ಮೊದಲ ಹಂತದಲ್ಲಿ ರೈತರ ಸಾಲಮನ್ನಾ

Published : Jul 05, 2018, 07:23 AM IST
ಮೊದಲ ಹಂತದಲ್ಲಿ ರೈತರ ಸಾಲಮನ್ನಾ

ಸಾರಾಂಶ

ಮೊದಲ ಹಂತದಲ್ಲಿ ರೈತರ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಬಜೆಟ್ ಮಂಡನೆ ಆಗುವವರೆಗೂ ಸುಮ್ಮನಿರಿ ಎಂದು ಬಿಜೆಪಿ ನಾಯಕರ ವಿರುದ್ಧ 

ಪರಿಷತ್ತು :  ನಿಮ್ಮಿಂದ ಹೇಳಿಸಿಕೊಂಡು ರೈತರ ಸಾಲ ಮನ್ನಾ ಮಾಡುವ ಅಗತ್ಯವಿಲ್ಲ, ಹೇಗೆ ಬಂಡವಾಳ ತರಬೇಕು ಎಂಬುದು ನಮಗೆ ಗೊತ್ತಿದೆ. ಮೊದಲ ಹಂತದಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಲು ಈಗಾಗಲೇ ನಿರ್ಧಾರ ಮಾಡಲಾಗಿದೆ. ಬಜೆಟ್‌ ಮಂಡನೆ ಆಗುವವರೆಗೂ ಶಾಂತವಾಗಿ ಕಾಯಿರಿ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಬುಧವಾರ ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಬಿಜೆಪಿ ನಾಯಕರು ಪ್ರಸ್ತಾಪಿಸಿದ ವಿಷಯಗಳಿಗೆ ಉತ್ತರಿಸಿದ ಅವರು, ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದಿರುವ ಮೈತ್ರಿ ಸರ್ಕಾರ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿಯುವುದಾಗಿ ಹೇಳುತ್ತಿದ್ದೀರಲ್ಲಾ? ಹಾಗಾದರೆ ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಐದು ವರ್ಷದ ಅಧಿಕಾರ ಪೂರೈಸುತ್ತಿದೆ. ಲೋಕಸಭಾ ಚುನಾವಣೆಗೂ ಮುನ್ನ ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಯಾವ್ಯಾವ ಭರವಸೆಗಳನ್ನು ನಿಮ್ಮ ಪ್ರಧಾನಿ ನರೇಂದ್ರ ಮೋದಿ ಈಡೇರಿಸಿದ್ದಾರೆ? ಮೋದಿ ಬಹಳ ಚೆನ್ನಾಗಿ ಮಾತನಾಡುತ್ತಾರೆ. ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಆ ನಿಟ್ಟಿನಲ್ಲಿ ಯಾವುದಾದರೂ ಪ್ರಯತ್ನಗಳಾಗಿವೆಯೇ? ನೀವು ಕೊಟ್ಟಮಾತಿನಂತೆ ನಡೆದಿಲ್ಲ ಎಂದು ನಾವೇನೂ ಬೀದಿಗಳಿಯುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ರಾಜಕೀಯವಾಗಿ ಅನುಭವ ಇಲ್ಲದಾಗಲೇ ನಿಮ್ಮೊಂದಿಗೆ ಮಾಡಿಕೊಂಡ 20:20 ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ನಾನು ನೀಡಿದ ಆಡಳಿತವನ್ನು ಜನ ಮೆಚ್ಚಿದ್ದಾರೆ. ಅಂದಿನ ನನ್ನ ನಡವಳಿಕೆ, ಆಡಳಿತದ ಕಾರ್ಯವೈಖರಿಯಿಂದಲೇ ಇಂದು ರಾಜಕಾರಣದಲ್ಲಿ ಉಳಿದುಕೊಂಡಿದ್ದೇನೆ. ಈಗ ಅನುಭವ ಇದೆ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರದ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಚರ್ಚೆಯಾದ ಮೊದಲ ವಿಷಯವೇ ‘ಸಾಲಮನ್ನಾ’ ಅಂಶ. ಮೊದಲ ಹಂತದಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಲು ಈಗಾಗಲೇ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ಚುನಾವಣೆಗೂ ಮುನ್ನ ಕೊಟ್ಟಭರವಸೆ ಈಡೇರಿಸಲಾಗದೆ ಆಡಿದ ಮಾತುಗಳು ದಾಖಲಾಗಿವೆ. ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗುತ್ತಿಲ್ಲ. ಚುನಾವಣೆಗೂ ಮೊದಲು ಎಲ್ಲ ಪಕ್ಷಗಳಂತೆ ನಾನೂ ಭರವಸೆ ನೀಡಿದ್ದೆ. ಆದರೆ, ಈಗ ತಿಳಿಯುತ್ತಿದೆ ಎಂದು ಹೇಳಿದ್ದರು. ಆ ರೀತಿ ನಾನು ಮಾತನಾಡುವುದಿಲ್ಲ. ರೈತರ ಅಭಿವೃದ್ಧಿಯೇ ಮೈತ್ರಿ ಸರ್ಕಾರದ ಗುರಿ. ಮೈತ್ರಿ ಪಕ್ಷಗಳ ಎರಡೂ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಸೇರಿಸಿ ಬಜೆಟ್‌ ಮಾಡಲೆಂದೇ ಕನಿಷ್ಠ ಕಾರ್ಯಕ್ರಮ ಅನುಷ್ಠಾನ ಸಮಿತಿ ರಚಿಸಿರುವುದು. ಎರಡೂ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಈಡೇರಿಸಲು ಸಮ್ಮಿಶ್ರ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಸಿದ್ದು ಅವರಿಂದಲೇ ಸರ್ಕಾರ ಉಳಿಯುತ್ತೆ!

ಮುಂದೆಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಸರ್ಕಾರ ಉಳಿಯುತ್ತೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದೇ ವೇಳೆ ಹೇಳಿದರು.

ಅಲ್ಲೆಲ್ಲೋ ಶಾಂತಿವನದಲ್ಲಿ ಕೂತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ ಬಗ್ಗೆ ದೊಡ್ಡದಾಗಿ ಮಾತನಾಡುತ್ತೀರಿ. ಅದು ಅವರ ಮನಸ್ಸಿನ ಮಾತುಗಳಲ್ಲ. ಅವರಿಂದಲೇ ಮೈತ್ರಿ ಸರ್ಕಾರ ಮುಂದಕ್ಕೂ ಉಳಿದುಕೊಂಡು ಹೋಗುತ್ತದೆ ಎಂದು ಇದೇ ವೇಳೆ ಅವರು ಹೇಳಿದರು.

ನಾನು ಸಾಂದರ್ಭಿಕ ಶಿಶು ಎಂದು ಹೇಳಿದ ಮಾತ್ರಕ್ಕೆ ಅಪ್ಪ ಅಮ್ಮ ಇಲ್ಲದ ಕೂಸು ಎಂದರ್ಥವಲ್ಲ. ಜೆಡಿಎಸ್‌, ಕಾಂಗ್ರೆಸ್‌ ಶಾಸಕರೇ ನನಗೆ ಇಲ್ಲಿ ಅಪ್ಪ ಅಮ್ಮನ ಸ್ಥಾನದಲ್ಲಿದ್ದಾರೆ. ಇದು 37 ಶಾಸಕರ ಸರ್ಕಾರ ಅಲ್ಲ, 120 ಶಾಸಕರ ಸರ್ಕಾರ. ಒಂದು ವರ್ಷ ನನ್ನನ್ನು ಟಚ್‌ ಮಾಡಲಾಗಲ್ಲ ಎಂದರೆ ಆ ನಂತರ ಅಧಿಕಾರ ಇರಲ್ಲ ಎಂದಲ್ಲ. ಮೈತ್ರಿ ಸರ್ಕಾರದ ಪ್ರತಿಯೊಬ್ಬರೂ ಐದು ವರ್ಷ ಇರಬೇಕು ಎಂದೇ ಬಯಸುತ್ತಾರೆ. ಕಾಂಗ್ರೆಸ್‌ ಶಾಸಕರನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದು ನನಗೆ ಗೊತ್ತಿದೆ. ಎರಡೂ ಪಕ್ಷಗಳಿಗೆ ಅಭಿವೃದ್ಧಿ ಮುಖ್ಯ. ಸಿದ್ದರಾಮಯ್ಯ ಅವರಿಂದಲೇ ಸರ್ಕಾರ ಮುಂದೆಯೂ ಉಳಿಯುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!