಂಡ್ಯ[ಅ.28]: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ನಲ್ಲಿ ಶ್ರೀರಂಗಪಟ್ಟಣ ಸೇರಿದಂತೆ ಮಂಡ್ಯ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದಾಗ ರಾಜ್ಯ ಬಿಜೆಪಿ ನಾಯಕರು ಮಂಡ್ಯಕ್ಕೆ ಮಾತ್ರ ಸೀಮಿತವಾದ ಬಜೆಟ್ ಎಂದು ಟೀಕಿಸಿ ಈಗ ಜಿಲ್ಲೆಗೆ ಬಂದು ಮತ ಕೇಳುವ ನೈತಿಕ ಹಕ್ಕು ಇದೆಯೇ ಎಂದು ಸಿಎಂ ಎಚ್ .ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿ, ಬಜೆಟ್‌ನಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಹಾಗೂ ಗಾಮನಹಳ್ಳಿ ಗ್ರಾಮದ ಬಹುಜನ ಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಮಂಡ್ಯ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿದ್ದೆ ಅಷ್ಟೆ ಎಂದರು.

ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಆರ್. ಅಶೋಕ್ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ನನ್ನ ವಿರುದ್ಧ ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಗೆ ಮಾತ್ರ ಸೀಮಿತ ಎಂದು ರಾಜ್ಯದ ಉದ್ದಗಲಕ್ಕೂ ಇಲ್ಲ ಸಲ್ಲದ ಆರೋಪ ಮಾಡಿದ್ದರು. ಈಗ ಜಿಲ್ಲೆಯಲ್ಲಿ ಮತ ಯಾಚನೆ ಮಾಡಲು ಇಲ್ಲಿಗೆ ಬಂದಿದ್ದಾರೆ. ಇವರಿಗೆ ನಾಚಿಕೆಯಾಗಬೇಕು ಎಂದು ಹೇಳಿದರು.

ಶ್ರೀರಂಗಪಟ್ಟಣವನ್ನು ನಗರ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ 15 ಕೋಟಿ ರು. ಬಿಡಿಗಡೆ ಮಾಡಿದ್ದೇನೆ. 1610ರಲ್ಲಿ ದಸರಾ ಪರಂಪರೆ ಆರಂಭವಾಗಿದೆ. ಶ್ರೀರಂಗಪಟ್ಟಣದಲ್ಲಿ ಗತವೈಭವ ಮರುಕಳಿಸುವ ನಿಟ್ಟಿನಲ್ಲಿ ನೀತಿ ಸಂಹಿತೆ ಇದ್ದರೂ ಸಹ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಅದೂಟಛಿರಿಯಾಗಿ ನಡೆದಿದೆ ಎಂದರು.

ಮೈಸೂರು ದಸರಾ ಮಾದರಿಯಲ್ಲೇ ದಸರಾ ಆಚರಣೆ: ಮುಂದಿನ ವರ್ಷದ ದಸರಾ ಆಚರಣೆಯನ್ನು ಮೈಸೂರು ದಸರಾ ಮಾದರಿಯಲ್ಲೇ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು, ಜೊತೆಗೆ ತಾಲೂಕಿನ ಕೆಆರ್‌ಎಸ್‌ನಲ್ಲಿ ಡಿಸ್ನಿ ಲ್ಯಾಂಡ್ ಮಾದರಿ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಅಭಿವೃದ್ಧಿ ಪಡಿಸುವ ಜೊತೆಗೆ ಪ್ರವಾಸಿಗರನ್ನು ಆಕರ್ಷಿಸಿ ಸುಮಾರು 20 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಮೂಲಕ ಪಟ್ಟಣವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಈ ಹಿಂದೆ ನಾನು ಚುನಾವಣೆ ಪ್ರಚಾರಕ್ಕೆ ಬಂದ ವೇಳೆ ನಿಮಗೆ ಕೊಟ್ಟಿರುವ ಭರವಸೆಯಂತೆ ನಿಮ್ಮ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಒಂದು ದಿನ ನಿಮ್ಮ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡುತ್ತೇನೆ ಎಂದು ಭರವಸೆ ನೀಡಿದರು.

ಮುಂದಿನ 5 ವರ್ಷ ಪೂರ್ಣಗೊಳ್ಳುವಷ್ಟರಲ್ಲಿ ರಾಜ್ಯದ ಎಲ್ಲಾ ರೈತರು ಹಾಗೂ ಜನರು ನೆಮ್ಮದಿಯಿಂದ ಬದುಕುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸುತ್ತಿದ್ದೇನೆ. ಅನ್ನಭಾಗ್ಯ ಯೋಜನೆಗೆ ರಾಜ್ಯದ ಜನರಿಗೆ ನೀಡುತ್ತಿರುವ ಅಕ್ಕಿಯನ್ನು ಚತ್ತೀಸ್‌ಘಡ್‌ನಿಂದ ತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ರೈತರು ಬೆಳೆದಿರುವ ಭತ್ತವನ್ನು ಖರೀದಿ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ಮುಂದಿನ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ 10 ಲಕ್ಷ ರೈತರ ಸಮಾವೇಶ ಮಾಡಲು ತೀರ್ಮಾನಿಸಿದ್ದೇನೆ. ರೈತ ಉಳಿದರೆ ದೇಶ ಉಳಿದಂತೆ ಎಂಬುದಾಗಿ ನನ್ನ ತಂದೆಯಿಂದ ಪಾಠ ಕಲಿತಿದ್ದೇನೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು. ರೈತರು ನನ್ನ ಮೇಲೆ ವಿಶ್ವಾಸ ಇಟ್ಟು ರವೀಂದ್ರ ಶ್ರೀಕಂಠಯ್ಯ ಅವರಿಗೆ 45 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ನೀಡಿದ ರೀತಿಯಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್.ಆರ್.
ಶಿವರಾಮೇಗೌಡ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಡಾ.ಅನ್ನದಾನಿ, ಕೆ.ಸುರೇಶ್‌ಗೌಡ, ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಜಫ್ರುಲ್ಲಾಖಾನ್, ಅಲ್ತಾಫ್, ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್, ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಲ್ಲಾ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ತಾಲೂಕು ಅಧ್ಯಕ್ಷ ಪೈ ಮುಕುಂದ ಸೇರಿದಂತೆ ಹಲವರು ಇದ್ದರು.
 

click me!