ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಸಿಎಂ ಮಾತುಕತೆ

By Web DeskFirst Published Jun 16, 2019, 8:45 AM IST
Highlights

ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ.

ನವದೆಹಲಿ (ಜೂ.16) : ಶೇ.45ರಷ್ಟುಮಳೆ ಕೊರತೆಯಿಂದಾಗಿ ತೀವ್ರ ಬರಗಾಲಕ್ಕೆ ಸಿಲುಕಿರುವ ಕರ್ನಾಟಕಕ್ಕೆ ಕೇಂದ್ರೀಯ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕೋರಿದ್ದಾರೆ.

ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದ ಅವರು ಶನಿವಾರ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಕ್ಕೆ ಬರಬೇಕಿರುವ ಬಾಕಿ ಮೊತ್ತ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ತಮ್ಮ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಜಾರಿಗೆ ತಂದಿರುವ ಸಾಲ ಮನ್ನಾ ಯೋಜನೆ ಯಶಸ್ವಿಯಾಗಿರುವ ಮಾಹಿತಿಯನ್ನು ಹಂಚಿಕೊಂಡರು. ಮತ್ತೊಂದು ಅವಧಿಗೆ ಪುನರಾಯ್ಕೆಯಾಗಿರುವ ಮೋದಿ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

ಮಳೆ ಕೊರತೆಯಿಂದ ರಾಜ್ಯಕ್ಕೆ ಬರಗಾಲ ಎದುರಾಗಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಕರ್ನಾಟಕದ ಸಹಾಯಕ್ಕೆ ಬರಬೇಕು ಎಂದು ಕೋರಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ 1500 ಕೋಟಿ ರು. ಬಾಕಿ ಬರಬೇಕಿದೆ. ಅದನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಸಾಲ ಮನ್ನಾ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ, ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗಿದೆ. ರಾಜ್ಯದ ವಾಣಿಜ್ಯ ಬ್ಯಾಂಕುಗಳ 9 ಲಕ್ಷ ಹಾಗೂ ಸಹಕಾರಿ ಬ್ಯಾಂಕುಗಳ 14 ಲಕ್ಷ ಫಲಾನುಭವಿಗಳ ಒಟ್ಟು 12830 ಕೋಟಿ ರು. ಬೆಳೆ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಹಿಂಗಾರು ಹಂಗಾಮಿನಲ್ಲಿ ಬೆಳೆ ನಷ್ಟವಾಗಿದ್ದು, 2064 ಕೋಟಿ ರು. ಪರಿಹಾರ ನೀಡಬೇಕು ಎಂದು ಲೋಕಸಭೆ ಚುನಾವಣೆ ಪೂರ್ವದಲ್ಲಿ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. 30 ಜಿಲ್ಲೆಗಳ 156 ತಾಲೂಕುಗಳನ್ನು ಕರ್ನಾಟಕ ಬರಪೀಡಿತ ಎಂದು ಘೋಷಣೆ ಮಾಡಿದೆ. ಈ ಪೈಕಿ 107 ತಾಲೂಕುಗಳಲ್ಲಿ ಗಂಭೀರ ಪ್ರಮಾಣದ ಬರ ಪರಿಸ್ಥಿತಿ ಇದ್ದರೆ, 49 ತಾಲೂಕುಗಳಲ್ಲಿ ಸಾಧಾರಣ ಬರ ಇದೆ. 20.40 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಗೆ ಬರದಿಂದ ಹಾನಿಯಾಗಿದೆ. 19.46 ಲಕ್ಷ ಹೆಕ್ಟೇರ್‌ನಷ್ಟುಬೆಳೆ ನಷ್ಟವಾಗಿದೆ ಎಂದು ಕರ್ನಾಟಕ ತಿಳಿಸಿತ್ತು.

click me!